ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಯಿಯನ್ನು ದೂರ ಮಾಡಿದ ಸ್ಥಿತಿ ಕನ್ನಡಿಗರದ್ದು’

ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಸ್.ಅರ್ಜುನ್ ಕಳವಳ
Last Updated 12 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಮಗುವಿನಿಂದ ತಾಯಿಯನ್ನು ದೂರ ಮಾಡಿದ ಸ್ಥಿತಿ ಕನ್ನಡಿಗರಿಗೆ ಒದಗಿದೆ ಎಂದು ಮೈಸೂರು ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ಎಸ್.ಅರ್ಜುನ್ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗುರುವಾರ ಕಲಾಮಂದಿರದಲ್ಲಿ ನಡೆದ ಚೊಚ್ಚಲ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇದು ಕೇವಲ ಕನ್ನಡಿಗರದ್ದು ಮಾತ್ರವಲ್ಲ, ಮಾತೃಭಾಷೆಯಿಂದ ದೂರವಾದ ಪ್ರತಿ ಮಗುವಿನ ಸ್ಥಿತಿಯೂ ಮಗುವಿನಿಂದ ತಾಯಿಯನ್ನು ದೂರ ಮಾಡಿದ ಸ್ಥಿತಿಯಂತಾಗಿದೆ. ಇದಕ್ಕೆ ನಮ್ಮ ಅಮಾನವೀಯ ಮತ್ತು ಬೇಜವಾಬ್ದಾರಿ ನಡೆಯೇ ಕಾರಣ’ ಎಂದು ಅವರು ವಿಶ್ಲೇಷಿಸಿದರು.

‘ಭಾಷೆಯಂತೆಯೇ ಸಂಸ್ಕೃತಿ, ಪರಂಪರೆಯನ್ನು ಬಿಡುತ್ತಾ ಹೋದಂತೆ ನಮ್ಮ ಸ್ಥಿತಿ ದುಡ್ಡು ಎಣಿಸುವ ಯಂತ್ರದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಇದು ಮಾನವೀಯತೆ ಎನ್ನುವುದು ಹೇಳುವುದಕ್ಕಷ್ಟೇ ಸೀಮಿತಗೊಂಡಿದೆ. ‘ಹಕ್ಕಿಗಳಿಗೆ ನೀರಿಲ್ಲ, ತಮ್ಮ ಮನೆಗಳ ಮುಂದೆ ಹಕ್ಕಿಗಳಿಗಾಗಿ ನೀರಿಡಿ’ ಎಂಬ ಸಾಲುಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಎಲ್ಲರೂ ಕಳುಹಿಸಿ ಮಾನವೀಯತೆ ಮೆರೆದೆವು ಎಂದು ಭ್ರಮಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲರೂ ಮೊಬೈಲ್‌ ಒಳಗೇ ಅರ್ಧ ಜೀವನ ಕಳೆಯುತ್ತಿದ್ದಾರೆ. ನಾವು ಮಕ್ಕಳೂ ಇದರಿಂದ ಹೊರತಾಗಿಲ್ಲ. ಪಠ್ಯಪುಸ್ತಕಗಳ ಕೀಟಗಳಾಗಿದ್ದೇವೆ. ಹೊರಗಿನ ಪರಿಸರದ ಸಣ್ಣ ಸಣ್ಣ ಖುಷಿಗಳನ್ನೂ ಕಳೆದುಕೊಂಡಿದ್ದೇವೆ’ ಎಂದು ಹೇಳಿದರು.

ಇಂದು ಯುವ ತಲೆಮಾರು ಸಾಕ್ಷರವಾಗುತ್ತಿರಬಹುದು. ಆದರೆ, ಮಾನವರಾಗುತ್ತಿಲ್ಲ. ಪದವೀಧರರಾಗುತ್ತಿರಬಹುದು ಆದರೆ, ಆದರ್ಶಗಳಿಲ್ಲ. ಇನ್ನಾದರೂ ಮೌಲ್ಯ ರಹಿತ, ಅರ್ಥಹೀನ ಜೀವನ ಬಿಟ್ಟು, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಾಕೋಡು ಎಂಬ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಸೌಹಾರ್ದದಲ್ಲಿ ಬಾಳುತ್ತಿದ್ದಾರೆ. ಪರಸ್ಪರ ಸಹಬಾಳ್ವೆ ಅಲ್ಲಿದೆ. ಇಂತಹ ಬದುಕು ಆದರ್ಶವಾಗಬೇಕಿದೆ ಎಂದು ತಿಳಿಸಿದರು.

ಸಚಿವ ವಿ.ಸೋಮಣ್ಣ ಅವರು ‘ಮುಂಜಾವು’ ಕೃತಿಯನ್ನು ಬಿಡುಗಡೆ ಮಾಡಿದರು. ಕಲಾವಿದ ಮಹೇಂದ್ರ ತಮ್ಮ ಮಿಮಿಕ್ರಿ ಮೂಲಕ ಗಮನ ಸೆಳೆದರು.

ಅವಧೂತ ದತ್ತಪೀಠದ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಿಕಟಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ರಂಗಕರ್ಮಿ ರಾಜಶೇಖರ ಕದಂಬ, ಮಡ್ಡಿಕೆರೆ ಗೋಪಾಲ್, ಪ್ರಾಧ್ಯಾಪಕರಾದ ಉಮಾದೇವಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಿಂದ ಕಲಾಮಂದಿರವರೆಗೆ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಅಧ್ಯಕ್ಷ ಎಂ.ಎಸ್.ಅರ್ಜುನ್ ಅವರನ್ನು ಕರೆತರಲಾಯಿತು. ಈ ವೇಳೆ ವೀರಗಾಸೆ, ಪೂಜಾಕುಣಿತ, ಡೊಳ್ಳು ಕುಣಿತಗಳು ಜನರನ್ನು ರಂಜಿಸಿದವು.

ಇದಕ್ಕೂ ಮುನ್ನ ಮೇಯರ್ ಪುಷ್ಪಲತಾ ಅವರು ರಾಷ್ಟ್ರಧ್ವಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ ನಾಡಧ್ವಜವನ್ನು, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪರಿಷತ್ತಿನ ಧ್ವಜಾರೋಹಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT