ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಟಮಿ

ಕೃಷ್ಣ ವೇಷದಲ್ಲಿ ಕಂಗೊಳಿಸಿದ ಚಿಣ್ಣರು
Last Updated 23 ಆಗಸ್ಟ್ 2019, 20:31 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಶುಕ್ರವಾರ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಚಿಣ್ಣರು ಕೃಷ್ಣನ ವೇಷಧರಿಸಿ ಕಂಗೊಳಿಸಿದರು. ಕೃಷ್ಣ ವೇಷಧಾರಿಯಾದ ಮಗುವಿನ ಛಾಯಾಚಿತ್ರ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು.

ಹಲವು ಸ್ಟುಡಿಯೊಗಳು ಹಾಗೂ ವಸ್ತ್ರಾಲಂಕಾರದ ಅಂಗಡಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ವಿವಿಧ ಶಾಲೆಗಳಲ್ಲಿಯೂ ಕೃಷ್ಣವೇಷ ಸ್ಪರ್ಧೆಗಳು ಆಯೋಜನೆಗೊಂಡಿದ್ದವು. ಇದರಿಂದ ಕೃಷ್ಣನ ವೇಷ, ಉಡುಗೆ ತೊಡುಗೆಗಳಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿತ್ತು.

ಕೃಷ್ಣ ದೇವಸ್ಥಾನಗಳಲ್ಲಿ ಹಬ್ಬದ ಸಂಭ್ರಮ ಮೇರೆ ಮೀರಿತ್ತು. ತ್ಯಾಗರಾಜ ರಸ್ತೆಯ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು. ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು.

ಅರಮನೆಯ ಕೋಟೆ ಆವರಣದ ಪ್ರಸನ್ನ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಡೋಲೋತ್ಸವ, ತೆಪ್ಪೋತ್ಸವಗಳು ನಡೆದರೆ, ಗೋಕುಲಂನ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್‌ ಮತ್ತು ಕೃಷ್ಣ ಗಾನಸಭಾ ವತಿಯಿಂದ ಕೃಷ್ಣನಿಗೆ ವಿಶೇಷ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಅಶೋಕರಸ್ತೆಯ ಗೀತ ಮಂದಿರದ ಆವರಣದಲ್ಲಿ ಗೀತಾ ಪ್ರಚಾರಿಣಿ ಸಭಾ ಟ್ರಸ್ಟ್ ವತಿಯಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಭಾವಸಾರ ಕ್ಷತ್ರಿಯ ಮಂಡಳಿ ವತಿಯಿಂದ ಕೊತ್ವಾಲ್ ರಾಮಯ್ಯ ರಸ್ತೆಯ ದೇವಸ್ಥಾನದಲ್ಲಿ ಭಜನೆಗಳು ನಡೆದವು. ಮಧ್ಯರಾತ್ರಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ನಾರಾಯಣಶಾಸ್ತ್ರಿ ರಸ್ತೆಯ ಉಡುಪಿ ಶ್ರೀಕೃಷ್ಣ ಮಂದಿರದಲ್ಲಿಯೂ ಮಧ್ಯರಾತ್ರಿ ವಿಶೇಷ ಪೂಜೆ ನೆರವೇರಿತು.

ವಿಪ್ರ ಸಹಾಯವಾಣಿ ವತಿಯಿಂದ ಅಗ್ರಹಾರದ ಅಕ್ಕನ ಬಳಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಭಗವದ್ಗೀತೆಯ ಪುಸ್ತಕವನ್ನು ಉಚಿತವಾಗಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT