ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಮ್ಯಾಟಿಸ್ ಭೇಟಿ

ಮಹಾತ್ಮ ಗಾಂಧಿ ಹೆಸರುಳ್ಳ ಫಲಕ ಅನಾವರಣ
Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಸಿಂಗಪುರ: ಸಿಂಗಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿದರು. ಉಭಯ ದೇಶಗಳ ನಡುವಿನ ರಕ್ಷಣಾ ವಿಷಯಗಳು ಹಾಗೂ ಜಾಗತಿಕ ಹಿತಾಸಕ್ತಿಗಳನ್ನು ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಒಂದು ಗಂಟೆ ಕಾಲ ನಡೆದ ಮಾತುಕತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಅವರೂ ಉಪಸ್ಥಿತರಿದ್ದರು.

ಅಮೆರಿಕವು ತನ್ನ ಅತಿದೊಡ್ಡ ಮಿಲಿಟರಿ ಕಮ್ಯಾಂಡ್‌ ‘ಫೆಸಿಫಿಕ್ ಕಮ್ಯಾಂಡ್’ ಅನ್ನು ‘ಇಂಡೊ–ಪೆಸಿಫಿಕ್ ಕಮ್ಯಾಂಡ್’ ಎಂದು ಮರು ಮರುನಾಮಕರಣ ಮಾಡಿದ ಕೆಲ ದಿನಗಳಲ್ಲೇ ಈ ಮಹತ್ವದ ಮಾತುಕತೆ ನಡೆದಿದೆ. ದಕ್ಷಿಣ ಚೀನಾ ವಿಚಾರವಾಗಿ ಅಮೆರಿಕಕ್ಕೆ ಚೀನಾ ಜೊತೆಗೆ ಹೆಚ್ಚುತ್ತಿರುವ ವೈಮನಸ್ಯ ಹಾಗೂ ಭಾರತದ ಜೊತೆಗಿನ ಬಾಂಧವ್ಯ ವೃದ್ಧಿಯ ಬಯಕೆಯನ್ನು ಇದು ಸೂಚಿಸುತ್ತದೆ. ಭಾರತಕ್ಕೆ ಅಮೆರಿಕ ನೀಡಿರುವ ಪ್ರಾಮುಖ್ಯತೆಯನ್ನೂ ಈ ನಡೆ ತೋರಿಸುತ್ತದೆ.

ದಕ್ಷಿಣ ಚೀನಾ ಸಮುದ್ರದ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಯತ್ನಿಸುತ್ತಿರುವ ಚೀನಾ, ಅಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸುತ್ತಿರುವುದು ಅಮೆರಿಕದ ಈ ನಿರ್ಧಾರಕ್ಕೆ ಕಾರಣ.

ಇಲ್ಲಿ ನಡೆದ ಶಾಂಗ್ರಿಲಾ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಮೋದಿ ಅವರು, ‘ಭಾರತ ಮತ್ತು ಚೀನಾ ಪರಸ್ಪರ ನಂಬುಗೆ ಮತ್ತು ವಿಶ್ವಾಸದಿಂದ ಒಗ್ಗೂಡಿ ಕೆಲಸ ಮಾಡಿದರೆ ಏಷ್ಯಾ ಮತ್ತು ಇಡೀ ವಿಶ್ವಕ್ಕೆ ಉಜ್ವಲ ಭವಿಷ್ಯ ಇದೆ’ ಎಂದು ಅಭಿಪ್ರಾಯಪಟ್ಟಿದ್ದರು. ಇದೇ ವೇಳೆ ಮಾತನಾಡಿದ್ದ ಮ್ಯಾಟಿಸ್, ಇಂಡೊ–ಪೆಸಿಫಿಕ್ ವಲಯದ ಜಲಭಾಗಗಳು ಎಲ್ಲರಿಗೂ ಮುಕ್ತವಾಗಿರಬೇಕು ಎಂಬ ವಿಚಾರ ಪ್ರಸ್ತಾಪಿಸಿದ್ದರು.

ಬರಾಕ್ ಒಬಾಮ ಅವರ ಆಡಳಿತದ ಅವಧಿಯಿಂದಲೂ ಭಾರತವು ಅಮೆರಿಕದ ಮಹತ್ವದ ರಕ್ಷಣಾ ಪಾಲುದಾರ ದೇಶವಾಗಿ ಗುರುತಿಸಿಕೊಂಡಿದೆ. ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಅಮೆರಿಕ ನೀಡುತ್ತಾ ಬಂದಿದೆ.

ಗಾಂಧೀಜಿ ಫಲಕ ಅನಾವರಣ: ಇಲ್ಲಿನ ಕ್ಲಿಫರ್ಡ್‌ ತೀರದಲ್ಲಿ ಮಹಾತ್ಮ ಗಾಂಧಿ ಅವರ ಗೌರವಾರ್ಥ ಫಲಕವೊಂದನ್ನು ಮೋದಿ ಅವರು ಅನಾವರಣ ಮಾಡಿದರು. ಗಾಂಧೀಜಿ ಅವರ ಚಿತಾಭಸ್ಮವನ್ನು 1948ರ ಮಾರ್ಚ್ 27ರಂದು ಇಲ್ಲಿ ವಿಸರ್ಜಿಸಲಾಗಿತ್ತು. ಫಲಕ ಉದ್ಘಾಟನೆ ವೇಳೆ ಸಿಂಗಪುರದ ಮಾಜಿ ಪ್ರಧಾನಿ ಗೋ ಚೊಕ್ ಉಪಸ್ಥಿತರಿದ್ದರು. ‘ರಘುಪತಿ ರಾಘವ ರಾಜಾರಾಂ..’ ಹಾಗೂ ‘ವೈಷ್ಣವ ಜನತೊ..’ ಭಜನೆಗಳನ್ನು ಹಾಡಲಾಯಿತು.

ದೇವಸ್ಥಾನ, ಮಸೀದಿಗಳಿಗೆ ಮೋದಿ ಭೇಟಿ
ಸಿಂಗಪುರ ಪ್ರವಾಸದಲ್ಲಿರುವ ಮೋದಿ ಅವರು, ಇಲ್ಲಿನ ಪುರಾತನ ಮರಿಯಮ್ಮನ್ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ, ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಇಲ್ಲಿನ ಪುರೋಹಿತರು ಮೋದಿ ಅವರಿಗೆ ಚಿನ್ನಲೇಪಿತ ಶಾಲನ್ನು ಉಡುಗೊರೆಯಾಗಿ ನೀಡಿದರು.

ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಅವರು ಇದನ್ನು ಟ್ವೀಟ್ ಮಾಡಿದ್ದಾರೆ. ನಾಗಪಟ್ಟಣಂ ಮತ್ತು ಕಡಲೂರಿನಿಂದ ನಿರಾಶ್ರಿತರಾಗಿ ಬಂದಿದ್ದ ಜನರು 1827ರಲ್ಲಿ ಈ ದೇವಸ್ಥಾನ ನಿರ್ಮಿಸಿದ್ದರು.

ಚೂಲಿಯಾ ಮುಸ್ಲಿಂ ವ್ಯಾಪಾರಸ್ಥರು ನಿರ್ಮಿಸಿರುವ ಚೂಲಿಯಾ ಮಸೀದಿಗೆ ಮೋದಿ ಭೇಟಿ ನೀಡಿದರು. ಭಾರತದ ಕೋರಮಂಡಲ ಕರಾವಳಿ ತೀರದ ಜನರು ಅನ್ಸಾರಿ ಸಾಹಿಬ್ ಅವರ ನೇತೃತ್ವದಲ್ಲಿ 1826ರಲ್ಲಿ ಈ ಮಸೀದಿ ನಿರ್ಮಿಸಿದ್ದರು. ಮೋದಿ ಅವರು ಹಸಿರು ಶಾಲನ್ನು ಇಲ್ಲಿ ಸಮರ್ಪಿಸಿದರು.

ಬಳಿಕ ಬೌದ್ಧ ಮಂದಿರ ಹಾಗೂ ವಸ್ತುಸಂಗ್ರಹಾಲಯಕ್ಕೂ ಪ್ರಧಾನಿ ಭೇಟಿ ನೀಡಿದರು. ಬುದ್ಧನ ಒಂದು ಹಲ್ಲನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಆರ್ಕಿಡ್‌ಗೆ ಮೋದಿ ಹೆಸರು
ಇಲ್ಲಿನ ರಾಷ್ಟ್ರೀಯ ಆರ್ಕಿಡ್ ಗಾರ್ಡನ್‌ಗೆ ಭೇಟಿ ನೀಡಿದ ಮೋದಿ ಅವರ ನೆನಪಿಗೋಸ್ಕರ ಸಸ್ಯವೊಂದಕ್ಕೆ ಪ್ರಧಾನಿ ಮೋದಿ ಅವರ ಹೆಸರಿಡಲಾಯಿತು.

‘ಡೆಂಡ್ರೋಬಿಯಾಮ್ ನರೇಂದ್ರ ಮೋದಿ’ ಎಂದು ಹೆಸರಿಡಲಾದ ಈ ಗಿಡವು, 38 ಸೆಂ.ಮೀವರೆಗೆ ಹೂವಿನ ಗೊಂಚಲುಗಳನ್ನು ಬಿಡುತ್ತದೆ. ನೋಡಲು ಆಕರ್ಷಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT