ಮಂಗಳವಾರ, ಜೂನ್ 15, 2021
23 °C
ಸರಗೂರು: ಹೆಣ್ಣುಮಗುವಿನ ಜನ್ಮದಿನಕ್ಕೆ ಬಟ್ಟೆ ತರುವುದಾಗಿ ಹೇಳಿದ್ದ ಗೃಹಿಣಿ

ಮಗುವಿನೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರಗೂರು: ಕೌಟುಂಬಿಕ ಕಲಹದಿಂದ ಬೇಸತ್ತು  ಶನಿವಾರ ಮಗುವಿನೊಂದಿಗೆ ನುಗು ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಜಯಲಕ್ಷ್ಮೀಪುರ ಗ್ರಾಮದ  ಸುಧಾಮಣಿ (24), ಮಗಳು ಅನುಶ್ರೀ (3) ಮೃತಪಟ್ಟವರು.

‘ಹುಣಸೂರು ತಾಲ್ಲೂಕಿನ ಹನುಮಂತನಗರದ ವೆಂಕಟ ಭೋವಿ ಅವರ ಪುತ್ರ ಕೃಷ್ಣಪ್ಪ ಅವರೊಂದಿಗೆ ಎಂಟು ವರ್ಷಗಳ ಹಿಂದೆ ಸುಧಾಮಣಿ ವಿವಾಹವಾಗಿತ್ತು. ಮದ್ಯ ವ್ಯಸನಿಯಾಗಿದ್ದ ಕೃಷ್ಣಪ್ಪನೊಂದಿಗೆ ಜಗಳವಾಡಿಕೊಂಡು ಮೂರು ತಿಂಗಳ ಹಿಂದೆ ತವರು ಮನೆ ಜಯಲಕ್ಷ್ಮೀ‍ಪುರಕ್ಕೆ ಬಂದು ಸುಧಾಮಣಿ ನೆಲೆಸಿದ್ದರು. ಮಗುವಿನ ಜನ್ಮದಿನಕ್ಕೆ ಬಟ್ಟೆ ತರುವುದಾಗಿ ಹೇಳಿ ಸರಗೂರಿಗೆ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ‍ಪೊಲೀಸರು ಮಾಹಿತಿ ನೀಡಿದರು.

ವರ್ಷದ ಹಿಂದೆ ಸುಧಾಮಣಿ ಅವರ ಅಕ್ಕ ಯಶೋದಾ ಕೂಡ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

ಎಸ್ಐ ದಿವ್ಯಾ, ಎಎಸ್ಐ ಲಿಂಗರಾಜು, ಅಶ್ವತ್‌ ಕುಮಾರ್, ಮುಖ್ಯ ಕಾನ್‌ಸ್ಟೆಬಲ್‌ ಶ್ರೀಕಂಠಸ್ವಾಮಿ, ಮೋಹನರಾಜ್ ಅರಸ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ಸಾವು

ಸರಗೂರು: ಚನ್ನೇಗೌಡನ ಹುಂಡಿ ಗ್ರಾಮದಲ್ಲಿ ಶನಿವಾರ ಮರದಿಂದ ಸೊಪ್ಪು ಕತ್ತರಿಸುವಾಗ ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟಿದ್ದಾನೆ.

ತಾಲ್ಲೂಕಿನ ಹಾದನೂರು ಗ್ರಾಮದ ಸಂತೋಷ್ ಕುಮಾರ್ (24) ಮೃತಪಟ್ಟ ಯುವಕ.

ಮೇಕೆಗಳಿಗೆ ಸೊಪ್ಪು ಕತ್ತರಿಸಲು ಶನಿವಾರ ಮರಕ್ಕೆ ಹತ್ತಿದ ಸಂತೋಷ್‌ಗೆ ಗಾಳಿ ಬೀಸಿದ್ದರಿಂದ ಕೊಂಬೆ ಪಕ್ಕದಲ್ಲಿದ್ದ ವಿದ್ಯುತ್‌ ತಂತಿ ತಗುಲಿದೆ. ವಿದ್ಯುತ್ ಆಘಾತಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಎಇಇ ಕಿರಣ್, ಎಇ ಅಶೋಕ್, ಎಎಸ್ಐ ಬಿ.ಕೆ.ಅಶ್ವತ್‌ ಕುಮಾರ್, ಕಾನ್‌ಸ್ಟೆಬಲ್‌ ರಮೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಸರಗೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆ ನಾಪತ್ತೆ: ಕೊಲೆ ಶಂಕೆ

ಬೆಟ್ಟದಪುರ: ಇಲ್ಲಿನ ನಿವಾಸಿ ಗಂಗಮ್ಮ ಎಂಬ ಮಹಿಳೆಯು ಆ. 7ರಿಂದ ನಾಪತ್ತೆಯಾಗಿದ್ದಾರೆ.

ಈ ಕುರಿತು ಗೋವಿಂದೇಗೌಡ ಎಂಬುವವರು ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸಂಬಂಧಿಕರಿಗೂ, ಇವರಿಗೂ ಜಗಳ ನಡೆದಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು