ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಉಪಕರಣಗಳ ಆವಿಷ್ಕಾರ

ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಾಧನೆ
Last Updated 8 ಮೇ 2020, 13:51 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಸಂಕಷ್ಟದಲ್ಲಿ ಸಕಲರಿಗೂ ನೆರವಾಗುವಂತಹ ವೈದ್ಯಕೀಯ ಉಪಕರಣಗಳನ್ನು ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಆವಿಷ್ಕರಿಸಿದೆ.

ಮೈಸೂರಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದ ಆವರಣದಲ್ಲಿ ಶುಕ್ರವಾರ ಈ ಐದು ಉಪಕರಣಗಳನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವರಾದ ಜಗದೀಶ ಶೆಟ್ಟರ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು ಸಮ್ಮುಖ ಅನಾವರಣಗೊಳಿಸಲಾಯಿತು.

ಕೊರೊನಾ ವೈರಸ್ ಹರಡುವಿಕೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಅಕಾಡೆಮಿ ಸಂಶೋಧನೆಗೆ ಮುಂದಾಯಿತು. ತಿಂಗಳ ಅವಧಿಯಲ್ಲಿ ಈ ಉಪಕರಣಗಳನ್ನು ಆವಿಷ್ಕರಿಸಿದೆ ಎಂದು ಅಕಾಡೆಮಿಯ ಡಾ.ಬಿ.ಸುರೇಶ್‌ ಮಾಹಿತಿ ನೀಡಿದರು.

ಪ್ರತ್ಯೇಕತೆ–ಗಾಲಿಗಳ ಮೇಲಿನ ತುರ್ತು ಚಿಕಿತ್ಸಾ ಘಟಕ: ಯಾವುದೇ ವಿಪತ್ತು ಎದುರಾದಾಗ, ರೋಗಿಯೊಬ್ಬ ಅಪಾಯಕ್ಕೆ ಸಿಲುಕಿದಾಗ ತಕ್ಷಣವೇ ಆ ಸ್ಥಳಕ್ಕೆ ಕೊಂಡೊಯ್ಯಬಹುದಾದ ವೈದ್ಯಕೀಯ ಉಪಕರಣವಿದು.

ಆಂಬುಲೆನ್ಸ್‌ನಲ್ಲೇ ಇದನ್ನು ರೋಗಿಯಿದ್ದ ಸ್ಥಳಕ್ಕೆ ಕೊಂಡೊಯ್ಯಬಹುದು. ತೀವ್ರ ನಿಗಾ ಘಟಕದಲ್ಲಿರುವ ಬಹುತೇಕ ಸೌಲಭ್ಯಗಳು ಇದರಲ್ಲಿ ಲಭ್ಯ. ಇದು ಮನೆಯಲ್ಲೇ ರೋಗಿಗೆ ಚಿಕಿತ್ಸೆ ಕೊಡಲು ಸಹಕಾರಿಯಾಗಿದೆ. ಆಸ್ಪತ್ರೆ, ಪ್ರತ್ಯೇಕತೆ, ತುರ್ತು ಚಿಕಿತ್ಸಾ ವೆಚ್ಚ ಇದರಿಂದ ಕಡಿಮೆಯಾಗಲಿದೆ. ಇದರ ಅಭಿವೃದ್ಧಿಗೆ ₹ 4 ಲಕ್ಷ ವೆಚ್ಚವಾಗಿದ್ದು, ಬೃಹತ್ ಪ್ರಮಾಣದಲ್ಲಿ ತಯಾರಿಕೆ ಆರಂಭಿಸಿದರೆ ಸಾಕಷ್ಟು ತಗ್ಗಲಿದೆ ಎಂದು ಡಾ.ಬಿ.ಸುರೇಶ್ ತಿಳಿಸಿದರು.

ಕಡಿಮೆ ವೆಚ್ಚದ ವೆಂಟಿಲೇಟರ್

ಇದನ್ನು ಎಲ್ಲೆಡೆ ಸಾಗಿಸಬಹುದು. ಇದರಲ್ಲಿ ಮರುಬಳಕೆ ಮಾಡದಂತ ಎ.ಎಂ.ಬಿ.ಯು ಚೀಲ ಮತ್ತು ಉಸಿರಾಟಕ್ಕೆ ಬೇಕಾಗುವ ಸರಿಹೊಂದುವ ಸಾಧನ, ಸರಿ ಹೊಂದಿಸಬಹುದಾಗಿರುವ ಉಬ್ಬರವಿಳಿತದ ಪರಿಮಾಣ ಮತ್ತು ಇತರೆ ವೆಂಟಿಲೇಟರ್‌ಗಳಲ್ಲಿರದ ಧನಾತ್ಮಕ ಮತ್ತು ಮುಕ್ತಾಯದ ಒತ್ತಡದ ಸಾಧನವಿರುತ್ತದೆ. ಇದರ ಅಂದಾಜು ಮೌಲ್ಯ ₹ 30 ಸಾವಿರ.

ಡೆಂಟಿ ಸೇಫ್

ದಂತ ವೈದ್ಯರಿಗೂ, ರೋಗಿಗಳಿಗೂ ಸುರಕ್ಷತೆ ನೀಡುವ ಉಪಕರಣ. ಇದನ್ನು ವೈಜ್ಞಾನಿಕವಾಗಿ ಸಂಚಾರಿ ಡಿವೈಸ್‌ನಂತೆ ರೂಪಿಸಲಾಗಿದೆ. ಇದು ಡೆಂಟಲ್ ಕುರ್ಚಿಗಳನ್ನು ಮತ್ತು ಚಿಕಿತ್ಸೆ ನೀಡಿದ ಪ್ರದೇಶವನ್ನು 20 ನಿಮಿಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ರಾಸಾಯನಿಕ ರಹಿತವಾಗಿ ಕ್ರಿಮಿನಾಶಗೊಳಿಸಿ ಸುರಕ್ಷತೆಗೆ ಒತ್ತು ನೀಡಲಿದೆ. ಇದರ ಅಂದಾಜು ಮೊತ್ತ ₹ 30 ಸಾವಿರ.

₹ 4,500 ಮೊತ್ತದ ಬಹು ಹಂತದ ಆಮ್ಲಜನಕ ಕ್ರಿಮಿನಾಶನ ಹಾಗೂ ₹ 1250 ಮೌಲ್ಯದ ಕೈಯಲ್ಲಿ ಹಿಡಿಯುವ ಯುವಿ ಸರ್ಫೇಸ್‌ ಸ್ಯಾನಿಟೈಸರ್‌ ಅನ್ನು ಸಹ ಅಕಾಡೆಮಿ ಆವಿಷ್ಕರಿಸಿದೆ.

2500 ಆಹಾರ ಸಾಮಗ್ರಿಯ ಕಿಟ್ ವಿತರಣೆ

ಮೈಸೂರು ನಾಗರಿಕರ ವೇದಿಕೆ ವತಿಯಿಂದ ಶುಕ್ರವಾರ 2500 ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ ಸಾಂಕೇತಿಕ ಕಾರ್ಯಕ್ರಮಕ್ಕೆ ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು.

ಕಿಟ್‌ನಲ್ಲಿ 5 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ತೊಗರಿ ಬೇಳೆ, ಸಕ್ಕರೆ, ಎಣ್ಣೆ, ಉಪ್ಪು, ಟೀ ಪುಡಿಯಿದೆ. ಪೌರ ಕಾರ್ಮಿಕರು, ಟಾಂಗಾವಾಲಾಗಳು, ಸಂಕಷ್ಟದಲ್ಲಿರುವವರಿಗೆ ವಿತರಿಸಲು ಈ ಕಿಟ್‌ಗಳನ್ನು ಪಾಲಿಕೆಗೆ ಹಸ್ತಾಂತರಿಸಲಾಯಿತು.

ಮೊದಲ ಬಾರಿಗೆ 3000 ಕಿಟ್‌ಗಳನ್ನು ವಿತರಿಸಲಾಗಿತ್ತು.

ಸಚಿವರಾದ ಜಗದೀಶ ಶೆಟ್ಟರ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಶಾಸಕರಾದ ಎಸ್‌.ಎ.ರಾಮದಾಸ್, ಹರ್ಷವರ್ಧನ್, ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ, ಮೇಯರ್ ತಸ್ನೀಂ, ಉಪ ಮೇಯರ್ ಶ್ರೀಧರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಈ ಸಂದರ್ಭ ಉಪಸ್ಥಿತರಿದ್ದರು.

ಮೃಗಾಯಲಕ್ಕೆ ₹ 5 ಲಕ್ಷ

ಸುತ್ತೂರು ಮಠ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ವತಿಯಿಂದ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ನಿರ್ವಹಣೆಗಾಗಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶುಕ್ರವಾರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವರಿಗೆ ₹ 5 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿದರು.

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT