ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸೇವೆಗೆ ಸಿದ್ಧರಾದ ಪದವೀಧರರು

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 93ನೇ ಘಟಿಕೋತ್ಸವ
Last Updated 15 ಮೇ 2022, 9:38 IST
ಅಕ್ಷರ ಗಾತ್ರ

ಮೈಸೂರು: ವೈದ್ಯಕೀಯ ಸೇವೆ ಮಾಡುವ ಅದಮ್ಯ ಆಸೆ, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಅದು ಸಂಭ್ರಮದ ಗಳಿಗೆ. ಎಂಬಿಬಿಎಸ್‌ ಪದವೀಧರರಾದ ಖುಷಿ. ಗೌನು ತೊಟ್ಟ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ. ಸಾಧನೆಯ ಒಂದು ಮೆಟ್ಟಿಲು ಏರಿದ ಸಾರ್ಥಕ ಭಾವ. ಮಕ್ಕಳ ಈ ಸಾಧನೆ ಕಂಡ ಪೋಷಕರಲ್ಲಿ ನಿರಾಳ, ನೆಮ್ಮದಿ ಭಾವ...

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ 93ನೇ ಘಟಿಕೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.

ವೈದ್ಯಕೀಯ ಪದವಿ ಪೂರೈಸಿರುವ 150 ವಿದ್ಯಾರ್ಥಿಗಳಿಗೆ ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಪದವಿ ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ಪ್ರದಾನ ಮಾಡಿದರು.

ಶರೀರಶಾಸ್ತ್ರ, ರೋಗಶಾಸ್ತ್ರ, ಶಿಶುವೈದ್ಯ ಶಾಸ್ತ್ರ ವಿಭಾಗದಲ್ಲಿ ಡಾ.ಗಾಯತ್ರಿ ಕೃಷ್ಣನ್‌, ಜೀವರಸಾಯನ ವಿಜ್ಞಾನ, ಸೂಕ್ಷ್ಮ ಜೀವವಿಜ್ಞಾನ, ಪಿಎಸ್‌ಎಂ,ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಡಾ.ರಯಾನ್, ನೇತ್ರವಿಜ್ಞಾನ, ಔಷಧ,ಪ್ರಸೂತಿ– ಸ್ತ್ರೀರೋಗತಜ್ಞ ವಿಭಾಗದಲ್ಲಿ ಡಾ.ಸಂದೀಪ್‌, ಅಂಗರಚನಾಶಾಸ್ತ್ರ,ಔಷಧಿಶಾಸ್ತ್ರ ವಿಭಾಗದಲ್ಲಿ ಡಾ.ಸೃಷ್ಟಿ, ಇಎನ್‌ಟಿ ವಿಭಾಗದಲ್ಲಿ ಡಾ.ದಿವ್ಯಶ್ರೀ, ವಿಧಿವಿಜ್ಞಾನ ವಿಭಾಗದಲ್ಲಿ ಡಾ.ಸಂಜಯ್‌ ಅವರಿಗೆ ದತ್ತಿ ಬಹುಮಾನ ನೀಡಲಾಯಿತು. ಡಾ.ಸಂದೀಪ್‌ ಹಾಗೂ ಡಾ.ಸೃಷ್ಟಿ ಟಾಪರ್‌ಗಳಾಗಿದ್ದಾರೆ.

ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದ ಎ.ವಿ.ರಾಹುಲ್‌, ದಿಗ್ವಿಜಯ್‌, ವಿ.ಎಚ್‌.ಮನೋಜ್‌, ಡಿ.ಪೂರ್ಣಿಮಾ, ಸಿ.ಎಲ್‌.ಗೌತಮ್‌, ಅಭಿರಾಮ್‌, ಎಂ.ಅರ್ಜುನ್‌ ಅವರಿಗೆ ಬಹುಮಾನ ವಿತರಿಸಲಾಯಿತು.

ಘಟಿಕೋತ್ಸವ ಭಾಷಣ ಮಾಡಿದ ಸುಧಾ ಮೂರ್ತಿ, ‘ನನ್ನ ಅಪ್ಪ ವೈದ್ಯರಾಗಿದ್ದರು. ನನ್ನ ದೇವರು ಗುಡಿ, ಚರ್ಚ್‌, ಮಸೀದಿಯಲ್ಲಿಲ್ಲ. ರೋಗಿಗಳಲ್ಲಿ ದೇವರನ್ನು ಕಾಣುತ್ತೇನೆ ಎಂದು ಅಪ್ಪ ಹೇಳುತ್ತಿದ್ದರು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಜೀವವನ್ನು ಉಳಿಸುವುದೇ ನಿಜವಾದ ವೈದ್ಯನ ಕರ್ತವ್ಯ’ ಎಂದರು.

‘ಹಣ ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು. ಆದರೆ, ಆರೋಗ್ಯ ಕ್ಷೀಣಿಸಿದರೆ ವ್ಯಕ್ತಿ ಅಧೀರನಾಗುತ್ತಾನೆ, ಅಧೈರ್ಯಗೊಳ್ಳು‌ತ್ತಾನೆ. ಹೀಗಾಗಿ, ರೋಗಿಗೆ ವೈದ್ಯರೇ ದೇವರು’ ಎಂದು ಹೇಳಿದರು.

‘ನಿಮಗೆ ಒಳ್ಳೆಯ ವೃತ್ತಿ ಸಿಕ್ಕಿದೆ. ಅದನ್ನು ಹಾಳು ಮಾಡಿಕೊಳ್ಳಬೇಡಿ. ಹಣ ಗಳಿಕೆಯೇ ನಿಮ್ಮ ಉದ್ದೇಶವಾಗಬಾರದು. ಬಡವರಿಗೆ, ಅಸಹಾಯಕರಿಗೆ ಕೈಲಾದ ಸಹಾಯ ಮಾಡಬೇಕು’ ಎಂದು ಪದವೀಧರರಿಗೆ ಸಲಹೆ ನೀಡಿದರು.‌

‘ಯಾವುದೇ ವೈದ್ಯಕೀಯ ಕಾಲೇಜಿನಲ್ಲಿ ಬೃಹತ್‌ ಕಟ್ಟಡ ನಿರ್ಮಿಸುವುದೇ ಗುರಿಯಾಗಬಾರದು. ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಬೇಕು’ ಎಂದು ಹೇಳಿದರು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಕೆ.ಆರ್‌.ದಾಕ್ಷಾಯಣಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ.ಶೇಖರ್‌, ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್‌.ಚಂದ್ರಶೇಖರ್‌ ಶೆಟ್ಟಿ, ಸಂಸ್ಥೆಯ ಡೀನ್‌ ಡಾ.ಎಚ್‌.ಎನ್‌.ದಿನೇಶ್‌, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಎಸ್‌. ಚಂದ್ರಶೇಖರ್‌, ಕಾರ್ಯದರ್ಶಿ ಡಾ.ಎಚ್‌.ಬಿ.ಶಶಿಧರ್‌ ಇದ್ದರು.

***

ವೈದ್ಯ–ರೋಗಿಯ ಸಂಬಂಧ ಕ್ಷೀಣಿಸುತ್ತಿದೆ. ಜೀವದಾನ ಮಾಡುವುದು ವೈದ್ಯನ ಕರ್ತವ್ಯ. ಜೀವ ತೆಗೆಯುವುದಲ್ಲ.
- ಸುಧಾ ಮೂರ್ತಿ, ಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT