ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತತೆ ದೊರಕಿಸಿ: ಸಿಎಂಗೆ ಮನವಿ

ಸಿಐಐಎಲ್‌ ನಿರ್ದೇಶಕರ ಕಾರ್ಯವೈಖರಿಗೆ ಸಾಹಿತಿಗಳ ಅಸಮಾಧಾನ
Last Updated 31 ಮೇ 2020, 14:36 IST
ಅಕ್ಷರ ಗಾತ್ರ

ಮೈಸೂರು: ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಳ್ಳಲು ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ನಾಡಿನ ಸಾಹಿತಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಪ್ರಭಾರ ನಿರ್ದೇಶಕರು ಹೊರಡಿಸಿದ ಹೊಸ ನೇಮಕಾತಿ ಅಧಿಸೂಚನೆಯು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಹಿನ್ನಡೆ ಉಂಟುಮಾಡುತ್ತಿದೆ. ಈ ಅಧಿಸೂಚನೆ ಹಿಂಪಡೆಯಲು ಸಂಬಂಧಪಟ್ಟವರಿಗೆ ಆದೇಶ ನೀಡುವಂತೆಯೂ ಎಸ್‌.ಎಲ್‌.ಭೈರಪ್ಪ, ದೇವನೂರ ಮಹಾದೇವ, ಡಾ.ಓ.ಎಲ್‌.ನಾಗಭೂಷಣಸ್ವಾಮಿ, ಪ.ಮಲ್ಲೇಶ್‌ ಮತ್ತು ಜಿ.ಎಸ್‌.ಜಯದೇವ ಸೇರಿದಂತೆ 25 ಸಾಹಿತಿಗಳು ಬಹಿರಂಗ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

‘ಸ್ವಾಯತ್ತತೆ ದೊರಕಿಸಿಕೊಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಪ್ರಯತ್ನಶೀಲರಾಗಿರುವುದು ಅಭಿನಂದನೀಯ. ಆದರೆ ಸಚಿವರ ಪ್ರಯತ್ನಕ್ಕೆ ಸಿಐಐಎಲ್‌ ಪ್ರಭಾರ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಸ್ಪಂದಿಸುತ್ತಿಲ್ಲ. ಶಾಸ್ತ್ರೀಯ ಕನ್ನಡವು ಸ್ವಾಯತ್ತತೆ ಪಡೆಯುವಷ್ಟು ಬೆಳವಣಿಗೆ ಆಗಿಲ್ಲವೆಂದು ಕೇಂದ್ರಕ್ಕೆ ತಪ್ಪು ಮಾಹಿತಿ ನೀಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ’ ಎಂದಿದ್ದಾರೆ.

ಕೇಂದ್ರಕ್ಕೆ ತಪ್ಪು ವರದಿ ನೀಡಿರುವ ಡಿ.ಜಿ.ರಾವ್ ಅವರು ಭಾರತೀಯ ಭಾಷಾ ಸಂಸ್ಥಾನಕ್ಕೂ, ಭಾಷಾ ವಿಜ್ಞಾನಕ್ಕೂ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಅಧ್ಯಯನ ಕೇಂದ್ರವು ಪ್ರಾರಂಭಗೊಂಡು ಸುಮಾರು ಹತ್ತು ವರ್ಷಗಳಾಗಿವೆಯಾದರೂ ಇನ್ನೂ ಸ್ವಾಯತ್ತತೆ ಲಭಿಸಿಲ್ಲ ಎಂದಿರುವ ಅವರು, ಶಾಸ್ತ್ರೀಯ ತಮಿಳು ಅತ್ಯುನ್ನತ ಅಧ್ಯಯನ ಕೇಂದ್ರವು ಶಾಸ್ತ್ರೀಯ ಸ್ಥಾನಮಾನ ದೊರಕಿದ ಅಲ್ಪಾವಧಿಯಲ್ಲಿಯೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ತಮಿಳು ಸಂಶೋಧಕರೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂಬ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT