ನಮ್ಮೂರ ಅರಮನೆಗಳು

7

ನಮ್ಮೂರ ಅರಮನೆಗಳು

Published:
Updated:
Deccan Herald

ಸಾಂಸ್ಕೃತಿಕ ನಗರ ಮೈಸೂರು ಅರಮನೆಗಳ ನಗರವೂ ಹೌದು. ವಿಶ್ವವಿಖ್ಯಾತಿಯ, ದಸರಾ ಆಚರಣೆಯ ಕೇಂದ್ರ ಬಿಂದುವಾಗಿರುವ ಅಂಬಾವಿಲಾಸ ಅರಮನೆಯೂ ಸೇರಿದಂತೆ ವಿವಿಧ ಅರಮನೆಗಳು ಇಲ್ಲಿವೆ. ಮಹಾರಾಜರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣವಾಗಿರುವ ಈ ಅರಮನೆಗಳು ಕಾಲಾನಂತರದಲ್ಲಿ ವಸ್ತು ಸಂಗ್ರಹಾಲಯಗಳಾಗಿ, ಕೇಂದ್ರ ಸರ್ಕಾರದ ಕಚೇರಿಗಳಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾಂಗಣವಾಗಿ, ಐಷಾರಾಮಿ ಹೋಟೆಲ್‌ ಆಗಿ ರೂಪಾಂತರಗೊಂಡಿವೆ. ಏನೇ ಆದರೂ ಕಾಲ ಉರುಳಿದಂತೆ ಈ ಸಾಂಸ್ಕೃತಿಕ ನಗರ ಸ್ಥಿತ್ಯಂತರಗೊಂಡ ಎಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾಗಿ ಉಳಿದಿವೆ.

ನಗರ ಬೆಳಗುತ್ತಿದೆ. ಎಲ್ಲೆಡೆ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಮುಂದಿನ ಒಂಬತ್ತು ದಿನಗಳು ಸಾಂಸ್ಕೃತಿಕ ನಗರ ಅಕ್ಷರಶಃ ಬೆಳಕಿನಲ್ಲಿ ಮೀಯಲಿದೆ. ಹೀಗೆ ಬೆಳಗುವುದರ ಕೇಂದ್ರ ಬಿಂದು ಮೈಸೂರು ಅರಮನೆ. ಇಳಿಸಂಜೆಯಲ್ಲಿ ಅರಮನೆಯ ಇಡೀ ಅಂಗಳಕ್ಕೆ ಏಕಕಾಲಕ್ಕೆ ಬೆಳಕಿನ ರಂಗೋಲಿ ಇಟ್ಟಂತೆ ವಾಸ್ತುಶಿಲ್ಪದ ಆ ಕಟ್ಟಡಕ್ಕೆ ಆಭರಣದಂತೆ ತೊಡಿಸಿರುವ ಅಷ್ಟೂ ವಿದ್ಯುತ್ ದೀಪಗಳು ಬೆಳಗುವುದನ್ನು ಕಣ್ತುಂಬಿಕೊಳ್ಳುವುದೇ ಚಂದ. ಅದು, ಅಂಬಾವಿಲಾಸ ಅರಮನೆ.

ಮೈಸೂರು ದಸರಾ ಆಚರಣೆಯ ಹೆಗ್ಗುರುತುಗಳು ಎರಡು. ಮೊದಲನೆಯದು ಅರಮನೆ. ಎರರಡನೆಯದು ನವರಾತ್ರಿ ಉತ್ಸವದ ಕೊನೆ ದಿನ ಇದೇ ಅರಮನೆ ಅಂಗಳದಿಂದ ಬನ್ನಿಮಂಟಪದವರೆಗೂ ಆನೆಯ ಮೇಲೆ ರಾಜಬೀದಿಯಲ್ಲಿ ಸಾಗುವ ಚಿನ್ನದ ಅಂಬಾರಿ. ಉಳಿದೆಲ್ಲವೂ ಪೂರಕ ಮಾತ್ರ.

ಮೈಸೂರು ಎಂದಾಕ್ಷಣ ಮೊದಲಿಗೆ ಮೂಡುವುದು ಈ ವಿಶ್ವವಿಖ್ಯಾತಿಯ, ವಾಸ್ತುಶಿಲ್ಪದಿಂದಾಗಿ ಪ್ರತಿ ಬಾರಿ ಹೊಸತೇ ಬೆರಗನ್ನು ಮೂಡಿಸುವ ಅಂಬಾವಿಲಾಸ ಅರಮನೆಯೇ. ಆದರೆ, ಮೈಸೂರಿನಲ್ಲಿ ಇನ್ನೂ ಕೆಲ ಅರಮನೆಗಳಿವೆ. ಇದು, ಅರಮನೆಗಳ ಊರು. ಕೆಲ ಅರಮನೆಗಳು ಕಾಲ ಉರುಳಿದಂತೆ ಐಷರಾಮಿ ಹೋಟೆಲ್‍ಗಳಾಗಿ, ವಸ್ತು ಸಂಗ್ರಹಾಲಯಗಳಾಗಿ, ಸಭಾಮಂಟಪಗಳಾಗಿ ರೂಪಾಂತರಗೊಂಡಿವೆ. ಈ ಅರಮನೆಗಳನ್ನು ಹೀಗೆ ಪಟ್ಟಿ ಮಾಡಬಹುದು.

ಜಗನ್ಮೋಹನ ಅರಮನೆ, ರಾಜೇಂದ್ರವಿಲಾಸ ಅರಮನೆ, ಲಲಿತ್ ಮಹಲ್ ಅರಮನೆ, ಲೋಕರಂಜನ್ ಮಹಲ್ ಅರಮನೆ, ವಸಂತ ಮಹಲ್ ಅರಮನೆ, ಕಾರಂಜಿ ವಿಲಾಸ ಅರಮನೆ, ಚೆಲುವಾಂಬ ವಿಲಾಸ ಅರಮನೆ, ಚಾಮುಂಡಿ ವಿಹಾರ ಅರಮನೆ, ಚಿತ್ತರಂಜನ್ ಮಹಲ್ ಅರಮನೆ, ಜಯಲಕ್ಷ್ಮಿ ವಿಲಾಸ ಹೀಗೆ..

ಅಭಿವೃದ್ಧಿ ಕಾರ್ಯಕ್ರಮಗಳ ಮೈಲುಗಲ್ಲುಗಳ ಮೂಲಕ ಮೈಸೂರಿನ ಅಭಿವೃದ್ಧಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ಆಳ್ವಿಕೆ ಮಾಡಿದ ಮಹಾರಾಜರು ವಿವಿಧ ಕಾಲಘಟ್ಟದಲ್ಲಿ ನಿರ್ಮಿಸಿದ ಈ ಅರಮನೆಗಳಿಗೆ ತನ್ನದೇ ಇತಿಹಾಸವಿದೆ. ಈ ಅರಮನೆಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವುದು ಅಂಬಾವಿಲಾಸ ಅರಮನೆ.

ಈಗಿರುವ ಅಂಬಾವಿಲಾಸ ಅರಮನೆಗೂ ಮೊದಲು ಅರಮನೆ ಇಲ್ಲಿ ಇತ್ತು. ಅದನ್ನು ಕಟ್ಟಿಗೆ ಮತ್ತು ಇಟ್ಟಿಗೆ ಬಳಸಿ ನಿರ್ಮಿಸಲಾಗಿತ್ತು. ಆಕಸ್ಮಿಕ ಘಟನೆಯಲ್ಲಿ ಬೆಂಕಿಗೆ ವಿರೂಪಗೊಂಡ ಬಳಿಕ ಈಗಿರುವ ಅರಮನೆಯನ್ನು 1897ರಲ್ಲಿ ನಿರ್ಮಿಸಲು ಆರಂಭಿಸಲಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಕಾಣಸಿಗುವ ಮಾಹಿತಿ. ಈ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಪೂರ್ಣಗೊಂಡಿತು.

ಕೋಟೆ ಸೇರಿದಂತೆ ಸುಮಾರು 72 ಎಕರೆಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ನೆಲೆನಿಂತಿರುವ ಅರಮನೆ 74.50 ಮೀ. ಉದ್ದ ಹಾಗೂ 47.50 ಮೀಟರ್ ಅಗಲವಾಗಿದೆ. ಕಂದು ಬಣ್ಣದ ದಪ್ಪ ಸ್ಫಟಿಕದ ಗಟ್ಟಿ ಶಿಲೆಗಳು ಬಳಕೆಯಾಗಿವೆ. ನಡುವೆ ಇರುವ ಬಂಗಾರ ಬಣ್ಣದ ಗೋಪುರ ನೆಲಮಟ್ಟದಿಂದ ಸುಮಾರು 145 ಅಡಿ ಎತ್ತರದಲ್ಲಿದೆ.

ಜಗನ್ಮೋಹನ ಅರಮನೆ: ಪ್ರಸ್ತುತ ಕಲಾಸಂಗ್ರಹಾಲಯವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆಯಾಗಿರುವ ಜಗನ್ಮೋಹನ ಅರಮನೆ ನಗರದ ಕೇಂದ್ರ ಭಾಗದಲ್ಲಿದೆ. 1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದರು. ಈಗಿನ ಅರಮನೆ ನಿರ್ಮಾಣ ಆಗುವವರೆಗೂ ಒಡೆಯರ್ ರಾಜ ಪರಿವಾರ ಇಲ್ಲಿಯೇ ವಾಸ್ತವ್ಯ ಹೂಡಿತ್ತು ಎನ್ನಲಾಗಿದೆ. 1900ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿವಾಹ, 1902ರಲ್ಲಿ ಪಟ್ಟಾಭಿಷೇಕ ಮಹೋತ್ಸವಕ್ಕೆ ಇದು ಸಾಕ್ಷಿಯಾಗಿದೆ.

ರಾಜೇಂದ್ರವಿಲಾಸ ಅರಮನೆ: ಮೈಸೂರಿಗೆ ಕಿರೀಟಪ್ರಾಯವಾಗಿರುವ ಚಾಮುಂಡಿಬೆಟ್ಟದ ಮೇಲಿರುವ ಭವ್ಯಸೌಧ ರಾಜೇಂದ್ರವಿಲಾಸ ಅರಮನೆ. ಇಂಡೋಸಾರ್ಸನಿಕ್ ಶೈಲಿಯ ವಾಸ್ತುಶಿಲ್ಪದ ಈ ಬಂಗಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಇದಕ್ಕೆ ಮತ್ತಷ್ಟು ಮೆರಗು ನೀಡಿದರು.

ಲೋಕರಂಜನ್ ಮಹಲ್ ಅರಮನೆ: ಮೈಸೂರು ಅರಮನೆಗೆ ಕೂಗಳತೆಯ ದೂರದಲ್ಲಿಯೇ ಇರುವ ಈಗಿನ ಇಟ್ಟಿಗೆಗೂಡು ಬಡಾವಣೆಯಲ್ಲಿ ಇರುವ ಅರಮನೆಯೇ ಲೋಕರಂಜನ್ ಮಹಲ್. ಚಾಮರಾಜ ಒಡೆಯರ್ ಹಾಗೂ ಕೃಷ್ಣರಾಜ ಒಡೆಯರ್ ಮತ್ತು ಯುವರಾಜರುಗಳ ಪಾಠ ಶಾಲೆಯಾಗಿಯೂ ಬಳಕೆಯಾಗಿತ್ತು. ಬಳಿಕ ಗಣ್ಯರ ಅತಿಥಿ ಗೃಹವಾಗಿತ್ತು. ಲೋಕರಂಜನ್ ಮಹಲ್ ಅತಿಥಿ ಗೃಹ ಎಂದೇ ಕರೆಯಲಾಗುತ್ತಿತ್ತು.

ವಸಂತ ಮಹಲ್ ಅರಮನೆ: ಈಗಿನ ನಜರಬಾದ್‍ನಲ್ಲಿರುವ, ವಸಂತ ಮಹಲ್ ಅರಮನೆ 30 ಎಕರೆ ಪ್ರದೇಶದಲ್ಲಿ 1842ರಲ್ಲಿ ನಿರ್ಮಾಣವಾಗಿದೆ. ಕಬ್ಬಿಣದ ಕಮಾನುಗಳ ರಚನೆ, ಕಲಾತ್ಮಕ ವಾಸ್ತು ಶೈಲಿ ಇದರ ಆಕರ್ಷಣೆ. ಪ್ರಸ್ತುತ ಈ ಕಟ್ಟಡದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಕಾರಂಜಿ ವಿಲಾಸ ಅರಮನೆ: ಕಾರಂಜಿಕೆರೆ ಪರಿಸರದ ಹಿನ್ನೆಲೆಯಲ್ಲಿ ತಲೆಎತ್ತಿರುವ ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಸಹೋದರಿ ಕೃಷ್ಣರಾಜಮ್ಮಣ್ಣಿಯವರಿಗಾಗಿ 1902ರಲ್ಲಿ ನಿರ್ಮಿಸಿದರೆಂದು ಹೇಳಲಾಗಿದೆ. ಕೆರೆ ಪಕ್ಕ ಇದ್ದುದರಿಂದ ಕಾರಂಜಿ ವಿಲಾಸ ಅರಮನೆ ಎಂದೂ ಗುರುತಿಸಲಾಗುತ್ತದೆ. ಹಿಂದೂ ಗ್ರೀಕ್ ಶೈಲಿಯ ಈ ಅರಮನೆಗೆ ರಾಜಸ್ತಾನಿ ಶೈಲಿಯ ಕಿಟಿಕಿಗಳನ್ನು ಕಮಲದ ಹೊವಿನ ರಚನೆಯ ಮೇಲೆ ರೂಪಿಸಿರುವುದು ವಿಶೇಷವಾಗಿದೆ.

ಚೆಲುವಾಂಬ ವಿಲಾಸ ಅರಮನೆ: ನಾಲ್ವಡಿ ಕೃಷ್ಣರಾಜ ಒಡೆಯರ್ ಮೂರನೇ ಸಹೋದರಿ ಚೆಲುವಾಂಬ ರಾಜಮ್ಮಣ್ಣಿಯವರಿಗಾಗಿ 1911ರಲ್ಲಿ ಇದನ್ನು ಕಟ್ಟಿಸಿದರು. ರೈಲ್ವೆ ನಿಲ್ದಾಣದ ಬಳಿ ಇದು ಇದೆ. ಸದ್ಯ ಇದು ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‍ಟಿಆರ್‍ಐ) ಕಚೇರಿಯಾಗಿ ಬಳಕೆಯಾಗುತ್ತಿದೆ.

ಜಯಲಕ್ಷ್ಮಿ ವಿಲಾಸ ಅರಮನೆ: ಮೈಸೂರು ಮಾನಸ ಗಂಗೋತ್ರಿ ಆವರಣದಲ್ಲಿರುವ ಈ ಕಟ್ಟಡವನ್ನು 1905ರಲ್ಲಿ ಕಟ್ಟಿಸಲಾಯಿತು. ಕುಕ್ಕರಹಳ್ಳಿ ಕೆರೆ ಬಳಿ ಇದ್ದ ಕಾರಣ ಕೆಬ್ಬೆಕಟ್ಟೆ ಬಂಗಲೆ ಎಂದು ಗುರುತಿಸಲಾಗುತ್ತಿತ್ತು. ಸುಮಾರು 123ಕ್ಕೂ ಹೆಚ್ಚು ಕೋಣೆಗಳಿದ್ದವು. ಈ ಅರಮನೆ ಹಾಗೂ 300 ಎಕರೆ ಜಾಗವನ್ನು ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ವಿಶ್ವವಿದ್ಯಾನಿಲಯವನ್ನು ವ್ಯವಸ್ಥಿತವಾಗಿ ರೂಪಿಸಲು ಚಾಲನೆ ನೀಡಲಾಯಿತು. ಸದ್ಯ ಅರಮನೆಯು ಮೈಸೂರು ವಿ.ವಿಯ ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.

ಲಲಿತಮಹಲ್ ಅರಮನೆ: ನಗರ ಹೊರವಲಯದಲ್ಲಿ, ಚಾಮುಂಡಿಬೆಟ್ಟದ ತಪ್ಪಲ್ಲಲ್ಲಿ ಇರುವ ಈ ಆಕರ್ಷಕ, ಭವ್ಯ ಕಟ್ಟಡ ಈಗ ವಿಲಾಸಿ ಹೋಟೆಲ್. ಲಲಿತಾದ್ರಿ ಹೆಸರಿನಿಂದಲೂ ಇದನ್ನು ಕರೆಯಲಾಗುತ್ತಿತ್ತು 1921-22ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದು, ಸದ್ಯ ಇದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಸುಪರ್ದಿಯಲ್ಲಿದೆ. ವಿಲಾಸಿ ಹೋಟೆಲ್ ಆಗಿ ಗಣ್ಯರಿಗೆ ಆತಿಥ್ಯ ನೀಡುತ್ತಿದೆ. ಸಿನಿಮಾ ಚಿತ್ರೀಕರಣದ ಫೇವರೇಟ್ ತಾಣವೂ ಹೌದು.

ರೂಪಾಂತರಗೊಂಡಿರುವ ಈ ಕೆಲವು ‘ಅರಮನೆ’ಗಳ ಪ್ರವೇಶಕ್ಕೆ ಸದ್ಯ ನಿರ್ಬಂಧವಿದೆ. ದಸರೆಯ ಸಂಭ್ರಮ ಆರಂಭವಾಗಿರುವ ಮೈಸೂರಿಗೆ ಬರುವ ಪ್ರವಾಸಿಗರು ತಮ್ಮ ನಗರ ಸುತ್ತಾಟದಲ್ಲಿ ಹೊರಗಿನಿಂದಲಾದರೂ, ನಗರದ ಇತಿಹಾಸದ ಸಾಕ್ಷಿಪ್ರಜ್ಞೆಗಳಾಗಿರುವ ಈ ಭವ್ಯಸೌಧಗಳ ಝಲಕ್ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !