ನಿರಂಹಕಾರ ರೂಪಿ ಪ್ರಕಾಶಕ ಅಪರೂಪ

7
ಡಿ.ಎನ್‌.ಲೋಕಪ್ಪ ಅಭಿನಂದನಾ ಕಾರ್ಯಕ್ರಮದಲ್ಲಿ

ನಿರಂಹಕಾರ ರೂಪಿ ಪ್ರಕಾಶಕ ಅಪರೂಪ

Published:
Updated:
Deccan Herald

ಮೈಸೂರು: ಪ್ರಕಾಶಕರ ಪೈಕಿ ನಿರಹಂಕಾರಿಗಳು ವಿರಳ. ಆದರೆ ಡಿ.ಎನ್‌.ಲೋಕಪ್ಪ ಅವರು ನಿರಹಂಕಾರ ರೂಪಿ ಪ್ರಕಾಶಕ ಎಂದು ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ವಿಶ್ಲೇಷಿಸಿದರು.

ಡಿ.ಎನ್.ಲೋಕಪ್ಪ ಅಭಿನಂದನಾ 70 ಸಮಿತಿಯು ಭಾನುವಾರ ಹಮ್ಮಿಕೊಂಡಿದ್ದ ಡಿ.ಎನ್‌.ಲೋಕಪ್ಪ 70 ಅಭಿನಂದನಾ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಲೋಕಪ್ಪನವರು 1 ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವುದೇ ವಿಸ್ಮಯದ ವಿಚಾರ. ಆದರೆ, ಅವರು ಪ್ರಕಟಿಸಿರುವ ಕೃತಿಗಳ ಪಟ್ಟಿಯನ್ನೇ ಇಟ್ಟುಕೊಳ್ಳದೇ ಇರುವುದು ಅದಕ್ಕಿಂತಲೂ ವಿಸ್ಮಯದ ಸಂಗತಿ. ಇದು ಅವರ ನಿರಹಂಕಾರ ವ್ಯಕ್ತಿತ್ವವನ್ನೂ ತೋರಿಸುತ್ತದೆ. ಪ್ರಕಾಶನ ವೃತ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ ನ್ಯಾಯ ಒದಗಿಸಿ, ಭಾಷೆ ಬೆಳೆಸಿದ ಅಪರೂಪದ ವ್ಯಕ್ತಿತ್ವ ಅವರದ್ದು ಎಂದು ಅವರು ಶ್ಲಾಘಿಸಿದರು.

‘ನಾನು ಬರೆದ ಕೃತಿಗಳ ಪಟ್ಟಿಯನ್ನು ನಾನು ಜೋಪಾನದಿಂದ ಇಟ್ಟುಕೊಂಡಿದ್ದೇನೆ. ಆ ಪಟ್ಟಿಯಿಂದ ನನಗೇನೂ ಪ್ರಯೋಜನವಿಲ್ಲ. ನನಗೆ ಅದೊಂದು ಶಿಸ್ತು. ಆದರೆ, ಕೆಲವರು ಈ ರೀತಿಯ ಪಟ್ಟಿಗಳನ್ನು ತಮ್ಮ ಸಾಧನೆಯ ಮೆಟ್ಟಿಲಾಗಿ ಬಳಸಿಕೊಳ್ಳುತ್ತಾರೆ. ಲೋಕಪ್ಪ ಎಂದೂ ಈ ರೀತಿಯ ಕೆಲಸಕ್ಕೆ ಇಳಿಯಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ನನ್ನದೂ ಲೋಕಪ್ಪನವರದರೂ ದಶಕಗಳ ಸ್ನೇಹ. ಕಷ್ಟದಿಂದ ಬೆಳೆದ ಲೋಕಪ್ಪ ಅನೇಕ ಸಾಹಿತಿಗಳನ್ನು ಗುರುತಿಸಿ ಬೆಳೆಸಿದ್ದಾರೆ. ಕಿರಿಯರಿಗೆ ಬೆನ್ನು ತಟ್ಟಿದ್ದಾರೆ. ಪ್ರಕಾಶನ ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಸವಾಲಿನ ಕೆಲಸ. ಅನೇಕ ಅಡೆತಡೆಗಳೇ ಹೆಚ್ಚಿರುತ್ತವೆ. ಹೀಗಿದ್ದೂ ಲೋಕಪ್ಪನವರು ತಾಳ್ಮೆಯಿಂದ 2 ದಶಕಗಳಿಗೂ ಹೆಚ್ಚಿನ ಕಾಲದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು‘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಅತಿಥಿಯಾಗಿ ಮಾತನಾಡಿ, ‘ನನ್ನ ‘ಮತಸಂತೆ’ ಕೃತಿಯನ್ನು ಅತಿ ತ್ವರಿತವಾಗಿ ಲೋಕಪ್ಪ ಪ್ರಕಟಿಸಿದರು. ನಾನು ಲೋಕಸಭಾ ಚುನಾವಣೆಗೆ ನಿಂತು ಫಲಿತಾಂಶ ಬರಲು 15 ದಿನಗಳಿರುವಾಗ ಒಂದು ವಾರದೊಳಗೆ ಕೃತಿಯನ್ನು ಪ್ರಕಟಿಸಿಕೊಟ್ಟರು. ಅದು ನಿಜವಾಗಿಯೂ ಸವಾಲಿನ ಕೆಲಸ. ಫಲಿತಾಂಶ ಬಂದ ಮೇಲೆ ಕೃತಿ ಪ್ರಕಟವಾದರೆ ಅದನ್ನು ಓದುಗರು ಬೇರೆಯದೇ ರೀತಿಯಲ್ಲಿ ಗ್ರಹಿಸುತ್ತಿದ್ದರು. ಆದರೆ, ಲೋಕಪ್ಪ ಅವರ ಸಮಯಪ್ರಜ್ಞೆಯಿಂದಾಗಿ ಕೃತಿಯು ಸಕಾಲಿಕವಾಗಿ ಪ್ರಕಟವಾಯಿತು’ ಎಂದು ಸ್ಮರಿಸಿದರು.

‘ಲೋಕಪ್ಪನವರು ಪುಸ್ತಕ ಉದ್ಯಾನವನ್ನು ನಿರ್ಮಿಸಬೇಕು ಎಂಬ ಕನಸು ಹೊಂದಿದ್ದಾರೆ. ಅದು ಶೀಘ್ರವೇ ನನಸಾಗಬೇಕು. ಅದಕ್ಕಾಗಿ ಎಲ್ಲರೂ ಸಾಂಘಿಕವಾಗಿ ಶ್ರಮಿಸಬೇಕು. ಈ ಉದ್ಯಾನದಿಂದ ಕನ್ನಡ ಭಾಷೆಯು ಬೆಳೆದು ಉಳಿಯಲು ಸಹಾಯವಾಗುತ್ತದೆ’ ಎಂದು ಹೇಳಿದರು.

ಕವಯತ್ರಿ ಡಾ.ಲತಾ ರಾಜಶೇಖರ್‌ ಮಾತನಾಡಿ, ‘ಲೋಕಪ್ಪನವರು ನನ್ನ ಮಹಾಕಾವ್ಯವನ್ನು ಪ್ರಕಟಿಸಿದರು. ಆಗ ನಾನು ಕರಡು ಪ್ರತಿಯನ್ನು ತಿದ್ದುತ್ತ ಅವರ ಕಚೇರಿಯಲ್ಲಿ ಗಂಟೆ ಗಟ್ಟಲೇ ಇರುತ್ತಿದ್ದೆ. ಲೋಕಪ್ಪನವರ ಕಚೇರಿ ಅವಧಿ ಮುಗಿದಿದ್ದರೂ ಬೇಸರ ಪಡದೆ, ನನ್ನ ಧ್ಯಾನಸ್ಥ ಸ್ಥಿತಿಗೆ ಚ್ಯುತಿ ಉಂಟುಮಾಡದೇ ಸಹಕರಿಸಿದರು. ಇದು ಅವರ ಅಕ್ಷರಗೌರವವನ್ನು ತೋರಿಸುತ್ತದೆ’ ಎಂದು ಶ್ಲಾಘಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿ ಡಿ.ಎನ್‌.ಲೋಕಪ್ಪ, ‘ನನ್ನ ಪ್ರಕಾಶನ ವೃತ್ತಿಯನ್ನು ತಪಸ್ಸಿನಂತೆ ನಡೆಸಿದೆ. ಸುತ್ತೂರು ಶ್ರೀಗಳು ಹಾಗೂ ತರಳಬಾಳು ಮಠದ ಶ್ರೀಗಳು ನನ್ನನ್ನು ಬೆಳೆಸಿದರು. ಅನೇಕ ಸಾಹಿತಿಗಳು ಬೆನ್ನುತಟ್ಟಿ ಸಹಕರಿಸಿದರು. ನನ್ನ ಪುಸ್ತಕ ಸೇವೆಯನ್ನು ಮತ್ತಷ್ಟು ಶ್ರದ್ಧೆಯಿಂದ ನಡೆಸುವೆ’ ಎಂದರು.

ಬಿಜೆಪಿ ಮುಖಂಡ ತೋಂಟದಾರ್ಯ, ಕಾಂಗ್ರೆಸ್‌ ಮುಖಂಡೆ ಎಂ.ಸಿ.ಮೋಹನಕುಮಾರಿ ಅತಿಥಿಯಾಗಿದ್ದರು. ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.‌‌‌

ಲೇಖಕ ಎನ್‌.ಎಸ್.ತಾರಾನಾಥ್‌ ಅಭಿನಂದನಾ ಭಾಷಣ ಮಾಡಿದರು. ಮ.ಗು.ಸದಾನಂದಯ್ಯ ಸ್ವಾಗತಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !