ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಭಾಷೆ ಬಳಕೆಯನ್ನು ಪ್ರತಿಪಾದಿಸಿದ್ದ ಗಾಂಧೀಜಿ : ವೇಮಗಲ್ ಸೋಮಶೇಖರ್

ಗಾಂಧಿವಾದಿ ವೇಮಗಲ್ ಸೋಮಶೇಖರ್ ಅವರಿಂದ ಪ್ರಚಾರೋಪನ್ಯಾಸ
Last Updated 28 ನವೆಂಬರ್ 2019, 10:00 IST
ಅಕ್ಷರ ಗಾತ್ರ

ಮೈಸೂರು: ಮಹಾತ್ಮ ಗಾಂಧಿ ಅವರು ಮಾತೃಭಾಷೆ ಬಳಕೆಯನ್ನು ಪ್ರತಿಪಾದಿಸಿದ್ದರು ಎಂದು ಹಿರಿಯ ಗಾಂಧಿವಾದಿ ವೇಮಗಲ್ ಸೋಮಶೇಖರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಪ್ರಸಾರಾಂಗವು ಇಲ್ಲಿ ಗುರುವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ಕುರಿತ ಪ್ರಚಾರೋಪನ್ಯಾಸದಲ್ಲಿ ಅವರು ‘ಗಾಂಧೀಜಿ ಮತ್ತು ಯುವಶಕ್ತಿ’ ಕುರಿತು ಮಾತನಾಡಿದರು.

ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಾಗ ಅವರನ್ನು ಪತ್ರಕರ್ತನೊಬ್ಬ ಇಂಗ್ಲಿಷ್‌ನಲ್ಲಿ ಪ್ರಶ್ನಿಸಿದ. ಅದಕ್ಕೆ ಗಾಂಧೀಜಿ ಕೋಪಗೊಂಡು ‘ನನ್ನ ಮತ್ತು ನಿನ್ನ ಮಾತೃಭಾಷೆ ಗುಜರಾತಿ. ಈ ಭಾಷೆಯಲ್ಲಿ ಪ್ರಶ್ನೆ ಕೇಳದೇ ನಾವು ಯಾರನ್ನು ಈ ದೇಶದಿಂದ ಓಡಿಸಬೇಕು ಎಂದು ಕೊಂಡಿದ್ದೆವೊ ಅವರ ಭಾಷೆಯನ್ನು ಬಳಸುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದರು. ಇದು ಅಂದು ಬಹಳ ದೊಡ್ಡ ಸುದ್ದಿಯಾಗಿತ್ತು ಎಂದು ಅವರು ಹೇಳಿದರು.

ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ‘ಎಂ.ಕೆ.ಗಾಂಧಿ’ ಎಂದು ಕನ್ನಡದಲ್ಲಿ ಸಹಿ ಮಾಡುವುದನ್ನು ಕೇವಲ ಮೂರೇ ದಿನಗಳಲ್ಲಿ ಕಲಿತರು. ಇಲ್ಲಿ ಅವರು ಕನ್ನಡ ಭಾಷೆಯಲ್ಲೇ ಹಸ್ತಾಕ್ಷರ ನೀಡಿದ್ದನ್ನು ಕಂಡು ಹಲವು ಮಂದಿ ಚಕಿತಗೊಂಡಿದ್ದರು. ಇದು ಅವರು ರಾಜ್ಯ ಭಾಷೆಗಳಿಗೆ ಕೊಡುತ್ತಿದ್ದ ಗೌರವವಾಗಿತ್ತು ಎಂದು ತಿಳಿಸಿದರು.

‘ಮಿಸ್ಟರ್’ ಎಂಬ ಪದ ಬಳಕೆ ಗುಲಾಮಗಿರಿಯ ಸಂಕೇತ ಎಂದು ಹೇಳುತ್ತಿದ್ದ ಅವರು ಎಲ್ಲರಿಗೂ ಅವರ ಹೆಸರಿನ ಹಿಂದೆ ‘ಶ್ರೀ’ ಹಾಗೂ ‘ಶ್ರೀಮತಿ’ ಎಂದೇ ಬರೆಯುತ್ತಿದ್ದರು. ‘ಶ್ರೀ’ ಎಂಬ ಪದ ಬಳಕೆ ಮಹಮ್ಮದ್ ಅಲಿ ಜಿನ್ನಾ ಅವರಿಗೆ ಕೋಪವನ್ನೂ ತರಿಸಿತ್ತು ಎಂದು ಅವರು ಮೆಲುಕು ಹಾಕಿದರು.

ಜೋಹಾನ್ಸ್‌ಬರ್ಗ್‌ನ ಜೈಲಿನಲ್ಲಿದ್ದಾಗ ಜೈಲಿನ ತಪಾಸಣೆಗೆಂದು ಬಂದ ಬ್ರಿಟಿಷ್ ಅಧಿಕಾರಿಯೊಬ್ಬರು ಗಾಂಧೀಜಿ ಅವರನ್ನು ಏನಾದರೂ ತೊಂದರೆ ಇದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಅವರು ಇಲ್ಲಿ ‘ನನಗೆ ಸಾಕಾಗುಷ್ಟು ಕೆಲಸ ದೊರೆಯುತ್ತಿಲ್ಲ. ಮತ್ತಷ್ಟು ಕೆಲಸ ಇದ್ದರೆ ಕೊಡಿ. ಕೆಲಸ ಮಾಡದಿದ್ದರೆ ನನ್ನ ಜೀವನಶಕ್ತಿ ಬತ್ತಿ ಹೋಗುತ್ತದೆ’ ಎಂದಿದ್ದರು. ಇವರ ಮಾತು, ನಡೆಗಳನ್ನು ನಾವಿಂದು ಅನುಸರಿಸಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT