ಎಂಡಿಸಿಸಿ ಬ್ಯಾಂಕ್ ಚುನಾವಣೆ 12ರಂದು

7

ಎಂಡಿಸಿಸಿ ಬ್ಯಾಂಕ್ ಚುನಾವಣೆ 12ರಂದು

Published:
Updated:
Deccan Herald

ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಎಂಡಿಸಿಸಿ) ಚುನಾವಣೆ ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಸೋಮವಾರ ನಡೆಯಲಿದೆ.

12 ಕ್ಷೇತ್ರಗಳಿಗೆ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಿಗ್ಗೆ 9ರಿಂದ ಸಂಜೆ 4‌ರವರೆಗೆ ಚುನಾವಣೆ ನಡೆಯಲಿದ್ದು, ಸಂಜೆಯೇ ಮತಎಣಿಕೆ ಕಾರ್ಯವೂ ನಡೆಯಲಿದೆ. ಫಲಿತಾಂಶವೂ ಸೋಮವಾರವೇ ಪ್ರಕಟಗೊಳ್ಳಲಿದೆ.

ಒಟ್ಟು 17 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಅವಿರೋಧವಾಗಿ ನಿರ್ದೇಶಕರ ಆಯ್ಕೆಯಾಗಿದೆ. ತಿ.ನರಸೀಪುರದಿಂದ ಸಿ.ಬಸವೇಗೌಡ, ಹುಣಸೂರಿನಿಂದ ಜಿ.ಡಿ.ಹರೀಶ್ ಗೌಡ, ಕೆ.ಆರ್‌.ನಗರದಿಂದ ಅಮಿತ್‌ ವಿಶ್ವನಾಥ್, ಕೊಳ್ಳೇಗಾಲದಿಂದ ನರೇಂದ್ರ, ಯಳಂದೂರಿನಿಂದ ಜಯರಾಮ್‌ ಆಯ್ಕೆಯಾಗಿದ್ದಾರೆ. ಮಿಕ್ಕಂತೆ, ನಂಜನಗೂಡು, ಪಿರಿಯಾಪಟ್ಟಣ, ಮೈಸೂರು ತಾಲ್ಲೂಕು, ಹೆಗ್ಗಡದೇವನ ಕೋಟೆ, ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕು, ಮೈಸೂರು ಮತ್ತು ಚಾಮರಾಜನಗರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಕೇಂದ್ರ, ಪಟ್ಟಣ ಸಹಕಾರ ಬ್ಯಾಂಕ್‌ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘ, ಬಳಕೆದಾರರ ಸಹಕಾರ ಸಂಘ ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಒಟ್ಟು 12 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಪ್ರಮುಖರು ಕಣದಲ್ಲಿ: ಸೋಮವಾರ ನಡೆಯುವ ಚುನಾವಣೆಯಲ್ಲಿ ಒಟ್ಟು 27 ಮಂದಿ ಕಣದಲ್ಲಿದ್ದಾರೆ. ಬ್ಯಾಂಕಿನ ಹಾಲಿ ಅಧ್ಯಕ್ಷ ಎಸ್‌.ಚಂದ್ರಶೇಖರ್‌, ಎಸ್‌ಬಿಎಂ ಮಂಜು, ಮೆಲ್ಲಹಳ್ಳಿ ಮಹದೇವಸ್ವಾಮಿ, ಎ.ಟಿ.ಸೋಮಶೇಖರ್ ಸೇರಿದಂತೆ ಪ್ರಮುಖರು ಸ್ಪರ್ಧಿಸುತ್ತಿದ್ದಾರೆ. ಒಟ್ಟು 587 ಮತದಾರರಿದ್ದಾರೆ.

ಸಿಬ್ಬಂದಿ ನಿಯೋಜನೆ: ಚುನಾವಣೆಗೆ ಒಟ್ಟು 12 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ಮತಗಟ್ಟೆಗೂ ಒಬ್ಬ ಮುಖ್ಯ ಅಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸುರಕ್ಷೆಗಾಗಿ ಪೊಲೀಸ್‌ ಸಿಬ್ಬಂದಿಯ ನೆರವು ಕೇಳಲಾಗಿದೆ ಎಂದು ಚುನಾವಣಾ ಅಧಿಕಾರಿ ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಜೆ 4ರ ಬಳಿಕ ಮತಎಣಿಕೆ ನಡೆಯಲಿದೆ. ಬಳಿಕ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಚುನಾವಣಾ ಪ್ರಕ್ರಿಯೆಗಳನ್ನು ನಡೆಸಕೂಡದೆಂದು ಹಾಲಿ ಅಧ್ಯಕ್ಷ ಎಸ್‌.ಚಂದ್ರಶೇಖರ್‌ ಅವರು ಹೈ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ತೆರವುಗೊಳಿಸುವಂತೆ ಸಹಕಾರ ಇಲಾಖೆ, ಜಿಲ್ಲಾಡಳಿತ, ಸಿ.ಬಸವೇಗೌಡ, ಜಿ.ಡಿ.ಹರೀಶ್‌ಗೌಡ, ಬ್ಯಾಂಕಿನ ಉಪಾಧ್ಯಕ್ಷ ಹಾಗೂ ಸಿಇಒ ಅರ್ಜಿ ಸಲ್ಲಿಸಿದ್ದರು. ಅದರಂತೆ, ನ. 9ರಂದು ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !