ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲೂ ಅಕ್ರಮ; ರಾಜೀನಾಮೆಗೆ ಆಗ್ರಹ

ದುಬಾರಿ ಬೆಲೆಗೆ ವೈದ್ಯಕೀಯ ಉಪಕರಣಗಳ ಖರೀದಿ; ಕೆಪಿಸಿಸಿ ವಕ್ತಾರರ ಆರೋಪ
Last Updated 3 ಜುಲೈ 2020, 16:04 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್–19 ನಿರ್ವಹಣೆಗಾಗಿ ರಾಜ್ಯ ಸರ್ಕಾರ ಇದುವರೆಗೆ ವೆಚ್ಚ ಮಾಡಿರುವ ಮೊತ್ತದಲ್ಲಿ ₹ 2,200 ಕೋಟಿಯಷ್ಟು ಹಣ ದುರ್ಬಳಕೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.

ಯಾವ್ಯಾವುದಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಅಫಿಡವಿಟ್‌ಅನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ್ದು, ಅದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಅಕ್ರಮ ನಡೆದಿರುವುದು ಗೊತ್ತಾಗಿದೆ ಎಂದು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಹಾಗೂ ಕೋವಿಡ್ ಉಸ್ತುವಾರಿಗಾಗಿ ಸಚಿವರಾದ ಆರ್.ಅಶೋಕ್, ಬಿ.ಶ್ರೀರಾಮುಲು, ಕೆ.ಸುಧಾಕರ್, ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥನಾರಾಯಣ ತೀವ್ರ ಪೈಪೋಟಿ ನಡೆಸಿದ್ದರು. ಈ ಪೈಪೋಟಿ ಏಕೆ ನಡೆದಿತ್ತು ಎಂಬ ಒಳಮರ್ಮ ಇದೀಗ ಬಹಿರಂಗಗೊಂಡಿದೆ. ಈ ನಾಲ್ವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಾರುಕಟ್ಟೆ ದರಕ್ಕಿಂತಲೂ ಆರೇಳು ಪಟ್ಟು ಹೆಚ್ಚಿನ ದರ ವಿಧಿಸಿ ಕೆಲ ವೈದ್ಯಕೀಯ ಉಪಕರಣ ಖರೀದಿಸಲಾಗಿದೆ. ಹಣಕಾಸು ಇಲಾಖೆಯ ಅಧಿಕಾರಿಗಳು ಬಿಲ್‌ ಮಂಜೂರು ಮಾಡದೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಮುಖ್ಯಮಂತ್ರಿ ಮೂಲಕ ಒತ್ತಡ ಹಾಕಿಸಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಬೆಂಕಿ ಬಿದ್ದ ಮನೆಯಲ್ಲಿ ಗಳ ಇರಿಯುವ ಕೆಲಸವನ್ನು ಬಿಜೆಪಿಯ ಸಚಿವರು, ಮುಖಂಡರು ಮಾಡಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿ ಕಿಡಿಕಾರಿದರು.

ಕಂದಾಯ ಇಲಾಖೆ ವತಿಯಿಂದ ತಲಾ ₹ 1650 ಮೌಲ್ಯದ ಫುಡ್‌ ಕಿಟ್‌ ಅನ್ನು 81 ಲಕ್ಷ ಜನರಿಗೆ ಕೊಡಲಾಗಿದೆ ಎಂಬುದನ್ನು ಅಫಿಡವಿಟ್‌ನಲ್ಲಿ ನಮೂದಿಸಲಾಗಿದೆ. ಇಷ್ಟೊಂದು ದುಬಾರಿಯ ಕಿಟ್ ಯಾರಿಗೆ ತಲುಪಿದೆ ಎಂಬುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.

ಚೀನಾದ 59 ಆ್ಯಪ್‌ ನಿಷೇಧಿಸಿದ ಪ್ರಧಾನಿ ಮೋದಿ ಅವರು ಬಿಜೆಪಿ ಮುಖಂಡರು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿರುವ ಪೇ ಟಿಎಂ, ಸ್ನ್ಯಾಪ್ ಡೀಲ್, ಫ್ಲಿಪ್ ಕಾರ್ಟ್‌, ಸ್ವಿಗ್ಗಿ, ಜೊಮ್ಯಾಟೊ, ಮೀಶೂ, ಶೇರ್ ಚಾಟ್, ಬೈಜೋ, ಓಯೋ, ಕ್ಸಿಯೋಮಿ ಸೇರಿದಂತೆ ಇನ್ನಿತರೆ ಕಂಪನಿಗಳ ವಹಿವಾಟನ್ನು ನಿಷೇಧಿಸಲು ಮುಂದಾಗಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಮುಖಂಡ ಎಚ್‌.ಎ.ವೆಂಕಟೇಶ್‌ ಮಾತನಾಡಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪಕ್ಷ ಹೋರಾಟ ನಡೆಸಲಿದೆ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT