ಗುರುವಾರ , ಮಾರ್ಚ್ 4, 2021
29 °C
ಮೈಸೂರಿನಲ್ಲಿ ಹಲಸಿನ ಹಬ್ಬಕ್ಕೆ ಚಾಲನೆ

ಹಣ್ಣು ತಿಂದರು; ಗಿಡ ಕೊಂಡೊಯ್ದರು..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ನಂಜರಾಜ ಬಹದ್ದೂರು ಛತ್ರದ ಆವರಣದಲ್ಲಿ ಹಲಸಿನ ಘಮಲು ಪಸರಿಸಿತ್ತು. ಶನಿವಾರ ಜನಜಾತ್ರೆಯೇ ಅಲ್ಲಿತ್ತು. ಕೆಂಪು ಹಲಸಿನ ತೊಳೆಗಾಗಿ ಹಲರು ಮುಗಿಬಿದ್ದರು. ಹಲಸಿನ ತರಹೇವಾರಿ ತಿನಿಸುಗಳನ್ನೂ ಸವಿದರು.

ಹಲಸಿನ ಹಣ್ಣಿನ ತೊಳೆ ಬಿಡಿಸಿ, ಮಾರಾಟ ಮಾಡುವುದು ನಿರಂತರವಾಗಿತ್ತು. ಮಳಿಗೆಗಳಲ್ಲಿ ಹಣ್ಣುಗಳ ರುಚಿ ಸವಿದು ಮನೆಗೂ ಕೊಂಡೊಯ್ದರು.

ಹಲಸಿನ ಹಣ್ಣಿನ ಬೆಲೆ ದುಬಾರಿಯಾಯ್ತು ಎಂಬ ಮಾತು ಮಾರ್ದನಿಸಿದರೂ; ಖರೀದಿಯ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೈಸೂರಿಗರಷ್ಟೇ ಅಲ್ಲದೇ ಸುತ್ತಮುತ್ತಲಿನ ಹಳ್ಳಿಗಳ ಜನರು, ಬೆರಳೆಣಿಕೆಯ ವಿದೇಶಿಗರು ‘ಹಬ್ಬ’ದಲ್ಲಿ ಹಲಸಿನ ರುಚಿ ಸವಿದರು. ಕೆಂಪು ಹಲಸು ಸಿಗದಿದ್ದಾಗ ಆಕ್ಷೇಪ ವ್ಯಕ್ತಪಡಿಸಿದರು.

ಸಸಿಗಳಿಗೆ ಭಾರಿ ಬೇಡಿಕೆ: ಹಲಸಿನ ಹಬ್ಬಕ್ಕೆ ಚಾಲನೆ ಸಿಗುವ ಮುನ್ನವೇ ಛತ್ರದ ಹೊರಾಂಗಣದಲ್ಲಿ ದೇವನಹಳ್ಳಿಯ ತೇಜ ನರ್ಸರಿಯ ಶಿವನಾಪುರದ ರಮೇಶ್ ತಂದಿಳಿಸಿದ್ದ ಹಲಸಿನ ಸಸಿಗಳು ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದವು. ಮಧ್ಯಾಹ್ನದ ವೇಳೆಗೆ ಶೇ 50ಕ್ಕಿಂತಲೂ ಹೆಚ್ಚು ಸಸಿಗಳು ಮಾರಾಟವಾದವು.

ರಾಮಚಂದ್ರ ಹಲಸು, ಬೈರಚಂದ್ರ, ನಾಗಚಂದ್ರ, ತೂಬಗೆರೆ, ದಂಗ್ ಸೂರ್ಯ, ಜೇನು, ಹೆಜ್ಜೇನು, ವಿಯೆಟ್ನಾಂ ಸೂಪರ್ ಅರ್ಲಿ, ಅಂಟು ರಹಿತ, ಸರ್ವಋತು, ಸಿಂಗಪೂರ್, ಲಾಲ್‌ಭಾಗ್, ರಾಜ ರುದ್ರಾಕ್ಷಿ, ಸಿಂಧು, ಜಿ–11, ಜಿ–33 ತಳಿಯ ಸಸಿಗಳು ಮಾರಾಟವಾದವು.

ಸಸಿ ಖರೀದಿಗೆ ಮುಂದಾದ ಹಲವರು ಸಿದ್ದು, ಶಂಕರ ಹಲಸಿನ ಸಸಿಗಳನ್ನು ಕೇಳಿದರು. ನಾಡಿನಲ್ಲಿ ಮನೆ ಮಾತಾಗಿರುವ ಈ ತಳಿಯ ಹಲಸಿನ ಗಿಡಗಳನ್ನು ತರಿಸಬೇಕಿತ್ತು ಎಂದು ಮಾತನಾಡಿಕೊಂಡರು.

ಗಿಡ ಖರೀದಿಸಿದ ಹಲವರು ಸಸಿ ನೆಡುವುದು, ಗೊಬ್ಬರ ಹಾಕುವುದು, ಆರೈಕೆ ಮಾಡುವ ಬಗ್ಗೆಯೂ ನರ್ಸರಿಯವರಿಂದಲೇ ಕೇಳಿ ತಿಳಿದುಕೊಂಡರು. ಕೆಲವರು ಗಿಡ ದೊಡ್ಡದಾಗಿ ಹಣ್ಣು ಯಾವಾಗ ಬಿಡಲಿದೆ? ಅದರ ರುಚಿ, ವೈಶಿಷ್ಟ್ಯದ ಬಗ್ಗೆಯೂ ವಿಚಾರಿಸಿ ಸಸಿ ಖರೀದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.