ಪೌರಕಾರ್ಮಿಕರ ಪ್ರತಿಭಟನೆ: ಜಗ್ಗದ ಜಿಲ್ಲಾಡಳಿತ; ಗಬ್ಬು ನಾರುತ್ತಿರುವ ನಗರ

7
2ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ; ಸುಳಿಯದ ಅಧಿಕಾರಿಗಳು

ಪೌರಕಾರ್ಮಿಕರ ಪ್ರತಿಭಟನೆ: ಜಗ್ಗದ ಜಿಲ್ಲಾಡಳಿತ; ಗಬ್ಬು ನಾರುತ್ತಿರುವ ನಗರ

Published:
Updated:
Deccan Herald

ಮೈಸೂರು: ಪಾಲಿಕೆಯ ಎರಡು ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿ ಒಂದು ದಿನ ಕಳೆದರೂ ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ ಇತ್ತ ಗಮನ ಹರಿಸಿಲ್ಲ. ಇದರ ಪರಿಣಾಮವಾಗಿ ನಗರದ ಬಹುತೇಕ ಕಡೆ ಕಸದ ಗುಡ್ಡೆಗಳೆ ನಿರ್ಮಾಣವಾಗಿದ್ದು, ಸಾಂಕ್ರಮಿಕ ರೋಗದ ಭೀತಿಯನ್ನು ಸೃಷ್ಟಿಸಿದೆ.

ಮುಖ್ಯವಾಗಿ ದೇವರಾಜ ಮಾರುಕಟ್ಟೆಯ ಹಿಂಭಾಗವಂತೂ ನಡೆದಾಡಲು ಸಾಧ್ಯವಾಗದಂತಹ ಅಸಹನೀಯ ಸ್ಥಿತಿ ಸೃಷ್ಟಿಯಾಗಿದೆ. ತರಕಾರಿ, ಹಣ್ಣುಗಳ ಹಸಿ ತ್ಯಾಜ್ಯ ಈಗಾಗಲೇ ಕೊಳೆಯಲು ಆರಂಭಿಸಿದೆ.

ಮಾಂಸದಂಗಡಿಗಳ ತ್ಯಾಜ್ಯಗಳು ದುರ್ನಾತ ಬೀರಲಾರಂಭಿಸಿವೆ. ಹೋಟೆಲ್ ಉದ್ಯಮದವರು ಕಸ ವಿಲೇವಾರಿಯಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಬೈಲ್ ಕ್ಯಾಂಟೀನ್‌ನವರು ನಿತ್ಯ ಕಸ ಸುರಿಯುತ್ತಿದ್ದ ಸ್ಥಳಗಳಲ್ಲಿ ಓಡಾಡಲು ಆಗದ ಸ್ಥಿತಿ ಸೃಷ್ಟಿಯಾಗಿದೆ.

ಕಂಟೇನರ್‌ಗಳು ತುಂಬಿ ಹೋಗಿವೆ. ಇದರ ಸುತ್ತಲೂ ಕಸ ರಾಶಿ ರಾಶಿಯಾಗಿ ಬಿದ್ದಿದೆ. ಹಸು, ಕರುಗಳು, ನಾಯಿಗಳು ಈ ಕಸವನ್ನು ತಿನ್ನುತ್ತಾ ಇದು ಹರಡಲು ಮತ್ತಷ್ಟು ಕಾರಣವಾಗಿದೆ. ‌

ಮನೆಮನೆಗಳಲ್ಲಿ ಕಸದ ಡಬ್ಬಿಗಳು ತುಂಬಿ ಹೋಗಿವೆ. ಕೆಲವರು ಇವುಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿ ರಸ್ತೆ ಬದಿಗಳಲ್ಲಿ ಬಿಸಾಡುತ್ತಿದ್ದಾರೆ. ಇದರಿಂದ ಕಸದ ರಾಶಿಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳೇ ಹೆಚ್ಚಾಗಿ ಕಂಡು ಬರುತ್ತಿವೆ.

ಗುರುವಾರವೂ ಮಳೆಯಾಗಿರುವುದು ಕಸ ಕೊಳೆಯಲು ಪ್ರಧಾನ ಕಾರಣವಾಗಿದೆ. ಹಸಿ ತ್ಯಾಜ್ಯವಂತೂ ಸೊಳ್ಳೆ, ನೊಣಗಳ ಆವಾಸಸ್ಥಾನವಾಗಿ ಮಾರ್ಪಟ್ಟಾಗಿದೆ. ಮತ್ತೆರಡು ದಿನಗಳು ಕಳೆದರೆ ಸಾಂಕ್ರಮಿಕ ರೋಗಗಳು ಆರಂಭವಾಗುವ ಸಾಧ್ಯತೆ ಇದೆ.

ಇದೀಗ ಕೆಲವು ಹೋಟೆಲ್‌ನವರೂ ಕಸವನ್ನು ಆಯಾಕಟ್ಟಿನ ಜಾಗಗಳಲ್ಲಿ ಎಸೆಯಲು ಆರಂಭಿಸಿದ್ದಾರೆ. ತಿಂದುಳಿದ ಆಹಾರವಂತೂ ದುರ್ವಾಸನೆ ಬೀರಲಾರಂಭಿಸಿದೆ. ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.

ಒಳಚರಂಡಿ ಕಟ್ಟಿಕೊಂಡರಂತೂ ಅದನ್ನು ತೆರವುಗೊಳಿಸಲು ಕಾರ್ಮಿಕರು ಲಭ್ಯವಾಗುತ್ತಿಲ್ಲ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !