ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂಕ್ಸ್‌’ನಿಂದ ಜ್ಞಾನ ಹೆಚ್ಚಳ: ಕುಲಪತಿ

ಮಾನಸ ಗಂಗೋತ್ರಿಯಲ್ಲಿ ವಿಶಾಲ ಮುಕ್ತ ಆನ್‌ಲೈನ್ ಕೋರ್ಸ್‌ (ಮೂಕ್ಸ್‌) ಕಾರ್ಯಾಗಾರ
Last Updated 19 ಜೂನ್ 2019, 13:33 IST
ಅಕ್ಷರ ಗಾತ್ರ

ಮೈಸೂರು: ‘ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆರಂಭಿಸಿರುವ ವಿಶಾಲ ಮುಕ್ತ ಆನ್‌ಲೈನ್ ಕೋರ್ಸ್‌ (ಮೂಕ್ಸ್‌)ಗಳು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲಿವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ವತಿಯಿಂದ ವಿಜ್ಞಾನ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವಯಂ ಕೋರ್ಸ್‌ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ತಾಂತ್ರಿಕ ಕೌಶಲ ಬೆಳೆಸಿಕೊಳ್ಳಲು ಈ ಕೋರ್ಸ್‌ಗಳು ಸಹಕಾರಿಯಾಗಲಿವೆ’ ಎಂದು ಹೇಳಿದರು.

‘ಎಲ್ಲಿಂದಾದರೂ, ಯಾವಾಗಲಾದರೂ ಈ ಕೋರ್ಸ್‌ಗಳಿಗೆ ಪ್ರವೇಶ ಪಡೆದು, ಶಿಕ್ಷಣ ಪಡೆಯಬಹುದು. ಮೂಕ್ಸ್‌ ಕೋರ್ಸ್‌ಗಳು ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು. ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಲಿಕ್ಕಾಗಿಯೇ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ವಿ.ವಿ.ಯ ವಿಭಾಗದ ಡೀನರು, ಅಧ್ಯಕ್ಷರು, ನಿರ್ದೇಶಕರು ಯೋಜನೆ ರೂಪಿಸಬೇಕು’ ಎಂದು ಕಾರ್ಯಾಗಾರದಲ್ಲಿ ನೆರೆದಿದ್ದ ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದರು.

‘ಮಾನಸ ಗಂಗೋತ್ರಿ, ಹೇಮ ಗಂಗೋತ್ರಿ, ಮಂಡ್ಯ ಸ್ನಾತಕೋತ್ತರ ಕೇಂದ್ರಗಳಿಂದ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ, ಮೂಕ್ಸ್‌ನ 18 ಸ್ವಯಂ ಕೋರ್ಸಸ್‌ಗಳಿಗೆ 583 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದರು. ಇವರಲ್ಲಿ 163 ವಿದ್ಯಾರ್ಥಿಗಳು 2019ರ ಜ.19, 20ರಂದು ನಡೆದ ಪರೀಕ್ಷೆಗೆ ಹಾಜರಾಗಿದ್ದರು. 113 ವಿದ್ಯಾರ್ಥಿಗಳು ಪಾಸಾಗುವ ಮೂಲಕ 69.32% ಫಲಿತಾಂಶ ಲಭಿಸಿದೆ’ ಎಂದು ಕುಲಪತಿ ಮಾಹಿತಿ ನೀಡಿದರು.

ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ ‘ಮೂಕ್ಸ್ ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಲಿದ್ದು, ಬೆರಳ ತುದಿಯಲ್ಲಿ ಗುಣಮಟ್ಟದ ಶಿಕ್ಷಣ ಲಭಿಸಲಿದೆ. ನಾಲ್ಕು ಗೋಡೆಗಳ ನಡುವೆ ಕುಳಿತು ವಿದ್ಯಾರ್ಥಿಗಳು ಕಲಿಯುವ ಅಗತ್ಯವಿರಲಾರದು. ಮೈಸೂರು ವಿ.ವಿ. ಪೂರ್ಣ ಪ್ರಮಾಣದ ಸ್ವಯಂ ಕೋರ್ಸ್‌ ಅಳವಡಿಸಿಕೊಂಡು, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯಶಸ್ವಿಯಾಗಿದೆ’ ಎಂದರು.

ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಎಸ್.ಶ್ರೀಕಂಠಸ್ವಾಮಿ, ಸ್ವಯಂ ಕೋರ್ಸಸ್‌ನ ಸಂಯೋಜಕ ಡಾ.ಎಚ್.ಎಸ್.ಕುಮಾರ್, ವಿ.ವಿ.ಯ ಹಣಕಾಸು ಅಧಿಕಾರಿ ಪ್ರೊ.ಬಿ.ಮಹದೇವಪ್ಪ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT