ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಒಕ್ಕಲಿಗರ ಕಿಡಿ; ಸೋಲಿಗೆ ಪಣ

ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದ ಪ್ರತಾಪ್‌ ಸಿಂಹಗೆ ಆಗ್ರಹ; 9ರಂದು ಬೃಹತ್ ಪ್ರತಿಭಟನೆ
Last Updated 6 ಸೆಪ್ಟೆಂಬರ್ 2019, 15:27 IST
ಅಕ್ಷರ ಗಾತ್ರ

ಮೈಸೂರು: ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಸೆ.9ರ ಸೋಮವಾರ ಒಕ್ಕಲಿಗ ಸಂಘಟನೆಗಳ ವತಿಯಿಂದ, ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಜಿಲ್ಲಾ ಒಕ್ಕಲಿಗರ ಸಂಘ ತೀರ್ಮಾನಿಸಿದೆ.

ನಗರದ ವಿದ್ಯಾರಣ್ಯಪುರಂನಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಂಘಟನೆಯ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಪ್ರಮುಖರು ಭಾಗಿಯಾಗಿ ಒಕ್ಕೊರಲಿನಿಂದ ಈ ನಿರ್ಣಯ ಕೈಗೊಂಡರು.

ನಿವೃತ್ತ ಎಸಿಪಿ ಸುರೇಶ್ ಮಾತನಾಡಿ ‘ಕಾಂಗ್ರೆಸ್, ಜೆಡಿಎಸ್‌ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ಬಿಜೆಪಿ ಮಾಡುತ್ತಿದೆ. ಬಿಜೆಪಿ ಪ್ರಮುಖರು ದುಡ್ಡು ತಿಂದಿಲ್ಲವೇ ? ಸಮಾಜದ ಧುರೀಣರು ಯಾರ ಮಾತು ಕೇಳದೆ ಪ್ರತಾಪ್‍ಸಿಂಹನಿಗೆ ಮತ ಹಾಕಿ ಗೆಲ್ಲಿಸಿದರು. ಇದರಿಂದ ಆದ ಪ್ರಯೋಜನವಾದರು ಏನು ?. ಅನರ್ಹಗೊಂಡ ಶಾಸಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ದೃಢ ಸಂಕಲ್ಪ ಮಾಡಬೇಕು’ ಎಂದರು.

ಎಂಸಿವಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಮಾತನಾಡಿ ‘ನಮ್ಮ ಬಲ ಪ್ರದರ್ಶಿಸಬೇಕಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಸಂಘಟನೆಗಳ ನಿರ್ದೇಶಕರು ಪ್ರತಿ ತಾಲ್ಲೂಕಿನಿಂದ 2 ಸಾವಿರ ಜನರನ್ನು ಒಗ್ಗೂಡಿಸುವ ಜವಾಬ್ದಾರಿ ಹೊರಬೇಕು. ಪ್ರತಿಭಟನೆಯಲ್ಲಿ ಸುಮಾರು 10ರಿಂದ 15 ಸಾವಿರ ಮಂದಿಯನ್ನು ಸೇರಿಸಬೇಕು’ ಎಂದು ಹೇಳಿದರು.

ನಗರಪಾಲಿಕೆ ಸದಸ್ಯ ಪಿ.ಪ್ರಶಾಂತ್‍ಗೌಡ ಮಾತನಾಡಿ ‘ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಪ್ರತಾಪ್‍ಸಿಂಹ ಕೇಂದ್ರದ ಮೇಲೆ ಒತ್ತಡ ತರಬೇಕು. ಸಂಘಟನೆಗಳು ಬೆಂಗಳೂರಿನಲ್ಲೂ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರವನ್ನೂ ಒತ್ತಾಯಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಮಂಜು, ಉಪಾಧ್ಯಕ್ಷ ಗುರುರಾಜ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಬೋರೇಗೌಡ, ಖಜಾಂಚಿ ಎಂ.ಎ.ಸುಶೀಲಾ ನಂಜಪ್ಪ, ನಿರ್ದೇಶಕರಾದ ಬಿ.ಇ.ಗಿರೀಶ್‍ಗೌಡ, ವೆಂಕಟೇಶ್, ಎಂ.ಕೆ.ಮಿರ್ಲೆ ಶ್ರೀನಿವಾಸಗೌಡ, ಜಿ.ಪಂ.ಸದಸ್ಯ ಮಾದೇಗೌಡ, ಮಾಜಿ ಸದಸ್ಯ ಕುಮಾರ್, ಪಾಲಿಕೆ ಸದಸ್ಯ ಶಿವಕುಮಾರ್, ಭಾಸ್ಕರ್ ಎಲ್.ಗೌಡ, ಕೆ.ವಿ.ಶ್ರೀಧರ್ ಸೇರಿದಂತೆ ಮತ್ತಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT