ಶನಿವಾರ, ಮಾರ್ಚ್ 6, 2021
27 °C
ಒಂದು ತಿಂಗಳು ಕಳೆದರೂ ಜನಪ್ರಿಯಗೊಳ್ಳದ ಸೌಲಭ್ಯ

ಕೈದಿಗಳ ಸಂದರ್ಶನಕ್ಕೆ ‘ಇ–ಮುಲಾಕಾತ್’

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಾರಾಗೃಹದಲ್ಲಿರುವ ಕೈದಿಗಳ ಸಂದರ್ಶನಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ‘ಇ–ಮುಲಾಕಾತ್’ ಸೇವೆಯು ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲೂ ಸದ್ದಿಲ್ಲದೇ ಜಾರಿಯಾಗಿದೆ. ಈ ಸೌಲಭ್ಯ ಜಾರಿಗೆ ಬಂದ 45 ದಿನಗಳಲ್ಲಿ 55 ಮಂದಿ ಕೈದಿಗಳು ಪ್ರಯೋಜನ ಪಡೆದಿದ್ದಾರೆ.

‌ಏನಿದು ‘ಇ– ಮುಲಾಕಾತ್’?
ಕೋವಿಡ್‌ ಕಾಣಿಸಿಕೊಂಡಾಗಿನಿಂದ ಕೈದಿಗಳನ್ನು ಅವರ ಸಂಬಂಧಿಕರು ಭೇಟಿ ಮಾಡುವುದಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದ ಕೈದಿಗಳು ಹೊರಗಿನ ಪ್ರಪಂಚದ ಸಂಪರ್ಕವನ್ನೇ ಕಳೆದುಕೊಂಡು ಬಿಡಬಹುದಾದ ಆತಂಕ ಎದುರಾಗಿತ್ತು. ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಪರಿತಪಿಸುತ್ತಿದ್ದ ಕೈದಿಗಳ ಅನುಕೂಲಕ್ಕಾಗಿಯೇ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಡಿ. 2ರಂದು ಏಕಕಾಲಕ್ಕೆ ಎಲ್ಲ ಕಾರಾಗೃಹಗಳಲ್ಲೂ ‘ಇ– ಮುಲಾಕಾತ್’ ಸೌಲಭ್ಯವನ್ನು ಜಾರಿಗೆ ತಂದಿತು. ಸಂಬಂಧಿಕರು ಮನೆಯಲ್ಲೇ ಕುಳಿತು ವಿಡಿಯೊ ಕಾಲ್ ಮಾಡುವ ಮೂಲಕ ಕೈದಿಗಳ ಜತೆ ಮಾತನಾಡಬಹುದಾದ ಅತ್ಯಾಧುನಿಕ ಸೌಲಭ್ಯ ಇದಾಗಿದೆ. ಆದರೆ, ಈ ಸೌಲಭ್ಯ ಹೆಚ್ಚು ಜನಪ್ರಿಯಗೊಳ್ಳದೆ ಇರುವುದರಿಂದ ಹೆಚ್ಚಿನ ಕೈದಿಗಳ ಸಂಬಂಧಿಕರು ಈ ವ್ಯವಸ್ಥೆ ಬಳಸಿಕೊಳ್ಳುತ್ತಿಲ್ಲ.

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ 750 ಮಂದಿ ಕೈದಿಗಳು ಇದ್ದಾರೆ. ಇವರಲ್ಲಿ 60 ಮಂದಿ ಮಹಿಳಾ ಕೈದಿ ಸೇರಿದ್ದಾರೆ.

ಏಕೆ ಹೀಗೆ?
‘ಇ–ಮುಲಾಕಾತ್’ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕಾದರೆ ಮೊದಲು ಕೈದಿಗಳ ಕುಟುಂಬದ ಸದಸ್ಯರು ಅಥವಾ ಸಂದರ್ಶಕರು ಸ್ಮಾರ್ಟ್‌ಫೋನ್‌ ಅಥವಾ ಕಂಪ್ಯೂಟರ್‌ ಮೂಲಕ NPIP ವೆಬ್‌ಸೈಟ್‌ನಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿ, ನೋಂದಣಿ ಮಾಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿಯೇ ಅರ್ಜಿ ಭರ್ತಿ ಮಾಡಬೇಕು. ಈ ಅರ್ಜಿಯು ಇಂ‌ಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರವೇ ಇದೆ. ಹೆಚ್ಚಿನ ಕೈದಿಗಳ ಸಂಬಂಧಿಕರು ಬಡವರು, ಆರ್ಥಿಕವಾಗಿ ಹಿಂದುಳಿದವರು, ಅವಿದ್ಯಾವಂತರಾಗಿರುವುದು ಈ ವ್ಯವಸ್ಥೆಯನ್ನು ಬಳಸುತ್ತಿಲ್ಲ.

ಲಾಭಗಳು: ‘ಇ–ಮುಲಾಕಾತ್‌’ನಲ್ಲಿ ನೇರ ಭೇಟಿಗಿಂತ ಹೆಚ್ಚಿನ ಲಾಭ ಇದೆ. ಮನೆಯ ಎಲ್ಲ ಸದಸ್ಯರು ಒಂದೇ ಕಡೆ ಕುಳಿತು ವಿಡಿಯೊ ಕಾಲ್‌ ಮೂಲಕ ಜೈಲಿನಲ್ಲಿರುವ ತಮ್ಮ ಸಂಬಂಧಿಕರನ್ನು ನೋಡಬಹುದು, ಮಾತನಾಡಬಹುದು. ಕೈದಿಯೂ ತಮ್ಮ ಎಲ್ಲ ಆಪ್ತರನ್ನು ಒಟ್ಟಿಗೆ ನೋಡುವ ಮೂಲಕ ಸಂತಸಗೊಳ್ಳುತ್ತಾನೆ.

ಸದ್ಯ, ಮೊದಲೇ ನೋಂದಾಯಿಸಿದ 2 ಮೊಬೈಲ್‌ ಸಂಖ್ಯೆಗಳಿಗೆ ವಾರಕ್ಕೆ ಎರಡರಿಂದ ಮೂರು ಬಾರಿ ದೂರವಾಣಿ ಕರೆ ಮಾಡುವ ಸೌಲಭ್ಯವೂ ಇದೆ. ಇದರ ವೆಚ್ಚವನ್ನು ಕೈದಿಯೇ ಭರಿಸಬೇಕಿದೆ.

‘ಇ–ಮುಲಾಕತ್’ ನೋಂದಣಿ ಹೀಗಿದೆ
ಕೈದಿಗಳೊಂದಿಗೆ ವಿಡಿಯೊ ಸಂದರ್ಶನಕ್ಕಾಗಿ ಆನ್‌ಲೈನ್ ನೋಂದಣಿ ಮಾಡುವವರು ಗೂಗಲ್‌ನಲ್ಲಿ NPIP ಎಂದು ಟೈಪ್ ಮಾಡಿದಾಗ ಕಾಣುವ New visit registration prison portal ಮೇಲೆ ಕ್ಲಿಕ್ ಮಾಡಬೇಕು. ಕೈದಿ ಸಂದರ್ಶನಕ್ಕಾಗಿ ಕಂಡು ಬರುವ ಆನ್‌ಲೈನ್ ಅರ್ಜಿಯಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ visit mode ನಲ್ಲಿ ಕಾಣಿಸುವ ಎರಡು ಆಯ್ಕೆಗಳಲ್ಲಿ ವಿಡಿಯೊ ಕಾನ್ಫರೆನ್ಸ್‌ ಅಂಶವನ್ನು ಆಯ್ಕೆ ಮಾಡಿಕೊಳ್ಳಬೇಕು.

ಅಂತಿಮವಾಗಿ ಫಾರ್ಮ್ ಭರ್ತಿ ಮಾಡಿದ ಮೇಲೆ ಕಾಣುವ ‘ಕ್ಯಾಪ್ಚರ್‌ ಕೋಡ್‌’ ಅನ್ನು ನಮೂದಿಸಿ ಸಬ್‌ಮೀಟ್ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂದರ್ಶಕರ ಮೊಬೈಲ್‌ಗೆ ‌‌ಭೇಟಿಯ ನೋಂದಣಿ ಸಂಖ್ಯೆ ‘ಇ-ಮೇಲ್’ನಲ್ಲಿ ರೂಮ್ ವಿಸಿಟ್ ಸಂಖ್ಯೆ ಹಾಗೂ ಭೇಟಿಯ ಸಮಯವನ್ನು ಕಳುಹಿಸಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು