ಬುಧವಾರ, ಮಾರ್ಚ್ 29, 2023
33 °C
ಅಮಾವಾಸ್ಯೆ, ಲಕ್ಷ್ಮೀಪೂಜೆ ಸಂಪನ್ನ

ಮೈಸೂರು: ಕತ್ತಲನ್ನು ನೀಗಿಸಿದ ದೀಪಗಳ ಹೊಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಮಾವಾಸ್ಯೆಯ ಕತ್ತಲನ್ನು ದೀಪಗಳ ಸಾಲು ನೀಗಿಸಿತು. ಹಣತೆಗಳ ಹೊಳೆಯಲ್ಲಿ ಸಾಂಸ್ಕೃತಿಕ ನಗರಿ ಗುರುವಾರ ತೇಲಿತು.

‘ಬೆಳಕನ್ನು ಚೆಲ್ಲಿ ಬಂದೇ ಬಂತು ದೀಪಾವಳಿ’ ಎಂಬ ಹಾಡಿನಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಹೊಸ್ತಿಲ ಬಳಿ, ಕಾಂಪೌಂಡ್‌ ಮೇಲೆ ಹಣತೆಗಳನ್ನು ಬೆಳಗಿ, ದೀಪಾವಳಿಗೆ ಚೆಂದದೊಂದು ಮುನ್ನುಡಿ ಬರೆದರು.

ಸಂಜೆಯ ನಂತರ ಮನೆಯ ಬಾಗಿಲಿಗೆ ನೀರು ಹಾಕಿ, ರಂಗವಲ್ಲಿ ಬಿಡಿಸಿದರು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಿದರು. ದೀಪಗಳನ್ನು ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು. ಮನೆಗಳಲ್ಲಿ ಅಮಾವಾಸ್ಯೆಯ ಪೂಜೆ, ಲಕ್ಷ್ಮೀಪೂಜೆಯನ್ನು ನೆರವೇರಿಸಿದರು.

ಮಕ್ಕಳು, ಯುವಕರು ಪಟಾಕಿ ಹೊಡೆದು ನಲಿದರು. ಬಾಣಬಿರುಸುಗಳ ಅಬ್ಬರವೂ ಕೇಳಿ ಬಂದಿತು. ಹೂಕುಂಡಗಳು, ಚಕ್ರಗಳನ್ನು ಹಚ್ಚುವ ಮೂಲಕ ದೀಪಾವಳಿಗೆ ರಂಗು ತುಂಬಿದರು. 

ಕೆಲವರು ಮನೆಯ ಮುಂದೆ ದೀಪದ ಬುಟ್ಟಿಗಳನ್ನು ಹಾಕಿದ್ದು ಗಮನ ಸೆಳೆಯಿತು. ಕೆಲವೆಡೆ ಆಕಾಶದೀಪಗಳನ್ನು ಹಾರಿ ಬಿಡಲಾಯಿತು.

ಭಾರಿ ಮಳೆ ಬರುತ್ತದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ, ಗಗನದಲ್ಲಿ ಆವರಿಸಿದ್ದ ಕಾರ್ಮೊಡಗಳು ಮಳೆ ಬರಬಹುದು ಎಂಬ ಆತಂಕ ಮೂಡಿಸಿದ್ದವು. ಆದರೆ, ವರುಣನೂ ದೀಪಗಳ ಹಚ್ಚುವಿಕೆಗೆ ಅವಕಾಶ ನೀಡಿದ್ದು ವಿಶೇಷ ಎನಿಸಿತು.

ಇಲ್ಲಿನ ಶಂಕರಮಠದಲ್ಲಿ ಸಂಜೆ ಮೈಸೂರು ಬೊಂಬೆ ರಂಗಮಂದಿರದ ಕಲಾವಿದರು ಪ್ರದರ್ಶಿಸಿದ ‘ನರಕಾಸುರ ವಧೆ’ ಬೊಂಬೆಯಾಟವನ್ನು ಹಲವು ಮಂದಿ ವೀಕ್ಷಿಸಿದರು. ವಿವಿಧ ಮಠಗಳು, ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.