ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಚಳವಳಿ ಧ್ವನಿಗಾಗಿ ಪ್ರಸನ್ನಗೆ ಬೆಂಬಲ: ಎಚ್‌.ಬಿ. ರಾಮಕೃಷ್ಣ

Last Updated 10 ಜೂನ್ 2022, 10:31 IST
ಅಕ್ಷರ ಗಾತ್ರ

ಮೈಸೂರು: ‘ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಸನ್ನ ಎನ್. ಗೌಡ ಅವರನ್ನು, ಸದನದಲ್ಲಿ ಜನ ಚಳವಳಿಗಳ ಧ್ವನಿಗಾಗಿ ಬೆಂಬಲಿಸಬೇಕು’ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಜಿಲ್ಲಾ ಸಮಿತಿ ಕಾರ್ಯದರ್ಶಿ ಎಚ್‌.ಬಿ. ರಾಮಕೃಷ್ಣ ಕೋರಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ತಳಮಟ್ಟದಲ್ಲಿ ಕೋಮುವಾದದ ವಿರುದ್ಧ ಜಾತ್ಯತೀತ ಪರ್ಯಾಯವನ್ನು ಬಲಗೊಳಿಸಲು ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಲು ಸಿಪಿಐ ಮತ್ತು ಸಿಪಿಐ(ಎಂ) ಜಿಲ್ಲಾ ಸಮಿತಿಗಳು ತೀರ್ಮಾನಿಸಿವೆ. ಅವರ ಗೆಲುವಿಗೆ ಶ್ರಮಿಸಲಿವೆ’ ಎಂದರು.

‘ಸೌಹಾರ್ದ ಕರ್ನಾಟಕವನ್ನು ಕೋಮುವಾದದ ಪ್ರಯೋಗಶಾಲೆಯಾಗಿಸಲು ಹೊರಟಿರುವ, ಸಂವಿಧಾನದ ಮೌಲ್ಯಗಳನ್ನು ಬುಡಮೇಲು ಮಾಡುತ್ತಿರುವ ಬಿಜೆಪಿಯ ಸೋಲನ್ನು ಖಾತ್ರಿಪಡಿಸಲು ಮತದಾರರು ಮುಂದಾಗಬೇಕು’ ಎಂದು ಕೋರಿದರು.

‘ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ, ಅದಕ್ಷತೆಯು ಈ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ಬೆಲೆ ಏರಿಕೆ ತಡೆಗೆ ಯಾವುದೇ ಪರಿಹಾರ ರೂಪಿಸದ ಬಿಜೆಪಿ ಸರ್ಕಾರವು ಪದವೀಧರರನ್ನು ನಿರ್ಲಕ್ಷಿಸಿ ಬೀದಿಪಾಲು ಮಾಡಿದೆ. ಶಿಕ್ಷಕರು ಸೇರಿದಂತೆ ಎಲ್ಲ ಹುದ್ದೆಗಳನ್ನೂ ಗುತ್ತಿಗೆ ಹೆಸರಿನಲ್ಲಿ ನೇಮಿಸಿಕೊಂಡು ಮೂರು ಕಾಸಿಗೆ ದುಡಿಸಿಕೊಳ್ಳುತ್ತಿದೆ. ಇವುಗಳ ಬಗ್ಗೆ ಮಾತನಾಡದಂತೆ ಯುವಜನರಿಗೆ ಕೋಮುವಾದದ ಅಮಲು ಬರಿಸುವ ಕೆಲಸದಲ್ಲಿ ತೊಡಗಿದೆ’ ಎಂದು ಆರೋಪಿಸಿದರು.

‘ಸಂವಿಧಾನಬದ್ಧವಾಗಿ ನಡೆಯಬೇಕಾದ ಸರ್ಕಾರ ಎಲ್ಲ ಹಂತದ ಆಡಳಿತವನ್ನೂ ಸಂಘ ಪರಿವಾರಕ್ಕೆ ವಹಿಸಿದೆ. ಪಠ್ಯ ಪರಿಷ್ಕರಣೆಯ ಅನಾಹುತ–ಅವಾಂತರಗಳ ಮೂಲಕ ಉದ್ದೇಶಪೂರ್ವಕವಾಗಿ ಕುವೆಂಪು, ಅಂಬೇಡ್ಕರ್‌, ಬಸವಣ್ಣ ಮೊದಲಾದ ಆದರ್ಶ ವ್ಯಕ್ತಿಗಳಿಗೆ ಅವಮಾನ ಮಾಡಲಾಗಿದೆ. ಪಿಎಸ್‌ಐ ಸೇರಿದಂತೆ ಎಲ್ಲ ನೇಮಕಾತಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರದ ಮೇಲೆ ಸಂವಿಧಾನೇತರ ಶಕ್ತಿಗಳು ಸವಾರಿ ಮಾಡುತ್ತಿರುವುದು ಕಂಡುಬಂದಿದೆ’ ಎಂದು ದೂರಿದರು.

‘ಕಾಂಗ್ರೆಸ್ ಮತ್ತು ಜೆಡಿಎಸ್, ಕೋಮುವಾದಿ ಶಕ್ತಿಗಳ ಆಟಾಟೋಪ ನಿಯಂತ್ರಿಸಲು ಯಾವುದೇ ರಾಜಕೀಯ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ತಮ್ಮ ಹೊಣೆಗಾರಿಕೆ ಮರೆತು ಪರಸ್ಪರ ಕಚ್ಚಾಟದಲ್ಲಿ ತೊಡಗಿವೆ. ಕೋಮುವಾದ ಶಕ್ತಿಯನ್ನು ದೃಢವಾಗಿ ಎದುರಿಸುವ ಜವಾಬ್ದಾರಿಯನ್ನೂ ಸದನದ ಒಳಗೆ ಹಾಗೂ ಹೊರಗೆ ನಿರ್ವಹಿಸುತ್ತಿಲ್ಲ. ಹೀಗಾಗಿ, ಚಳವಳಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದೇವೆ’ ಎಂದರು.

ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಗದೀಶ ಸೂರ್ಯ, ಮುಖಂಡರಾದ ಕೆ. ಬಸವರಾಜ್, ಜಗನ್ನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT