ಮಂಗಳವಾರ, ನವೆಂಬರ್ 24, 2020
22 °C
ಹಿಂಪಡೆಯದಿದ್ದರೆ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟದ ಎಚ್ಚರಿಕೆ

ವಿದ್ಯುತ್‌ ದರ ಹೆಚ್ಚಳ–ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಗುರುವಾರ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಘೋಷಣೆ ಕೂಗಿದರು. ‘ಜನರ ಅಭಿಪ್ರಾಯ ಪಡೆಯದೆ ದರ ಹೆಚ್ಚಳ ಮಾಡಲಾಗಿದೆ, ಇದು ಜನ ವಿರೋಧಿ ಸರ್ಕಾರ’ ಎಂದು ದೂರಿದರು.

ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ಮಾತನಾಡಿ, ‘ರಾಜ್ಯದ ಜನರು ಹಿಂದೆಂದೂ ಕಾಣದಂಥ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದುಕು ಅಭದ್ರವಾಗಿದೆ. ಇಂಥ ಸಂದರ್ಭದಲ್ಲಿ ದಿನನಿತ್ಯದ ಬದುಕಿಗೆ ಅನಿವಾರ್ಯವಾಗಿರುವ ವಿದ್ಯುತ್ ದರವನ್ನು ಏಕಾಏಕಿ ಹೆಚ್ಚಿಸಿರುವುದು ಅಮಾನವೀಯ ನಡೆ. ಕೆಲಸವಿಲ್ಲದೇ, ಆದಾಯವಿಲ್ಲದೆ ಮತ್ತಷ್ಟು ಮನೆಗಳು ಕತ್ತಲಲ್ಲಿ ಮುಳುಗುತ್ತವೆ. ದರ ಏರಿಕೆ ನಿರ್ಧಾರ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗು ವುದು’ ಎಂದು ಎಚ್ಚರಿಸಿದರು.

ಪಕ್ಷದ ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ‘ಕೋವಿಡ್‍ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗ ಸಮಸ್ಯೆ ತಲೆದೋರಿದೆ. ದುಡಿಮೆ ಇಲ್ಲದಾಗಿದೆ. ಈ ಹಂತದಲ್ಲಿ ವಿದ್ಯುತ್‌ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರವು ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸುತ್ತಿದೆ. ಇದು ಜನವಿರೋಧಿ ಕ್ರಮ. ರಾಜ್ಯದ ಜನರ ಮೇಲೆ ನಡೆಸಿದ ಪ್ರಹಾರ’ ಎಂದು ಟೀಕಿಸಿದರು.

‘ವಿದ್ಯುತ್ ದರ ಹೆಚ್ಚಿಸುವ ಮುನ್ನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಇಆರ್‌ಸಿ ವತಿಯಿಂದ ಜನರ ಅಭಿಪ್ರಾಯ ಸಂಗ್ರಹಿಸಿ ಹೊರೆಯಾಗದ ರೀತಿಯಲ್ಲಿ 10ಪೈಸೆಯಿಂದ 15ಪೈಸೆಯವರೆಗೆ ಹೆಚ್ಚಳ ಮಾಡಲಾಗುತಿತ್ತು. ಈ ಬಾರಿ ಕೋವಿಡ್ ಇದ್ದ ಕಾರಣ ಏಳು ತಿಂಗಳಿನಿಂದ ಜನರ ಅಭಿಪ್ರಾಯ ಪಡೆದಿಲ್ಲ. ರಿಯಾಯಿತಿ ನೀಡಬೇಕಾದ ಸರ್ಕಾರವೇ ಈಗ ವಿದ್ಯುತ್ ದರವನ್ನು ದುಬಾರಿಯನ್ನಾಗಿ ಮಾಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಡಾ.ಯತೀಂದ್ರ, ಕೆಪಿಸಿಸಿ ವಕ್ತಾರ ಲಕ್ಷ್ಮಣ್‌, ನಗರ ಅಧ್ಯಕ್ಷ ಆರ್‌.ಮೂರ್ತಿ, ಮರೀಗೌಡ ಇದ್ದರು.

ಇಂದಿರಾ ಗಾಂಧಿ ಸ್ಮರಣೆ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಗುರುವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿ ಆಚರಿಸಲಾಯಿತು. ಪಕ್ಷದ ಕಚೇರಿ ಮುಂದೆ ಇಂದಿರಾ ಭಾವಚಿತ್ರ ಇರಿಸಿ, ಹೂವುಗಳಿಂದ ಸಿಂಗರಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಮುಖಂಡರು ಇಂದಿರಾ ಅವರ ಗುಣಗಾನ ಮಾಡಿದರು.

ಡಾ.ಎಚ್‌.ಸಿ.ಮಹದೇವಪ್ಪ, ಆರ್‌.ಧ್ರುವನಾರಾಯಣ, ಎಂ.ಕೆ.ಸೋಮಶೇಖರ್‌, ಶಾಸಕರಾದ ಎಚ್‌.ಪಿ.ಮಂಜುನಾಥ್‌, ಡಾ.ಯತೀಂದ್ರ, ಕೆಪಿಸಿಸಿ ವಕ್ತಾರ ಲಕ್ಷ್ಮಣ್‌, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಅಧ್ಯಕ್ಷ ಆರ್‌.ಮೂರ್ತಿ, ಮರೀಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.