ಭಾನುವಾರ, ಸೆಪ್ಟೆಂಬರ್ 26, 2021
21 °C
ಹಿಂದಿನ ವರ್ಷಗಳಲ್ಲಿ ಕೊನೆಯ ಸ್ಥಾನಗಳಲ್ಲಿದ್ದ ಒಕ್ಕೂಟ: ಕೋವಿಡ್‌ ಕಾಲಘಟ್ಟದಲ್ಲೂ ಸಾಧನೆ

ಮೈಮುಲ್‌: ಸತತ 8 ತಿಂಗಳಿಂದ ಅಗ್ರಸ್ಥಾನ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಪ್ರತಿ ತಿಂಗಳು ನಡೆಸುವ ತನ್ನ ಒಕ್ಕೂಟಗಳ ಸಮಗ್ರ ಚಟುವಟಿಕೆಯ ಪರಾಮರ್ಶೆಯಲ್ಲಿ, ಸತತ ಎಂಟು ತಿಂಗಳಿಂದ ಅಗ್ರಸ್ಥಾನ ಕಾಪಾಡಿಕೊಂಡಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟ (ಮೈಮುಲ್‌) ಮೊದಲ ಸ್ಥಾನದಲ್ಲೇ ಮುಂದುವರೆದಿದೆ.

ಕೆಎಂಎಫ್‌ನ 14 ಹಾಲು ಒಕ್ಕೂಟಗಳಲ್ಲಿ ಮೈಮುಲ್‌ ಮೊದಲ ಸ್ಥಾನ ಪಡೆದಿರುವುದು ಇದೇ ಮೊದಲ ಬಾರಿ. ಈ ಹಿಂದಿನ ವರ್ಷಗಳಲ್ಲಿ 11, 12ನೇ ಸ್ಥಾನ ಗಳಿಸುತ್ತಿತ್ತು ಎಂದು ಮೈಮುಲ್‌ ಮೂಲಗಳು ತಿಳಿಸಿವೆ.

ಈ ಹಿಂದೆ ದಕ್ಷಿಣ ಕನ್ನಡ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾಸನದ ಹಾಮುಲ್‌ ಸೇರಿದಂತೆ ಇನ್ನಿತರ ಒಕ್ಕೂಟಗಳೇ ನಿರಂತರವಾಗಿ ಮೊದಲ ಸ್ಥಾನದಲ್ಲಿರುತ್ತಿದ್ದವು. ಇದೀಗ ಮೈಮುಲ್‌ ಸತತ ಎಂಟು ತಿಂಗಳಿಂದ ಮೊದಲ ಸ್ಥಾನ ಕಾಪಾಡಿಕೊಂಡಿದೆ. ಮುಂದಿನ ದಿನಗಳಲ್ಲೂ ಈ ಅಗ್ರಸ್ಥಾನ ಉಳಿಸಿಕೊಳ್ಳಲು ಶ್ರಮಿಸಲಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾನದಂಡ: ಕೆಎಂಎಫ್‌ ಐದು ಮಾನದಂಡಗಳನ್ನು ಅನುಸರಿಸಿ ಪ್ರತಿ ತಿಂಗಳು ತನ್ನ ಒಕ್ಕೂಟಗಳ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಲಿದೆ.

ಹಾಲಿನ ಉತ್ಪಾದನೆ, ಟೆಕ್ನಿಕಲ್‌ ಇನ್‌ಪುಟ್ಸ್‌, ಪ್ರೊಸೆಸಿಂಗ್‌ ಮತ್ತು ಹಾಲಿನ ಗುಣಮಟ್ಟ, ಮಾರಾಟ ಹಾಗೂ ಮಾರುಕಟ್ಟೆ, ಹಣಕಾಸಿನ ಸ್ಥಿತಿಗತಿಯನ್ನು ಪರಾಮರ್ಶಿಸಿ ಅಂಕ ನೀಡಲಿದೆ. ಪ್ರತಿಯೊಂದು ವಿಭಾಗದಲ್ಲೂ 100 ಅಂಕಗಳಿದ್ದು, ಐದು ವಿಭಾಗದಿಂದ ಹೆಚ್ಚಿನ ಅಂಕ ಗಳಿಸಿದ ಒಕ್ಕೂಟ ಮೊದಲ ಸ್ಥಾನ ಪಡೆಯಲಿದೆ
ಎಂದು ಕೆಎಂಎಫ್‌ ಮೂಲಗಳು ತಿಳಿಸಿವೆ.

ಸಕಾಲಕ್ಕೆ ಸೌಲಭ್ಯ: ಯಶಸ್ಸಿನ ಗುಟ್ಟು

‘ಹೈನುಗಾರರು ಮೈಮುಲ್‌ನ ಹಾಲು ಉತ್ಪಾದಕರ ಸಂಘಗಳಿಗೆ ಹಾಕಿದ ಹಾಲಿಗೆ ಸಕಾಲಕ್ಕೆ ಹಣ ಪಾವತಿಸುತ್ತಿದ್ದೇವೆ. ಎಲ್ಲಿಯೂ ವಿಳಂಬದ ಮಾತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ (ದಮುಲ್‌) ಒಕ್ಕೂಟವನ್ನು ಹೊರತುಪಡಿಸಿದರೆ, ಒಂದು ಲೀಟರ್‌ ಹಾಲಿಗೆ ಹೆಚ್ಚಿನ ದರ ನೀಡುತ್ತಿರುವುದು ನಾವೇ’ ಎನ್ನುತ್ತಾರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್‌.

‘ಪಶು ಆಹಾರವನ್ನು ಸಕಾಲಕ್ಕೆ ಪೂರೈಸುತ್ತಿರುವುದು ಈ ಸಾಧನೆಗೆ ಒಂದು ಕಾರಣ. ಹೈನುಗಾರರಿಗೆ ಜಾಗೃತಿ ಮೂಡಿಸಲಾಗಿದೆ. ಒಕ್ಕೂಟಕ್ಕೆ ಗುಣಮಟ್ಟದ ಹಾಲು ಹಾಕುವುದರಿಂದ ಏನೆಲ್ಲಾ ಪ್ರಯೋಜನವಾಗಲಿದೆ ಎಂಬುದರ ಅರಿವನ್ನು ಮೂಡಿಸಿದ್ದೇವೆ. ಒಕ್ಕೂಟದಿಂದ ಕೊಡಲು ಸಾಧ್ಯವಿರುವ ಎಲ್ಲ ಸೌಲಭ್ಯ ಒದಗಿಸಿದ್ದೇವೆ. ಹೈನುಗಾರರು, ಸಿಬ್ಬಂದಿಯ ಅವಿರತ ಪರಿಶ್ರಮ, ಆಡಳಿತ ಮಂಡಳಿಯ ಸಹಕಾರ ಈ ಸಾಧನೆಯ ಹಿಂದಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು