ಭಾನುವಾರ, ಅಕ್ಟೋಬರ್ 25, 2020
22 °C
ಅ.19ರಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ; ಪ್ರಧಾನಿ ಭಾಷಣ

ಮೈಸೂರು ವಿವಿ ಘಟಿಕೋತ್ಸವ: 29,018 ಮಂದಿಗೆ ಪದವಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವ ಅ.19ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಲಿರುವುದು ಹೆಮ್ಮೆಯ ಸಂಗತಿ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರಧಾನಿ ಅವರು ವರ್ಚುವಲ್‌ ವೇದಿಕೆ ಮೂಲಕ ಬೆಳಿಗ್ಗೆ 11.15 ರಿಂದ 25 ನಿಮಿಷ ಭಾಷಣ ಮಾಡಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಮಾರ್ಗಸೂಚಿಯಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕ್ರಾಫರ್ಡ್‌ ಹಾಲ್‌ಗೆ 100 ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿಯ ಸದಸ್ಯರು ಪಾಲ್ಗೊಳ್ಳುವರು. ಅತಿಹೆಚ್ಚಿನ ಪದಕ ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡ 30 ಮಂದಿಗೆ ಬೆಳಗ್ಗಿನ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.

‘ಮಧ್ಯಾಹ್ನ 2.30 ರಿಂದ ಕಾರ್ಯಕ್ರಮ ಮುಂದುವರಿಯಲಿದೆ. ಅನಂತಪುರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಎ.ಕೋರಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಎಲ್ಲ ನಿಕಾಯಗಳ ವಿದ್ಯಾರ್ಥಿಗಳಿಗೆ ತಲಾ 25 ಮಂದಿಯ ಬ್ಯಾಚ್‌ಗಳಲ್ಲಿ ಮಧ್ಯಾಹ್ನ ಪದವಿ ಪ್ರದಾನ ಮಾಡಲಾಗುವುದು. 100ನೇ ಘಟಿಕೋತ್ಸವ ಆಗಿರುವ ಕಾರಣ ಎಲ್ಲರಿಗೂ ಸಮಾರಂಭದಲ್ಲೇ ಪದವಿ ಪ್ರದಾನ ಮಾಡಬೇಕು ಎಂಬುದು ನಮ್ಮ ಉದ್ದೇಶ’ ಎಂದು ಅವರು ವಿವರಿಸಿದರು.

29,018 ಮಂದಿಗೆ ಪದವಿ ಪ್ರದಾನ: ಈ ಬಾರಿ 29,018 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ. ಈ ಪೈಕಿ 18,344 ಮಹಿಳೆಯರು ಮತ್ತು 10,674 ಪುರುಷರು ಪದವಿ ಪಡೆಯಲಿದ್ದಾರೆ. ಇದರಲ್ಲಿ 20,393 ಮಂದಿಗೆ ಸ್ನಾತಕ ಪದವಿ ಹಾಗೂ 7,971 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿಯ 1,807 ಪುರುಷರು ಮತ್ತು 3,028 ಮಹಿಳೆಯರು ಸೇರಿದಂತೆ 4,835 ಅಭ್ಯರ್ಥಿಗಳಿಗೆ ಹಾಗೂ ಪರಿಶಿಷ್ಟ ಪಂಗಡದ 533 ಪುರುಷರು ಮತ್ತು 839 ಮಹಿಳೆಯರು ಒಳಗೊಂಡಂತೆ 1,372 ಮಂದಿಗೆ ಪದವಿ ಪ್ರದಾನ ಮಾಡಲಾಗುತ್ತದೆ ಎಂದರು.

654 ಮಂದಿಗೆ ಪಿಎಚ್‌.ಡಿ: ಘಟಿಕೋತ್ಸವದಲ್ಲಿ 264 ಮಹಿಳೆಯರು ಮತ್ತು 390 ಪುರುಷರು ಒಳಗೊಂಡಂತೆ ಒಟ್ಟು 654 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಒಟ್ಟು 392 ಪದಕಗಳು ಮತ್ತು 198 ನಗದು ಬಹುಮಾನಗಳನ್ನು 230 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಇದರಲ್ಲಿ 156 ಮಹಿಳೆಯರು ಇದ್ದಾರೆ. ಪದಕಗಳನ್ನು ಅಭ್ಯರ್ಥಿಗಳ ಕೊರಳಿಗೆ ಹಾಕುವ ಬದಲು ಬಾಕ್ಸ್‌ಗಳಲ್ಲಿ ಹಾಕಿ ಅವರಿಗೆ ನೀಡಲಾಗುತ್ತದೆ ಎಂದರು.

ಘಟಿಕೋತ್ಸವ ಕಾರ್ಯಕ್ರಮ ವಿಶ್ವವಿದ್ಯಾಲಯದ ಅಧಿಕೃತ ವೈಬ್‌ಸೈಟ್‌ನಲ್ಲಿ (https://uni-mysore.ac.in/), ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ.ಮಹದೇವನ್‌ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು