ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣಕ್ಕೆ ಭದ್ರತೆ ಕೊರತೆ

Last Updated 2 ಜೂನ್ 2019, 19:52 IST
ಅಕ್ಷರ ಗಾತ್ರ

ಮೈಸೂರು: ನಗರ ರೈಲು ನಿಲ್ದಾಣದಲ್ಲಿ ಭದ್ರತೆಯದ್ದೇ ಸಮಸ್ಯೆಯಾಗಿದೆ. ಏಕೆಂದರೆ, ಕಾಮಗಾರಿಗಳು ನಡೆಯುತ್ತಿರುವುದರಿಂದ ತಪಾಸಣೆ ಸರಿಯಾಗಿ ನಡೆಯುತ್ತಿಲ್ಲ. ಎಲ್ಲದಕ್ಕೂ ಕಾಮಗಾರಿಗಳ ಕಾರಣ ಹೇಳಲಾಗುತ್ತಿದೆ.

ಆದರೂ, ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಅನಧಿಕೃತ ಪ್ರವೇಶವನ್ನು ಬಂದ್ ಮಾಡಲಾಗಿದೆ. ಆರ್‌ಪಿಎಫ್‌ (ರೈಲ್ವೆ ಪೊಲೀಸ್‌ ಫೋರ್ಸ್) ಠಾಣೆಯಿಂದ ಅನಧಿಕೃತ ಪ್ರವೇಶ ನಡೆಯುತ್ತಿರುವುದನ್ನು ತಡೆಯಲಾಗಿದೆ.

ಇನ್ನು 6ನೇ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯವಿರುವಷ್ಟು ಸಿ.ಸಿ ಟಿ.ವಿ ಕ್ಯಾಮೆರಾಗಳಿಲ್ಲ. ಕಾಮಗಾರಿಗಳು ನಡೆಯುತ್ತಿರುವುದರಿಂದ ಕೆಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಚಾಲನೆಯಲ್ಲ ಇಟ್ಟಿಲ್ಲ. ಮುಖ್ಯವಾಗಿ 6ನೇ ಪ್ಲಾಟ್‌ಫಾರ್ಮ್‌ಗೆ ಕಾಂಪೌಂಡ್‌ ಇಲ್ಲ. ಇದರಿಂದ ರೈಲ್ವೆ ವಸತಿಗೃಹದಿಂದ ಯಾರಾದರೂ ಪ್ರವೇಶಿಸಬಹುದು. ಇದಕ್ಕಾಗಿ ಕಾಂಪೌಂಡ್‌ ಅಗತ್ಯವೆಂದು ರೈಲ್ವೆ ಮಂಡಳಿಗೆ ವರದಿ ಸಲ್ಲಿಸುತ್ತೇವೆ ಎಂದು ಆರ್‌ಪಿಎಫ್‌ ಶಿವರಾಜು ತಿಳಿಸಿದರು.

‘ಭದ್ರತೆಗೆ ಸಂಬಂಧಿಸಿ ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಅಪರಿಚಿತರ ಬಗ್ಗೆ ಹಾಗೂ ಅಪರಿಚಿತ ವಸ್ತುಗಳ ಬಗ್ಗೆ ಕೂಡಲೇ ರೈಲ್ವೆ ಪೊಲೀಸರ ಗಮನಕ್ಕೆ ತರಬೇಕು’ ಎಂದು ವಿನಂತಿಸಿಕೊಳ್ಳುತ್ತಾರೆ.

ವಿಭಾಗೀಯ ಕಚೇರಿಯಲ್ಲಿ 1 ಸಾವಿರ ಸಿಬ್ಬಂದಿ, ಇದರ ಎದುರು ಇರುವ ಕೋಚ್‌ ಕೇರ್‌ ಸೆಂಟರ್‌ನಲ್ಲಿ 350 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ರೈಲ್ವೆ ಇಲಾಖೆಯ ಸ್ಟಿಕ್ಕರ್‌ ಕೂಡಾ ನೀಡಲಾಗಿದೆ. ಆದರೆ, ಪಾರ್ಕಿಂಗ್‌ ಸಮಸ್ಯೆ ಇರುವುದು ನಿಲ್ದಾಣದ ಮುಂಭಾಗದಲ್ಲಿ. ಕಾಮಗಾರಿಗಳು ನಡೆಯುತ್ತಿರುವ ಪರಿಣಾಮ ವಾಹನಗಳನ್ನು ನಿಲ್ಲಿಸಲು ಪಕ್ಕಾ ಜಾಗ ಗುರುತಿಸಿಲ್ಲ. ಹೀಗಾಗಿ ನಿಗದಿತ ಸ್ಥಳವಿಲ್ಲ. 1,500 ದ್ವಿಚಕ್ರ ಹಾಗೂ 100ಕ್ಕೂ ಅಧಿಕ ಕಾರುಗಳನ್ನು ಇಲ್ಲಿ ನಿಲ್ಲಿಸಲಾಗುತ್ತಿದೆ. ಮುಖ್ಯವಾಗಿ ಇಲ್ಲಿ ನಿಲ್ಲಿಸುವ ವಾಹನಗಳ ಸಂಖ್ಯೆ ನಮೂದಿಸಿಕೊಳ್ಳುತ್ತಿಲ್ಲ. ಕಂಪ್ಯೂಟರಲ್ಲಿ ದಾಖಲಾತಿ ಆಗುತ್ತಿಲ್ಲ. ಇದರೊಂದಿಗೆ ಪಾರ್ಕಿಂಗ್‌ ವ್ಯವಸ್ಥೆ ನೋಡಿಕೊಳ್ಳುವ 8 ಮಂದಿಗೂ ಗುರುತಿನ ಚೀಟಿ ನೀಡಿಲ್ಲ. ಜತೆಗೆ, ಯೂನಿಫಾರ್ಮ್‌ ಕೊಟ್ಟಿಲ್ಲ.

ದುರಸ್ತಿಯಲ್ಲಿ ಪೊಲೀಸ್‌ ಠಾಣೆ: ಈ ನಿಲ್ದಾಣದ ಆವರಣದಲ್ಲಿರುವ ಪೊಲೀಸ್ ಠಾಣೆ ದುರಸ್ತಿಯಲ್ಲಿದೆ. ಮಳೆ ಬಂದರೆ ಫೈಲುಗಳು ಒದ್ದೆಯಾಗುತ್ತಿವೆ. ಪಿಎಸ್‌ಐ ಕೋಣೆ ಕೂಡ ಸೋರುತ್ತಿದೆ. ಇಲ್ಲಿರುವ ಕಿಟ್‌ ಬಾಕ್ಸ್ ಹಾಗೂ ರೆಸ್ಟ್ ರೂಮ್‌ ಚಿಕ್ಕದು. ಇದರಲ್ಲಿಯೇ 60 ಪೊಲೀಸರು ವಿಶ್ರಾಂತಿ ತೆಗೆದುಕೊಳ್ಳಬೇಕು. ಹೊಸ ಕಟ್ಟಡಕ್ಕೆ ಪ್ರಸ್ತಾವ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುವ ಕೊರಗು ಅಲ್ಲಿನ ಸಿಬ್ಬಂದಿಯದು.

‘ರೈಲು ನಿಲ್ದಾಣದಿಂದ ಹೊರಬರುವ ಅಶಕ್ತರು, ಅಂಗವಿಕಲರು ಸುಲಭವಾಗಿ ಮನೆಗಳಿಗೆ ತೆರಳುವ ವ್ಯವಸ್ಥೆ ಆಗಬೇಕು. ಇನ್ನು 6 ತಿಂಗಳಿಗೆ ಕಟ್ಟಡಗಳ ಕಾಮಗಾರಿಗಳು ಪೂರ್ಣಗೊಂಡ ನಂತರ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಾಗುತ್ತದೆ’ ಎನ್ನುತ್ತಾರೆ ರೈಲ್ವೆ ಪೊಲೀಸರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT