ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ 1 ಕೋಟಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ

Last Updated 1 ಮಾರ್ಚ್ 2019, 1:06 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿಯ ‘ಮೇರಾ ಬೂತ್, ಸಬ್‌ಸೇ ಮಜಬೂತ್’ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ ದೇಶದ ಒಂದು ಕೋಟಿ ಕಾರ್ಯಕರ್ತರೊಂದಿಗೆ ನಡೆಸಿದ ನೇರ ಸಂವಾದಕ್ಕೆ ಇಲ್ಲಿನ ಜೆ.ಕೆ.ಮೈದಾನದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಸಾಕ್ಷಿಯಾದರು. ಪ್ರಧಾನಿಯೊಂದಿಗೆ ಮಾತನಾಡುವ ಅವಕಾಶ ದೊರೆಯದೇ ಇದ್ದುದಕ್ಕೆ ಕೆಲವರು ನಿರಾಶರಾದರು.

ಬೃಹತ್ ಎಲ್ಇಡಿ ಪರದೆಯಲ್ಲಿ ನರೇಂದ್ರ ಮೋದಿ ಅವರ ಭಾಷಣ ಹಾಗೂ ಸಂವಾದದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂವಾದ ಹಿಂದಿ ಭಾಷೆಯಲ್ಲಿ ನಡೆಯಿತು.

ಪಕ್ಷವು ಬೂತ್‌ಮಟ್ಟದಲ್ಲಿ ಹೇಗೆ ಬಲಿಷ್ಠವಾಗಬೇಕು ಎಂಬುದನ್ನು ನರೇಂದ್ರ ಮೋದಿ ವಿವರಿಸಿದರು. ಇವರಿಗೆ ದೇಶದ ನಾನಾ ಭಾಗಗಳ ಕಾರ್ಯಕರ್ತರು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಶ್ರೀರಾಮುಲು, ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಹಾಗೂ ಪ್ರತಾಪಸಿಂಹ ಮತ್ತೆ ಸಂಸದರಾಗಬೇಕು’ ಎಂದು ಹೇಳಿದರು.

‘ನರೇಂದ್ರ ಮೋದಿ ಅವರು ನನ್ನನ್ನು ನೋಡಿದರೆ ಗುರುತಿಸುವುದಿಲ್ಲ. ಆದರೆ, ಪ್ರತಾಪಸಿಂಹ ಅವರನ್ನು ನೋಡಿದರೆ ಗುರುತು ಹಿಡಿಯುತ್ತಾರೆ. ಅವರು ಮೈಸೂರಿನಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಮತ್ತೆ ಮತ್ತೆ ಮೋದಿ ಅವರನ್ನು ಭೇಟಿ ಮಾಡಿದ್ದರ ಫಲ ಇದು’ ಎಂದು ಅವರು ತಿಳಿಸಿದರು.

ನಂತರ ಮಾತನಾಡಿದ ಸಂಸದ ಪ್ರತಾಪಸಿಂಹ, ‘ರಾಜ್ಯದಲ್ಲಿ ಎಲ್ಲ ಸಂಸದರಿಗಿಂತ ಹೆಚ್ಚು ಅನುದಾನ ತಂದ ಸಂಸದ ನಾನು ಎಂದು ಘಂಟಾಘೋಷವಾಗಿ ಹೇಳಿಕೊಳ್ಳಬಲ್ಲೆ’ ಎಂದರು. ಅವರು ಮಾಡಿರುವ ಸಾಧನೆಗಳ ಪಟ್ಟಿಯನ್ನು ಪ್ರಸ್ತಾಪಿಸಿ, ‘ಇನ್ನಷ್ಟು ಕೆಲಸಗಳನ್ನು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಬೇರೆ ಪಕ್ಷದ ಕಾರ್ಯಕರ್ತರು ಬೂತಿಗೆ ಎಷ್ಟು ದುಡ್ಡು, ಎಷ್ಟು ಬಾಟಲಿ ಕೊಡುತ್ತೀರಿ ಎಂದು ಕೇಳುತ್ತಾರೆ. ಆದರೆ, ನಮ್ಮ ಪಕ್ಷದ ಕಾರ್ಯಕರ್ತರು ಬೂತಿಗೆ ಇಷ್ಟು ಲೀಡ್ ಕೊಡುತ್ತೇವೆ ಎಂದು ಹೇಳುತ್ತಾರೆ. ಇದು ಬಿಜೆಪಿ ಕಾರ್ಯಕರ್ತರ ಹೆಗ್ಗಳಿಕೆ’ ಎಂದು ಹೇಳಿದರು.

ಹಿರಿಯ ಮುಖಂಡ ತೋಂಟದಾರ್ಯ, ಶಾಸಕ ಎಲ್.ನಾಗೇಂದ್ರ, ರಾಜ್ಯ ಘಟಕದ ಕಾರ್ಯದರ್ಶಿ ರಾಜೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಣ್ಣ, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಜೀವ್, ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಸಂಚಾಲಕ ಫಣೀಶ್, ಮುಖಂಡರಾದ ಸತೀಶ್, ರಾಜೇಶ್, ಮುರುಳಿ, ಅರುಣ್‌ಕುಮಾರ್‌ಗೌಡ, ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT