ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಅಭಿವೃದ್ಧಿ ಕಾಣದೆ ಸೊರಗಿದ ಕೆರೆ, ಕಾಮಗಾರಿಗೆ ಅನುದಾನದ ಕೊರತೆ

ಜಯಪುರ ಸಮೀಪದ ಎಣ್ಣೆಹೊಳೆ ಕೆರೆಗೆ ಮೈಸೂರಿನ ತ್ಯಾಜ್ಯ ನೀರು; ಮಲಿನಗೊಂಡ ಜಲಮೂಲ

ಬಿಳಿಗಿರಿ ಆರ್. Updated:

ಅಕ್ಷರ ಗಾತ್ರ : | |

Prajavani

ಜಯಪುರ: ಮೈಸೂರು ನಗರದಿಂದ ಕೂಗಳತೆ ದೂರದಲ್ಲಿರುವ ದಡದಹಳ್ಳಿಯ ‘ಎಣ್ಣೆಹೊಳೆ ಕೆರೆ’ಗೆ ವಿವಿಧ ಬಡಾವಣೆಗಳ ಕೊಳಚೆ ನೀರು ಸೇರಿ ಕಲುಷಿತಗೊಂಡಿದೆ.

ಮೂರು ದಶಕದ ಹಿಂದೆ ಕೆರೆ ನೀರನ್ನು ಬಳಸಿ ಸುಮಾರು 650 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈಗ ಕೆರೆಗೆ ಕೊಳಚೆ ನೀರು ಸೇರಿಕೊಂಡಿರುವುದರಿಂದ ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಸೊಪ್ಪು, ತರಕಾರಿ, ಕಬ್ಬು, ಶುಂಠಿ ಹುಲ್ಲು ಬೆಳೆಯಲು ಮಾತ್ರ  ನೀರನ್ನು ಬಳಸುತ್ತಿದ್ದಾರೆ.

176 ಎಕರೆ ವಿಸ್ತೀರ್ಣವುಳ್ಳ ಕೆರೆಗೆ ಮೈಸೂರು ನಗರದ ಬೋಗಾದಿ, ವಿಜಯನಗರ, ಸರಸ್ವತಿಪುರಂ, ಕುವೆಂಪುನಗರ, ವಿವೇಕಾನಂದ ನಗರ, ಗಂಗೋತ್ರಿ ಬಡಾವಣೆ, ಶಾರದಾದೇವಿ ನಗರ, ಶ್ರೀರಾಂಪುರ, ಜೆ.ಪಿ.ನಗರ, ಮಹದೇವಪುರ ಸೇರಿದಂತೆ ವಿವಿಧ ಭಾಗಗಳಿಂದ ತ್ಯಾಜ್ಯ ನೀರು ರಾಯನಕೆರೆ ಮತ್ತು ಕಳಲವಾಡಿ ಮಾರ್ಗವಾಗಿ ಕೆರೆಗೆ ಸೇರುತ್ತಿದೆ.

ಜಯಪುರ ಹೋಬಳಿ ವ್ಯಾಪ್ತಿಯ ದಡದಹಳ್ಳಿ, ಸಿಂಧುವಳ್ಳಿ, ಕಳಲವಾಡಿ, ಉದ್ಬೂರು ಕೆರೆ ಬಳಕೆದಾರ ಗ್ರಾಮಗಳು. ಸಿಂಧುವಳ್ಳಿ, ಉದ್ಬೂರು ಗ್ರಾಮ ಪಂಚಾಯಿತಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರಿದ ಕೆರೆಯ ಅಭಿವೃದ್ಧಿ ವಿಚಾರದಲ್ಲಿ ಸಮನ್ವಯದ ಕೊರತೆ ಇದೆ. ಅನುದಾನದ ಕೊರತೆಯಿಂದಲೂ ಅಭಿವೃದ್ಧಿ ಕಾಣದೆ ಸೊರಗಿದೆ. ಹೂಳು ತುಂಬಿಕೊಂಡಿದ್ದು, ಜೊಂಡು ಹುಲ್ಲು ಬೆಳೆದಿದೆ.

‘ಕೆರೆಯ 60 ಎಕರೆ ಪ್ರದೇಶ ಒತ್ತುವರಿಯಾಗಿದೆ. ತೆರವು ಕಾರ್ಯಾಚರಣೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂಬ ಆರೋಪ ಸ್ಥಳೀಯರದ್ದು.

ಮೈಸೂರು ನಗರದಿಂದ ಹರಿದು ಬರುವ ಕೊಳಚೆ ನೀರನ್ನು ಸಂಸ್ಕರಿಸಲು ರಾಯನಕೆರೆ ಭಾಗದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಅಲ್ಲಿ ಸಂಸ್ಕರಿಸಿದ ನೀರನ್ನು ದಡದಹಳ್ಳಿ ಕೆರೆಗೆ ಬಿಡಲಾಗುತ್ತಿದೆ. ಆದರೆ, ಅದು ಸಮರ್ಪಕವಾಗಿ ಸಂಸ್ಕರಣೆಯಾಗುತ್ತಿಲ್ಲ. ದಡದಹಳ್ಳಿ ಕೆರೆಯಿಂದ ಸಿಂಧುವಳ್ಳಿ, ಕಡಕೋಳ ಮಾರ್ಗವಾಗಿ ನಂಜನಗೂಡು ಸಮೀಪದ ಕಪಿಲಾ ನದಿ ಸೇರುತ್ತಿದೆ.

‘ಮೈಸೂರು ನಗರದಿಂದ ಬರುವ ಕೊಳಚೆ ನೀರು ದಡದಹಳ್ಳಿ ಗ್ರಾಮದ ಮಧ್ಯಭಾಗದಿಂದಲೇ ಹರಿದು ಕೆರೆ ಸೇರುತ್ತದೆ. ದುರ್ವಾಸನೆ ಜತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ’ ಎಂದು ಗ್ರಾಮದ ಹಿರಿಯರಾದ ಬಸಪ್ಪ ಹಾಗೂ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದ ಹೊರವರ್ತುಲ ರಸ್ತೆಯ ಸಮೀಪದ ರಾಯನಕೆರೆಯಲ್ಲಿ 6 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಕೊಳಚೆ ನೀರನ್ನು ಎರಡು ಹಂತಗಳಲ್ಲಿ ಶುದ್ಧೀಕರಿಸಿ ಬಿಡಲಾಗುತ್ತಿದೆ. ಹೀಗಾಗಿ ಕೊಳಚೆ ನೀರು ದಡದಹಳ್ಳಿಗೆ ಸೇರುತ್ತಿಲ್ಲ’ ಎಂದು ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್ ಧನುಷ್ ತಿಳಿಸಿದರು.

‘ಕೆರೆ ಒತ್ತುವರಿಯಾಗಿರುವ ಮಾಹಿತಿ ಇದೆ. ಕೆರೆ ಜಾಗ ಮೂರು ಗ್ರಾಮಗಳ ಸರ್ವೆ ನಂಬರ್‌ಗಳಿಗೆ ಬರಲಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು’ ಎಂದು ಜಯಪುರ ನಾಡಕಚೇರಿ ಉಪ ತಹಶೀಲ್ದಾರ್ ಮಂಜುನಾಥ್ ಹೇಳಿದರು.

‘ಈ ಹಿಂದೆ ಸಣ್ಣ ನೀರಾವರಿ ನಿಗಮದ ಅಧಿಕಾರಿಗಳು ಕೆರೆಯಲ್ಲಿ ಮೀನು ಸಾಕಣೆಗೆ ಅವಕಾಶ ಕಲ್ಪಿಸಿದ್ದರು. ಕಲುಷಿತ ನೀರು ಸೇರುತ್ತಿರುವುದರಿಂದ ಮೀನುಗಾರಿಕೆಗೆ ಹಿನ್ನಡೆಯುಂಟಾಗಿದೆ. ಕೆರೆಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು’ ಎಂದು ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರವಿಕುಮಾರ್ ತಿಳಿಸಿದರು.

‘10 ಎಕರೆ ಒತ್ತುವರಿ ತೆರವಿಗೆ ಕ್ರಮ’
ಜಯಪುರ ಹೋಬಳಿ ವ್ಯಾಪ್ತಿಯಲ್ಲಿ ಬೀರಿಹುಂಡಿ, ಮರಟಿಕ್ಯಾತನಹಳ್ಳಿ, ಮದ್ದೂರು, ಒಡವಿನಕಟ್ಟೆ ಕೆರೆ, ಜಯಪುರದ ಹೊಸಕೆರೆ ಮತ್ತು ಕೆಗ್ಗೆರೆ ಕೆರೆಗಳು ಪ್ರಮುಖವಾದವು. ಧನಗಹಳ್ಳಿ ಕೆರೆ, ಹಾರೋಹಳ್ಳಿ, ಎಸ್‌.ಕಲ್ಲಹಳ್ಳಿ, ಗುಜ್ಜೇಗೌಡನಪುರ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ಹೊಸಕೆರೆ ಹಾಗೂ ಕೆಗ್ಗೆರೆ ಕೆರೆಗಳಲ್ಲಿ ಸುಮಾರು 10 ಎಕರೆ ಒತ್ತುವರಿಯಾಗಿದ್ದು ಪರಿಶೀಲಿಸಿ ತೆರವುಗೊಳಿಸುವುದಾಗಿ ಉಪತಹಶೀಲ್ದಾರ್‌ ಮಂಜುನಾಥ್‌ ತಿಳಿಸಿದ್ದಾರೆ.

***

ಕೆರೆ ಒತ್ತುವರಿ ತೆರವುಗೊಳಿಸಬೇಕು. ಕೊಳಚೆ ನೀರು ಸೇರದಂತೆ ತಡೆದು, ಅಭಿವೃದ್ಧಿಪಡಿಸಬೇಕು.
–ನಂಜುಂಡಸ್ವಾಮಿ, ದಡದಹಳ್ಳಿ

***

ಕೆರೆ ಸಮೀಪ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ.
–ಕುಮಾರ್, ದಡದಹಳ್ಳಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.