ಬುಧವಾರ, ಆಗಸ್ಟ್ 17, 2022
25 °C

ಸಿದ್ದರಾಮಯ್ಯ ಕುತಂತ್ರ, ಗೌಡರ ಭಾವನಾತ್ಮಕ ಮಾತಿಗೆ ಕೆಟ್ಟೆ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

JDS leader HD Kumaraswamy

ಮೈಸೂರು: ‘ಸಿದ್ದರಾಮಯ್ಯ ಅವರ ಕುತಂತ್ರ ಹಾಗೂ ಎಚ್.ಡಿ.ದೇವೇಗೌಡರ ಭಾವನಾತ್ಮಕ ಮಾತಿನ ಬಲೆಗೆ ಬಿದ್ದು ಹೆಸರು ಕೆಡಿಸಿಕೊಂಡೆ. ಬಿಜೆಪಿ ಸಂಬಂಧ ಇಟ್ಟುಕೊಂಡಿದ್ದರೆ, ಈಗಲೂ ಮುಖ್ಯಮಂತ್ರಿಯಾಗಿ ಮುಂದುವರಿಯಬಹುದಿತ್ತು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಶನಿವಾರ ಇಲ್ಲಿ ಹೇಳಿದರು.

‘2006ರಲ್ಲಿ ಮುಖ್ಯಮಂತ್ರಿಯಾದ ಬಳಿಕ ರಾಜ್ಯದಲ್ಲಿ ನನಗೆ ಒಳ್ಳೆಯ ಹೆಸರು, ವರ್ಚಸ್ಸು ಇತ್ತು. ಹೀಗಾಗಿಯೇ, 12 ವರ್ಷ ಜನರು ಹಾಗೂ ಕಾರ್ಯಕರ್ತರು ನನ್ನನ್ನು ಸಾಕಿದರು. ಆದರೆ, ಕಾಂಗ್ರೆಸ್ ಹೆಣೆದ ಬಲೆಗೆ ಸಿಲುಕಿದೆ. ದೇವೇಗೌಡರಿಗೆ ನೋವುಂಟು ಮಾಡಬಾರದೆಂದು ಕಾಂಗ್ರೆಸ್ ಜೊತೆ ಕೈಜೋಡಿಸಿದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹೆಸರು ಕೆಡಿಸಲು ಸಿದ್ದರಾಮಯ್ಯ ಅವರೇ ರೂಪಿಸಿದ ಪೂರ್ವನಿರ್ಧರಿತ ಹುನ್ನಾರವಿದು. ನಾನು ಸಂಪಾದಿಸಿದ್ದ ವರ್ಚಸ್ಸು ಮೈತ್ರಿ ಸರ್ಕಾರದ ಮೊದಲ ದಿನದಿಂದಲೇ ಸರ್ವನಾಶವಾಯಿತು. ಅವರ ಗುಂಪು ನೀಡಿದ ಹಿಂಸೆಯಿಂದ ಒಂದೇ ತಿಂಗಳಿಗೆ ಕಣ್ಣೀರು ಹಾಕಿದೆ. ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾಗಲೂ ನನಗೆ ಇಷ್ಟೊಂದು ದ್ರೋಹ ಆಗಿರಲಿಲ್ಲ. ಮತ್ತೆಂದೂ ಇಂಥ ತಪ್ಪು ಮಾಡಲ್ಲ’ ಎಂದರು.

‘ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ತಮಗೇನು ಪ್ರಯೋಜನ? ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಒಂದಿಷ್ಟು ದಿನ ಇದ್ದು ಮನೆಗೆ ಹೋಗುತ್ತಾರೆ. ಆಗ ತಾವೇ ಮುಖ್ಯಮಂತ್ರಿ ಆಗಬಹುದು ಎಂಬುದು ಸಿದ್ದರಾಮಯ್ಯ ಕನಸು ಕಂಡಿದ್ದರು. ಈ ಕಾರಣಕ್ಕೆ ಅವರ ಗುಂಪು ಆಡಳಿತದಲ್ಲಿ ನನಗೆ ನಿರಂತರವಾಗಿ ಅಸಹಕಾರ ನೀಡಿತು’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಅವರು ಕದ್ದುಮುಚ್ಚಿ ಯಾವ ಮುಖಂಡರನ್ನು ಭೇಟಿ ಮಾಡಿದ್ದಾರೆ ಎಂಬುದು ನನಗೆ ಗೊತ್ತು. ಹೀಗಾಗಿಯೇ, ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ಬಗ್ಗೆ ಪದೇಪದೇ ಮಾತನಾಡುತ್ತಿದ್ದಾರೆ. ನಾನು ನೇರವಾಗಿ ಭೇಟಿ ಮಾಡಿ ಮಾತನಾಡುತ್ತೇನೆ. ಮುಚ್ಚಿಡುವಂಥದ್ದು ಏನೂ ಇಲ್ಲ' ಎಂದರು.

ಕುಟುಂಬದ ಮೇಲೆ ಶಾಪ: ‘ನಾವು ಬೆಳೆಸಿದವರೇ ನಮ್ಮನ್ನು ವಂಚಿಸುತ್ತಿದ್ದಾರೆ. ಇದು ಪದೇ ಪದೇ ಸಂಭವಿಸುತ್ತಿದೆ. ನಾವೇನು ತಪ್ಪು ಮಾಡಿದ್ದೇವೆ ಎಂಬುದು ಗೊತ್ತಾಗುತ್ತಿಲ್ಲ. ಕುಟುಂಬದ ಮೇಲೆ ಯಾವುದೋ ಶಾಪವಿದೆ. ಇದರ ವಿಮೋಚನೆಗೆ ಸಂಶೋಧನೆ ಮಾಡಬೇಕು’ ಎಂದು ಕುಮಾರಸ್ವಾಮಿ ಹೇಳಿದರು.

***
ಇದುವರೆಗೆ ಹೆಸರು ಕೇಳದೇ ಇದ್ದ ನಿಗಮ, ಮಂಡಳಿ, ಪ್ರಾಧಿಕಾರಗಳಿಗೂ ಅಧ್ಯಕ್ಷರು, ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ದುಂದುವೆಚ್ಚದಲ್ಲಿ ತೊಡಗಿದೆ ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು