ಶನಿವಾರ, ಅಕ್ಟೋಬರ್ 8, 2022
21 °C

ಸಂಗೀತ ವಿಶ್ವವಿದ್ಯಾಲಯಕ್ಕೆ ಮುಡಾ ಜಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಕೊನೆಗೂ ಸ್ವಂತ ಜಾಗ ಸಿಕ್ಕಿದೆ.

‘ಮುಡಾದಿಂದ ಚಾಮುಂಡಿಬೆಟ್ಟದ ಎದುರು ಸರ್ದಾರ್ ವಲ್ಲಭಾಬಾಯಿ ಪಟೇಲ್‌ ನಗರ (ಪೊಲೀಸ್ ಲೇಔಟ್)ದಲ್ಲಿ 6 ಎಕರೆ (20,852 ಚದುರ ಮೀಟರ್) ಜಾಗ ದೊರೆತಿದೆ. ವಿಶ್ವವಿದ್ಯಾಲಯದ ಹೆಸರಿಗೆ ಜಾಗದ ನೋಂದಣಿ ಪ್ರಕ್ರಿಯೆಯು ಶುಕ್ರವಾರ ಪೂರ್ಣಗೊಂಡಿತು’ ಎಂದು ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿಯಾಗಿ ಎರಡೂಮುಕ್ಕಾಲು ಎಕರೆಯನ್ನು ಹಾಸ್ಟೆಲ್‌ ನಿರ್ಮಾಣಕ್ಕಾಗಿ ಕೇಳಿದ್ದೇವೆ. ಮುಡಾ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಯೋಜಿತ ಜಾಗದ ಸಮೀಪದಲ್ಲೇ ಕೊಡುವುದಾಗಿ ತಿಳಿಸಿದ್ದಾರೆ’ ಎಂದರು.

‘ಮೂರು ತಿಂಗಳೊಳಗೆ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡುವ ಯೋಜನೆಯನ್ನು ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ಹಿಂದೆ ಕೆಲವು ಜಾಗ ನೀಡಲಾಗಿತ್ತಾದರೂ ಅದನ್ನು ಪಡೆದುಕೊಳ್ಳಲು ಕೆಲ ತೊಡಕು ಎದುರಾಗಿತ್ತು. ಕ್ಯಾಂಪಸ್‌ ಕೇಂದ್ರ ಸ್ಥಾನದ 20 ಕಿ.ಮೀ. ಅಂತರದೊಳಗೆ ಇರಬೇಕು ಎಂದು ಯುಜಿಸಿ ಹೇಳಿದೆ. ಹೀಗಾಗಿ, ಹುಣಸೂರಿನಲ್ಲಿ ನೀಡಿದ್ದ ಜಾಗವು ಮಾರ್ಗಸೂಚಿಗೆ ಹೊಂದಾಣಿಕೆಯಾಗಲಿಲ್ಲ. ಕೆಎಸ್‌ಒಯುನಿಂದ ಮಂಡಕಳ್ಳಿಯಲ್ಲಿ ಕಟ್ಟಡ ತೆಗೆದುಕೊಂಡಿದ್ದಾಗ ವಿದ್ಯಾರ್ಥಿಗಳು ಬರಲಿಲ್ಲ. ಸಾತಗಳ್ಳಿಯಲ್ಲಿ ಹೈಟೆನ್ಷನ್ ಮಾರ್ಗ ಹಾದು ಹೋಗಿದ್ದರಿಂದ ಹಾಗೂ ವಿವಾದ ಇದ್ದಿದ್ದರಿಂದ ಆ ಜಾಗ ಕೈಬಿಡಲಾಗಿತ್ತು.

ಈಗ ದೊರೆತಿರುವ ಮುಡಾ ಜಾಗ 2021ರಲ್ಲೇ ದೊರೆತಿತ್ತು. ಈಗ ನೋಂದಣಿಯಾಗಿದೆ.

ಕಟ್ಟಡ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ಅನುದಾನ ಬರುತ್ತದೆ. ಹಿಂದೆ ಕಟ್ಟಡ ನಿರ್ಮಾಣಕ್ಕಾಗಿ ₹ 25 ಕೋಟಿ ಬೇಕಾಗುತ್ತದೆಂದು ಅಂದಾಜಿಸಲಾಗಿತ್ತು. ಈಗ ಮತ್ತಷ್ಟು ಹೆಚ್ಚಿನ ಅನುದಾನ ಬೇಕಾಗುವ ನಿರೀಕ್ಷೆ ಇದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.