ಪರಂಪರೆ ಸಾರುವ ಕಟ್ಟಡಗಳು

ಭಾನುವಾರ, ಏಪ್ರಿಲ್ 21, 2019
26 °C

ಪರಂಪರೆ ಸಾರುವ ಕಟ್ಟಡಗಳು

Published:
Updated:
Prajavani

ಪಾರಂಪರಿಕ ಕಟ್ಟಡಗಳ ಗಣಿ ಮೈಸೂರು. ರಾಜರು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ ನೂರಾರು ಕಟ್ಟಡಗಳನ್ನು ಮೈಸೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಮೈಸೂರನ್ನು ಪಾರಂಪರಿಕ ತಾಣವೆಂದು ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಇಲ್ಲಿರುವ ಐತಿಹಾಸಿಕ ಕಟ್ಟಡಗಳು ಆಯಾ ಕಾಲಘಟ್ಟದ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತವೆ.

ವಿಶಿಷ್ಟ ವಾಸ್ತುಶೈಲಿಯ ಭವ್ಯ ಅರಮನೆಗಳು, ಬಂಗಲೆ, ದೇವಸ್ಥಾನ, ಚರ್ಚ್, ಮಸೀದಿಗಳು ಇಲ್ಲಿವೆ. ಅವುಗಳ ಸಂರಕ್ಷಣೆಗೆ ಸಾಂಘಿಕ ಪ್ರಯತ್ನ ಮುಖ್ಯ. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಬೇಕಿದೆ. ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೂ ದಾಟಿಸಬೇಕಿದೆ.

ಮೈಸೂರಿನಲ್ಲಿ 200ಕ್ಕೂ ಹೆಚ್ಚಿನ ಪಾರಂಪರಿಕ ಕಟ್ಟಡಗಳಿವೆ. ರಾಜ್ಯ, ಕೇಂದ್ರ ಸರ್ಕಾರ, ವಿಶ್ವವಿದ್ಯಾಲಯ, ಸ್ಥಳೀಯ ಸಂಸ್ಥೆಗಳು, ಖಾಸಗಿ ಟ್ರಸ್ಟ್ ಹಾಗೂ ವೈಯಕ್ತಿಕ ಮಾಲೀಕತ್ವದಲ್ಲಿ ಈ ಕಟ್ಟಡಗಳಿವೆ. 34 ಸಾರ್ವಜನಿಕ ಕಟ್ಟಡಗಳು ರಾಜ್ಯ ಸರ್ಕಾರದ ಅಧೀನದಲ್ಲಿದ್ದು, ಲೋಕೋಪಯೋಗಿ ಇಲಾಖೆಯು ನಿರ್ವಹಣೆ ಮಾಡುತ್ತಿದೆ. ಇದರಲ್ಲಿ ಪ್ರಮುಖವಾಗಿ 8 ಕಟ್ಟಡಗಳು ನಾಲ್ಕು ವಾಸ್ತುಶಿಲ್ಪ ಶೈಲಿಯಲ್ಲಿದ್ದು, ಮೈಸೂರು ಅರಸರು ಹಾಗೂ ಬ್ರಿಟಿಷರು ನಿರ್ಮಿಸಿದ್ದಾರೆ. ಈ ಕಟ್ಟಡಗಳು ಇಂಡೋ- ಸಾರ್ಸೆನಿಕ್, ಹಿಂದೂ ಸಾಂಪ್ರದಾಯಿಕ, ಗ್ರೀಕೋ- ರೋಮನ್ ಹಾಗೂ ಗೋಥಿಕ್ ಶೈಲಿಗೆ ಉತ್ತಮ ಉದಾಹರಣೆ.

ಮೈಸೂರು ಅರಮನೆ: ಈ ಅರಮನೆಯನ್ನು ಇಂಡೋ- ಸಾರ್ಸೆನಿಕ್ ಶೈಲಿಯಲ್ಲಿ ಹಿಂದೂ ಹಾಗೂ ಸಾರ್ಸೆನಿಕ್ ವೈಶಿಷ್ಟ್ಯಗಳ ಸಂಯೋಜನೆ ಯೊಂದಿಗೆ 41.50 ಲಕ್ಷ ರೂಪಾಯಿ ವೆಚ್ಚದಲ್ಲಿ 1912ರಲ್ಲಿ ನಿರ್ಮಿಸಲಾಯಿತು. ಹಳೆಯ ಮರದ ಅರಮನೆಯು ಆಕಸ್ಮಿಕ ಬೆಂಕಿಗೆ ಆಹುತಿಯಾದ ನಂತರ ಹೊಸ ಅರಮನೆ ನಿರ್ಮಾಣವನ್ನು 1897ರಲ್ಲಿ ಆರಂಭಿಸಲಾಯಿತು.

ಇದರ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್. ಈ ಕಟ್ಟಡ ನಿರ್ಮಾಣದ ಎಂಜಿನಿಯರ್ ಇ.ಡಬ್ಲ್ಯು. ಫ್ರಿಚ್ಲೆ. ಮೈಸೂರು ಅರಮನೆಯು ಬೊಂಬೆ ತೊಟ್ಟಿ, ಕಲ್ಯಾಣ ಮಂಟಪ, ಅಂಬಾ ವಿಲಾಸ ದರ್ಬಾರ್ ಹಾಲ್ ಒಳಗೊಂಡಿದೆ. ಉತ್ತಮ ಕೆತ್ತನೆಗಳು, ಶಿಲ್ಪಗಳನ್ನೂ ಹೊಂದಿದೆ.

ಜಗನ್ಮೋಹನ ಅರಮನೆ: ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1861ರಲ್ಲಿ ಇದನ್ನು ನಿರ್ಮಿಸಿದರು. ಇದು ಹಿಂದೂ ಶೈಲಿಯಲ್ಲಿದೆ. ಮುಂಭಾಗದಲ್ಲಿ ದೊಡ್ಡ ಸಭಾಂಗಣವಿದ್ದು, ಇಲ್ಲಿ ಪ್ರತಿನಿಧಿಗಳ ಸಭೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಸಲಾಗುತ್ತಿತ್ತು. ಅಂಬಾ ವಿಲಾಸ ಅರಮನೆ ನಿರ್ಮಿಸುವವರೆಗೂ ರಾಜರ ಕುಟುಂಬವು ಇಲ್ಲಿ ವಾಸವಾಗಿತ್ತು. ಇಲ್ಲಿನ ಆರ್ಟ್ ಗ್ಯಾಲರಿಯಲ್ಲಿ ತಿರುವನಂತಪುರದ ಪ್ರಖ್ಯಾತ ಚಿತ್ರಕಲಾವಿದ ರಾಜ ರವಿವರ್ಮಾ ಅವರ ಪ್ರತಿಷ್ಠಿತ ವರ್ಣಚಿತ್ರಗಳ ಸಂಗ್ರಹ ಇಲ್ಲಿದೆ.

ಲಲಿತ ಮಹಲ್ ಅರಮನೆ: ಆ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಬಾಂಬೆ ಮೂಲದ ವಾಸ್ತುಶಿಲ್ತಿ ಇ.ಡಬ್ಲ್ಯು.ಫ್ರಿಚ್ಲೆ ಈ ಕಟ್ಟಡದ ವಿನ್ಯಾಸಕಾರ. 1931ರಲ್ಲಿ ಈ ಕಟ್ಟಡವನ್ನು ₹13 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಕೃಷ್ಣರಾಜ ಒಡೆಯರ್ ಅವರನ್ನು ಭೇಟಿಯಾಗಲು ಬರುತ್ತಿದ್ದ ಯುರೋಪ್ ಪ್ರವಾಸಿಗರ ಅತಿಥಿಗೃಹವಾಗಿತ್ತು. ಯುರೋಪಿಯನ್ ಶೈಲಿಯಲ್ಲಿದ್ದು, ಎರಡು ಅಂತಸ್ತಿನ ಭವ್ಯ
ಕಟ್ಟಡವಾಗಿದೆ.

ಕೆ.ಆರ್.ಆಸ್ಪತ್ರೆ: ಈ ಕಟ್ಟಡವನ್ನು ₹5 ಲಕ್ಷ ವೆಚ್ಚದಲ್ಲಿ 1918ರಲ್ಲಿ ಗ್ರೀಕೋ-ರೋಮನ್ ಶೈಲಿಯಲ್ಲಿ ನಿರ್ಮಿಸಲಾಯಿತು. ವ್ಯಾಟಿಕನ್ ಮಾದರಿ ಕೇಂದ್ರ ಗುಮ್ಮಟ ಹೊಂದಿದೆ. ಸದ್ಯ, ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿದ್ದು, ಪ್ರತಿ ದಿನ ನೂರಾರು ರೋಗಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಸೇಂಟ್ ಫಿಲೋಮಿನಾ ಚರ್ಚ್: ದೇಶದ ಅತಿದೊಡ್ಡ ಚರ್ಚ್‌ಗಳಲ್ಲಿ ಒಂದಾದ ಸೇಂಟ್ ಫಿಲೋಮಿನಾ ಚರ್ಚ್ ಅನ್ನು 1804ರಲ್ಲಿ ವಿಶಿಷ್ಟ ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಸೇಂಟ್ ಫಿಲೋಮಿನಾ ಪ್ರತಿಮೆ, ಮುಖ್ಯ ಸಭಾಂಗಣ, ವಿಶಿಷ್ಟ ವಾಸ್ತುಶಿಲ್ಪವನ್ನೂ ಹೊಂದಿದೆ. 175 ಅಡಿ ಎತ್ತರ, ಬಣ್ಣದ ಗಾಜಿನ ಕಿಟಕಿಗಳು, ಕೊರಿಂಥಿಯನ್ ಸ್ತಂಭಗಳು, ಪ್ಲಾಸ್ಟೆಡ್ ಗೂಡುಗಳನ್ನು ಹೊಂದಿದ್ದು, ಆಕರ್ಷಕವಾಗಿದೆ.

ವೆಲ್ಲಿಂಗ್ಟನ್ ಹೌಸ್: ಪ್ರಮುಖ ವ್ಯಕ್ತಿಗಳ ವಾಸದ ಉದ್ದೇಶಕ್ಕಾಗಿ ಈ ಕಟ್ಟಡವನ್ನು 1799ರಲ್ಲಿ ನಿರ್ಮಿಸಲಾಯಿತು. ಸರಳ ರಚನೆಯಿಂದ ಕೂಡಿದ್ದರೂ ದೊಡ್ಡ ಗಾತ್ರ ಕಟ್ಟಡವಾಗಿದ್ದು, ಆಯತಾಕಾರ ತೆರೆದ ಸ್ಥಳವನ್ನು ಹೊಂದಿದೆ. ಇಲ್ಲಿ ಕರ್ನಲ್ ಆರ್ಥರ್ ವೆಲ್ಲೆಸ್ಲಿ ಅವರು 1799ರಿಂದ 1801ರವರೆಗೆ ವಾಸವಾಗಿದ್ದರು.

ಚಾಮುಂಡೇಶ್ವರಿ ದೇವಸ್ಥಾನ: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನ ಸಮುದ್ರ ಮಟ್ಟದಿಂದ 3,489 ಅಡಿ ಎತ್ತರದಲ್ಲಿರುವ ಚಾಮುಂಡಿ ಬೆಟ್ಟದಲ್ಲಿ ನೆಲೆನಿಂತಿದೆ. ನಗರದಿಂದ 13 ಕಿ.ಮೀ ದೂರದಲ್ಲಿದೆ. ಪೌರಾಣಿಕ ಹಿನ್ನೆಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಎಂಬ ಕಥೆ ‘ದೇವಿ ಮಹಾತ್ಮೆ’ಯಲ್ಲಿ ವರ್ಣಿತವಾಗಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡುವ ಮುನ್ನ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ನೆರವೇರಿಸಲಾಗುತ್ತದೆ.

ನಂದಿ: ದೇಶದ ಅತಿದೊಡ್ಡ ನಂದಿ ವಿಗ್ರಹಗಳಲ್ಲಿ ಇದು ಒಂದು. ಇದು 16 ಅಡಿ ಎತ್ತರ, 25 ಅಡಿ ಉದ್ದವಿದೆ. ಇಲ್ಲಿಗೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.

ಮೈಸೂರು ಅರಮನೆ ಆವರಣದಲ್ಲಿರುವ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ, ವರಹಸ್ವಾಮಿ ದೇವಾಲಯಗಳು ಸಹ ಐತಿಹಾಸಿಕ ದೇವಾಲಯಗಳಾಗಿವೆ.

ಇದಲ್ಲದೆ, ಪುರಭವನ, ಚಿಕ್ಕ ಗಡಿಯಾರ, ದೊಡ್ಡ ಗಡಿಯಾರ, ಕೆ.ಆರ್. ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ, ಜಯಲಕ್ಷ್ಮಿ ವಾಣಿ ವಿಲಾಸ ಅರಮನೆ, ಕೇಂದ್ರ ಅಂಚೆ ಕಚೇರಿ ಸೇರಿದಂತೆ ಅನೇಕ ಪಾರಂಪರಿಕ ಕಟ್ಟಡಗಳು ನಗರದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !