ಮಂಗಳವಾರ, ಸೆಪ್ಟೆಂಬರ್ 27, 2022
27 °C

ಮೈಸೂರು: ಗ್ರಾ.ಪಂ ಸದಸ್ಯರಿಗೆ ​​​​​​​₹ 7 ಸಾವಿರ ಗೌರವಧನ ದೊರಕಿಸಿಕೊಡಲು ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಬಸ್ ಪಾಸ್, ಉಚಿತ ಆರೋಗ್ಯ ವಿಮೆ ಮತ್ತು ಕನಿಷ್ಠ ₹ 7 ಸಾವಿರ ಗೌರವಧನ ದೊರಕಿಸುವುದು ನನ್ನ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಹೋರಾಡುತ್ತೇನೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ ಭರವಸೆ ನೀಡಿದರು.

ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಗ್ರಾಮ ಪಂಚಾಯಿತಿ ಸದಸ್ಯರ ಸ್ವಾಭಿಮಾನಿ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ನಾನು ಸದಸ್ಯರ ಹಿತ ಕಾಯುವುದಕ್ಕೆ ಬದ್ಧವಿದ್ದೇನೆ. ಸೇನೆಯಲ್ಲಿ ಬಂದೂಕು ಹಿಡಿದು ಕೆಲಸ ಮಾಡಿದವ ನಾನು. ವಿಧಾನಮಂಡಲ ಅಧಿವೇಶನದಲ್ಲಿ ನಿಮ್ಮೆಲ್ಲರ ಬಗ್ಗೆಯೂ ದನಿ ಎತ್ತುತ್ತೇನೆ’ ಎಂದು ತಿಳಿಸಿದರು.

ತೀವ್ರವಾಗಿ ಪ್ರತಿಭಟಿಸಬೇಕು: ‘ಪಂಚಾಯಿತಿ‌ ಸದಸ್ಯರು, ರಾಜಕಾರಣಿಗಳ ಮನೆ ಬಾಗಿಲಿಗೆ ನಿಮಗಾಗಿ ಹೋಗುವುದನ್ನು ‌ಬಿಡಬೇಕು. ನಿಮ್ಮ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವವರನ್ನು ಕ್ಷಮಿಸಬಾರದು. ಪಿಡಿಒಗಳ ಬಳಿ ಚಮಚಾಗಿರಿ ಮಾಡಬಾರದು. ಲಂಚಾವತಾರಕ್ಕೆ ಅವಕಾಶ ಕೊಡಬಾರದು. ಹಕ್ಕು ಚ್ಯುತಿಯಾದಾಗ ತೀವ್ರವಾಗಿ ಪ್ರತಿಭಟನೆ ನಡೆಸಬೇಕು’ ಎಂದು ಹೇಳಿದರು.

‘ಗ್ರಾಮ ‍ಪಂಚಾಯಿತಿ ಸದಸ್ಯರಿಗೆ ಬಹಳಷ್ಟು ಅಧಿಕಾರವಿದೆ. ಆದರೆ, ತಿಳಿವಳಿಕೆಯ ಕೊರತೆ ಇದೆ. ಜಾಗೃತಿ ಮೂಡಿದರೆ ಅಧಿಕಾರಿಗಳನ್ನು ಪ್ರಶ್ನಿಸಬಹುದು’ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಸತೀಶ್ ಕಾಡಶೆಟ್ಟಿಹಳ್ಳಿ ತಿಳಿಸಿದರು.

ಶಾಸಕರಾಗುವುದು ಸುಲಭ: ‘ವಿಧಾನಪರಿಷತ್ತಿನ 75 ಸದಸ್ಯರಲ್ಲಿ 25 ಮಂದಿ‌ ನಮ್ಮಿಂದ ಆಯ್ಕೆಯಾದವರೇ ಆಗಿದ್ದಾರೆ. ನಾವು ಬಹಳ ಶಕ್ತಿಶಾಲಿಗಳು. ಆದರೆ, ಗ್ರಾಮ ಸ್ವರಾಜ್ ಆಶಯ ವಿಫಲವಾಗಿದೆ. ಸ್ವಾತಂತ್ರ್ಯದ ಅಮೃತ‌ ಮಹೋತ್ಸವದ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯದೆಡೆಗೆ ನಮ್ಮ ನಡೆ ಆಗಬೇಕಿದೆ. ಪ್ರತಿ ಗ್ರಾಮವನ್ನೂ ಸ್ವರಾಜ್ಯ ಮತ್ತು ಸ್ವಾವಲಂಬಿ ಆಗಿಸಲು ಗ್ರಾ.ಪಂ.ಗಳನ್ನು ಸಶಕ್ತಗೊಳ್ಳಬೇಕು. ಇದಕ್ಕಾಗಿ ನಾವು ಸಂಘಟಿತರಾಗಿ ಚಳವಳಿ ನಡೆಸಬೇಕು’ ಎಂದು ಕರೆ ನೀಡಿದರು.

‘ಶಾಸಕರು ಮತ್ತು ಲೋಕಸಭಾ ಸದಸ್ಯರು ಮಾತ್ರ ಅಧಿಕಾರ ಅನುಭವಿಸಬೇಕು ಎಂಬ ಮನೋಭಾವ ಇಂದಿಗೂ ಇದೆ. ಅಧಿಕಾರ ಹಂಚಿಕೊಳ್ಳಲು ಅಥವಾ ವಿಕೇಂದ್ರೀಕರಣಕ್ಕೆ ಅವರು ಬಯಸುತ್ತಿಲ್ಲ. ಪಂಚಾಯತ್‌ರಾಜ್ ವ್ಯವಸ್ಥೆ ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ, ಶಾಸಕರು ಪಂಚಾಯಿತಿಗಳಿಗೆ ಶಕ್ತಿ ತುಂಬುತ್ತಿಲ್ಲ. ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿಲ್ಲ’ ಎಂದು ವಿಷಾದ ವ್ಯಕ್ತ‍ಪಡಿಸಿದರು.

‘ಶಾಸಕರು, ಜನಪ್ರತಿನಿಧಿಗಳಂತೆಯೇ ಗ್ರಾಮ ಪಂಚಾಯಿತಿ ಸದಸ್ಯರೂ ಜನಪ್ರತಿನಿಧಿಗಳೇ. ಶಾಸಕರಾಗುವುದು ಸುಲಭ. ಆದರೆ, ಗ್ರಾಮ ಪಂಚಾಯಿತಿ‌ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ. ಆದ್ದರಿಂದ ಶಾಸಕರಿಗೆ ಸಿಗುವಷ್ಟೆ ಗೌರವ ನಮಗೂ ಸಿಗಬೇಕು. ನಮ್ಮದು ಸ್ವಯಾರ್ಜಿತ ಆಸ್ತಿ. ನಾವು ಯಾವ ಪಕ್ಷದ ಚಿಹ್ನೆಯನ್ನೋ ಅಥವಾ ಬೇರೆಯವರ ಫೋಟೊಗಳನ್ನೋ ಹಾಕಿಕೊಂಡು ಚುನಾವಣೆ ಮಾಡಿದವರಲ್ಲ. ನಮ್ಮ ಫೋಟೊ ಹಾಕಿಕೊಂಡು ಗೆದ್ದಿದ್ದೇವೆ. ಯಾರ ಗುಲಾಮರೂ ಅಲ್ಲ’ ಎಂದು ಗುಡುಗಿದರು.

ಸರ್ಕಾರ ಬೀಳಿಸಬಹುದು: ‘ವಸತಿ ಯೋಜನೆಗೆ ಶಾಸಕರು ಪಟ್ಟಿ ಕೊಡಬೇಕು ಎನ್ನುವುದನ್ನು ನಿಲ್ಲಿಸಬೇಕು. ಮಹಾತ್ಮ ಗಾಂಧೀಜಿ ಬಯಸಿದ ಗ್ರಾಮ ಸ್ವರಾಜ್ಯ ನಿರ್ಮಾಣಕ್ಕೆ ಎಲ್ಲರೂ ಸಂಘಟಿತರಾಗಬೇಕು’ ಎಂದರು.

‘ಕೋವಿಡ್ 2ನೇ ಅಲೆ ಸಂದರ್ಭದಲ್ಲಿ 69 ಗ್ರಾಮ ಪಂಚಾಯಿತಿ ಸದಸ್ಯರು ಮೃತಪಟ್ಟರು. ಆ ಸಾಂಕ್ರಾಮಿಕ ಹಳ್ಳಿಗಳಲ್ಲಿ ಹರಡದಂತೆ ನೋಡಿಕೊಂಡಿದ್ದರಲ್ಲಿ ನಮ್ಮ ‍ಪಾತ್ರ ಬಹಳಷ್ಟಿದೆ. ನಾವು ಮನಸ್ಸು ಮಾಡಿದರೆ ಸರ್ಕಾರ ಬೀಳಿಸಬಹುದು; ಯಾರನ್ನಾದರೂ ಸೋಲಿಸಬಹುದು’ ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಸಮಿತಿ ಅಧ್ಯಕ್ಷ ನಾಗರಾಜು ಎನ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಉಪಾಧ್ಯಕ್ಷೆ ಬೃಂದಾ ಕೃಷ್ಣೇಗೌಡ, ಖಜಾಂಚಿ ಶಶಿಕಲಾ, ಜಂಟಿ ಕಾರ್ಯದರ್ಶಿ ನಿಶಾಂತ್, ಸಲಹೆಗಾರ ರಾಜಾ ಹುಣಸೂರು, ಕಾನೂನು ಸಲಹೆಗಾರ ರಾಘವೇಂದ್ರ ಕೆ.ಎನ್., ಜಿಲ್ಲಾ ಘಟಕದ ಖಜಾಂಚಿ ಬೇಬಿ ಮಹೇಶ್, ಉಪಾಧ್ಯಕ್ಷರಾದ ರಂಗಸ್ವಾಮಿ, ಕೃಷ್ಣಮೂರ್ತಿ, ಸೌಮ್ಯಾ, ನಂದಿನಿ ರಮೇಶ್, ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾದೇಶ ಆಲ್ದೂರು ಪಾಲ್ಗೊಂಡಿದ್ದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಡತೊರೆ ಮಹೇಶ್ ಸ್ವಾಗತಿಸಿದರು.

ವಿದ್ಯುತ್‌ ಕಡಿತಕ್ಕೆ ಆಕ್ರೋಶ
ಸಮಾವೇಶದಲ್ಲಿ ವಿದ್ಯುತ್ ಪೂರೈಕೆ ಕಡಿತವಾಗಿದ್ದಕ್ಕೆ ‘ಸೆಸ್ಕ್‌’ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ಬರುವವರೆಗೂ ಮಂಜೇಗೌಡ ಮಾತನಾಡುವುದು ಬೇಡ ಎಂದು ಕೆಲವರು ಪಟ್ಟು ಹಿಡಿದರು. ಉದ್ದೇಶಪೂರ್ವಕಗಾಗಿಯೇ ಕಡಿತಗೊಳಿಸಲಾಗಿದೆ ಎಂದು ಕೆಲವರು ದೂರಿದರು. ಮುಖ್ಯಮಂತ್ರಿ, ಪ್ರಧಾನಿ ಕಾರ್ಯಕ್ರಮದಲ್ಲಿ ಹೀಗೆ ಮಾಡುತ್ತಾರೆಯೇ ಎಂದ ಆಕ್ರೋಶದಿಂದ ಕೇಳಿದರು. ಈ ವೇಳೆ, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ವಿಧಾನ‍ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಕರೆ ಮಾಡಿದ ಕೆಲ ಹೊತ್ತಿನಲ್ಲಿ ವಿದ್ಯುತ್‌ ಸಂಪರ್ಕ ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು