ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ವಿವಾದಕ್ಕೆ ಕೈಹಾಕಿದ್ದರಿಂದ ಸಮಸ್ಯೆ –ರೋಹಿಣಿ ಸಿಂಧೂರಿ

‘ಕೆರೆ ಒತ್ತುವರಿ ತೆರವು, ಸರ್ಕಾರಿ ಭೂಮಿ ರಕ್ಷಣೆಗೆ ಪ್ರಯತ್ನಿಸಿದೆ’
Last Updated 8 ಜೂನ್ 2021, 1:17 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲಾಧಿಕಾರಿಯಾಗಿ ಬಂದ ಮೊದಲ ಏಳು ತಿಂಗಳಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಕಳೆದ ಒಂದು ತಿಂಗಳಲ್ಲಿ ಸಮಸ್ಯೆ ಶುರುವಾಯಿತು. ಜಮೀನು ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇ ಇದಕ್ಕೆ ಕಾರಣ ಇರಬಹುದು’ ಎಂದು ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೋಮವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಮೈಸೂರಿಗೆ ಬಂದ ಒಂದೇ ತಿಂಗಳಲ್ಲಿ ಕೆರೆ ಒತ್ತುವರಿ ತೆರವು ವಿಚಾರಕ್ಕೆ ಕೈಹಾಕಿದೆ. ಸರ್ಕಾರಿ ಭೂಮಿ ರಕ್ಷಣೆಗೆ ಮುಂದಾದೆ. ಕೇರ್ಗಳ್ಳಿ ಕೆರೆ ಒತ್ತುವರಿ ತೆರವು ಮಾಡಿ ನೀರು ತುಂಬಿಸಲು ಪ್ರಯತ್ನಿಸಿದೆ. ಜೊತೆಗೆ ಕುರುಬಾರಹಳ್ಳಿ ಸರ್ವೇ ನಂ 4ರ 1,500 ಎಕರೆಗೂ ಹೆಚ್ಚಿನ ಜಾಗ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲೂ ಉತ್ತಮ ವಕೀಲರನ್ನು ಇಟ್ಟು ಹೋರಾಟ ಮಾಡುತ್ತಿದ್ದೇವೆ’ ಎಂದರು.

‘ಸರ್ಕಾರಿ ಜಾಗ, ಕೆರೆ ಉಳಿಸಿಕೊಳ್ಳಬೇಕು. ಹೀಗಾಗಿ, ಒತ್ತುವರಿ ತೆರವು ಮಾಡಲು ಗಮನ ಹರಿಸಿದೆ. ಕೆಲಸದ ಮೂಲಕವೇ ಉತ್ತರ ಕೊಡಲು ಪ್ರಯತ್ನಿಸಿದೆ. ಅಧಿಕಾರಿಗಳಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡಬೇಕು’ ಎಂದರು.

‘ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿದ್ದೆ. ಕೆಲಸ ಮಾಡುವಾಗ ಪ್ರತಿ ದಿನ ಅಡ್ಡಿಪಡಿಸುವುದು ಸರಿಯಲ್ಲ. ಕೋವಿಡ್‌ ಸಮಯದಲ್ಲಿ ಕೈಗೊಂಡ ವೈದ್ಯಕೀಯ ವಿಚಾರಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲೂ ಕೆಲವರು ಹಸ್ತಕ್ಷೇಪ ಮಾಡಿದರು’ ಎಂದು ಆರೋಪಿಸಿದರು.

‘ಚಾಮರಾಜನಗರ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳ ವಿಚಾರದಲ್ಲಿ ನ್ಯಾಯಾಲಯ ನೇಮಿಸಿದ್ದ ತನಿಖಾ ತಂಡ ಈಗಾಗಲೇ ವರದಿ ನೀಡಿದೆ. ಹೀಗಿದ್ದೂ, ಕೆಲವರು ಮತ್ತೆ ಅದೇ ವಿಚಾರ ಮಾತನಾಡುತ್ತಿದ್ದಾರೆ’ ಎಂದರು.

ಈಗಲೂ ವರದಿ ನೀಡಲಿ: ಸಾ.ರಾ.ಮಹೇಶ್
ಜಮೀನು ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದ್ದೇ ವರ್ಗಾವಣೆಗೆ ಕಾರಣ ಇರಬಹುದು ಎಂದು ರೋಹಿಣಿ ಸಿಂಧೂರಿ ಹೇಳಿರುವುದಕ್ಕೆ ತಿರುಗೇಟು ನೀಡಿರುವ ಶಾಸಕ ಸಾ.ರಾ.ಮಹೇಶ್‌, ‘ಅವರು ಈಗ ಇಲ್ಲಿಯ ಜಿಲ್ಲಾಧಿಕಾರಿ ಅಲ್ಲದಿರಬಹುದು. ಆದರೆ, ಈಗಲೂ ಐಎಎಸ್‌ ಅಧಿಕಾರಿಯೇ. ಎಲ್ಲೆಲ್ಲಿ ಭೂ ಅಕ್ರಮ ನಡೆದಿದೆ ಎಂಬುದರ ವಿವರವಾದ ವರದಿಯೊಂದನ್ನು ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುವ ಕೆಲಸ ಮಾಡಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT