ಮಂಗಳವಾರ, ಸೆಪ್ಟೆಂಬರ್ 22, 2020
22 °C
ವಿಚಾರ ಸಂಕಿರಣದಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ಧೇಗೌಡ ಅಭಿಮತ

‘ವಿಶ್ವವಿದ್ಯಾಲಯ ಶಿಕ್ಷಣಕ್ಕಷ್ಟೇ ಸೀಮಿತವಾಗಬಾರದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ವಿಶ್ವವಿದ್ಯಾಲಯಗಳು ಶಿಕ್ಷಣ ನೀಡುವುದಕ್ಕಷ್ಟೇ ಸೀಮಿತವಾಗಬಾರದು’ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ಧೇಗೌಡ ಅಭಿಪ್ರಾಯಪಟ್ಟರು.

ನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ‘ನಿರ್ಲಕ್ಷಿಸಲ್ಪಟ್ಟ ಹಕ್ಕುಗಳು: ಭಾರತದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ಸ್ಥಿತಿಗತಿಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ‘ನಾಡಿನ ಸರ್ವತೋಮುಖ ಪ್ರಗತಿಗೆ ವಿ.ವಿ.ಗಳು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ತುಮಕೂರು ವಿ.ವಿ. ಮುಂದಡಿಯಿಟ್ಟಿದೆ’ ಎಂದು ಹೇಳಿದರು.

‘ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳ ಸರ್ವಾಂಗೀಣ ಪ್ರಗತಿಗಾಗಿ ಹಲವು ಯೋಜನೆ ಜಾರಿಗೊಂಡಿವೆ. ಅನುಷ್ಠಾನಕ್ಕಾಗಿ ಸಮಿತಿ ರಚನೆಗೊಂಡರೂ ಇಂದಿಗೂ ಬುಡಕಟ್ಟು ಜನಾಂಗದ ಜನರು ಮುಖ್ಯವಾಹಿನಿಗೆ ಬರುತ್ತಿಲ್ಲ. ಹಲ ದಶಕಗಳಿಂದಲೂ ಬುಡಕಟ್ಟು ಜನರ ಅಭಿವೃದ್ಧಿಗಾಗಿಯೇ ಕ್ರಿಯಾಶೀಲವಾಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೂ ಸಫಲತೆ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಗತ್ತಿನ ಜನಸಂಖ್ಯೆಯಲ್ಲಿ ಶೇ.60ರಷ್ಟು ಯುವ ಸಮೂಹವಿದೆ. ಆದರೆ ಇದರಲ್ಲಿ ಶೇ.5ರಷ್ಟು ಯುವ ಜನರ ಬಳಿ ಕೌಶಲವಿಲ್ಲ. ಇದು ಸಮಸ್ಯೆಯಾಗಿ ಕಾಡಲಿದೆ. ಇಂದು ಮೊಬೈಲ್‌ ಶಿಕ್ಷಕನಾಗಿದೆ. ಇದೀಗ ವರವೋ ? ಶಾಪವೋ ? ಎಂಬುದು ಚರ್ಚೆಗೊಳಗಾಗುತ್ತಿದೆ. ಒಳಿತಿಗೆ ಬಳಸಿಕೊಂಡರೆ ಖಂಡಿತವಾಗಿ ನಮ್ಮ ಅಭಿವೃದ್ಧಿಗೆ ಮೆಟ್ಟಿಲಾಗಲಿದೆ’ ಎಂದು ಸಿದ್ಧೇಗೌಡ ಹೇಳಿದರು.

‘ನಮ್ಮದು ಯುವ ಭಾರತ. ಈ ಯುವ ಸಮೂಹ ಸಂಪನ್ಮೂಲವಾಗಿ ಅಭಿವೃದ್ಧಿ ಹೊಂದಬೇಕು. ಕೌಶಲ ಗಳಿಸಿಕೊಳ್ಳಬೇಕು. ನೈತಿಕತೆ ಹೊಂದಿರಬೇಕು. ನಮ್ಮ ಇತಿಹಾಸ, ಸಮಾಜ, ಪರಂಪರೆ ಸಂಸ್ಕೃತಿಯನ್ನು ತಿಳಿದಿರುವ ಮಾನವ ಸಂಪನ್ಮೂಲವಾಗಬೇಕಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ತಿಳಿಸಿದರು.

‘ನಮ್ಮ ಮೂಲ ನೆಲೆ, ಸಂಸ್ಕೃತಿ, ಭಾಷೆ, ಮೂಲ ನಿವಾಸಿಗಳ ಬದುಕಿನ ಸ್ಥಿತಿಗತಿ ಏನಾಗಿದೆ ? ಎಂಬ ಚಿಂತನೆ ನಡೆಯಬೇಕಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಅನುಷ್ಠಾನಗೊಳ್ಳಬೇಕಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ನೈತಿಕ ಮೌಲ್ಯಗಳ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಸಾಗಬೇಕಿದೆ’ ಎಂದರು.

ಡಾ.ಡಿ.ಸಿ.ನಂಜುಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೀಡ್‌ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಡಾ.ಎಸ್‌.ಶ್ರೀಕಾಂತ್‌ ಬುಡಕಟ್ಟು ಜನಾಂಗದ ಜನರ ಬದುಕಿನ ಬವಣೆ ಬಿಚ್ಚಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.