ಹಳತು – ಹೊಸತುಗಳ ನಡುವೆ...

7

ಹಳತು – ಹೊಸತುಗಳ ನಡುವೆ...

Published:
Updated:
ಬುದ್ಧವಿಹಾರ

ಕಣ್ಣು ಹಾಯಿಸಿದಲೆಲ್ಲಾ ಹಳೆಯ ಕಟ್ಟಡಗಳದ್ದೇ ಕಾರುಬಾರು. ನಡುವೆ ಅಲ್ಲೊಂದು ಇಲ್ಲೊಂದು ಹೊಸ ಕಟ್ಟಡಗಳು, ಈಚೆಗೆ ತಲೆ ಎತ್ತಿರುವ ಅಪಾರ್ಟ್‌ಮೆಂಟುಗಳು, ವಾಣಿಜ್ಯ ಮಳಿಗೆಗಳು. ಅಲ್ಲಲ್ಲಿ ಪಾಳು ಬಿದ್ದಿರುವ ಹಳೆಯ ಮನೆ, ನಿವೇಶನಗಳು. ಮಧ್ಯೆ ಕಿಷ್ಕಿಂದೆ ರಸ್ತೆಗಳು, ಪುಟ್ಟ ಪುಟ್ಟ ಗಲ್ಲಿಗಳು. ಆ ಗಲ್ಲಿಗಳಲ್ಲೇ ಹೈನುಗಾರಿಕೆ.

ಪಾರಂಪರಿಕ ಕಟ್ಟಡಗಳು, ಚಿಕ್ಕ ಮಾರುಕಟ್ಟೆ ಎಂದೇ ಪ್ರಸಿದ್ಧಿ ಪಡೆದಿರುವ ವಿ.ವಿ ಮಾರುಕಟ್ಟೆ, ಎಂ.ಜಿ.ರಸ್ತೆ ಇಕ್ಕೆಲಗಳಲ್ಲಿ ಮುಗಿಲು ನೋಡುತ್ತಾ ನಿಂತಂತಿರುವ ನೀರಿನ ಬೃಹತ್‌ ಟ್ಯಾಂಕ್‌ಗಳು ಇತಿಹಾಸ ಬಿಚ್ಚಿಡುತ್ತವೆ. ಇದಕ್ಕೆ ಡಬಲ್‌ ಟ್ಯಾಂಕ್‌ ರಸ್ತೆ ಎಂದೂ ಕರೆಯುತ್ತಾರೆ.

ಧರ್ಮ ಸಮನ್ವಯದ ನೆಲೆ ಕೂಡ. ಒಂದು ಕಡೆ ನೂರೊಂದು ಗಣಪತಿ, ಮತ್ತೊಂದು ಕಡೆ ಹಾರ್ಡ್ವಿಕ್‌ ಚರ್ಚ್‌. ಇನ್ನೊಂದು ಕಡೆ ಮಸೀದಿ, ಅಲ್ಲೊಂದು ತೆರಾಪಂಥ್‌ ಭವನ್‌, ಇಲ್ಲೊಂದು ಬುದ್ಧ ವಿಹಾರ.

ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿರುವ ಮೈಸೂರು ಮಹಾನಗರ ಪಾಲಿಕೆಯ ಮೂರನೇ ವಾರ್ಡ್‌ ಲಕ್ಷ್ಮಿಪುರಂ. ಸಾಂಸ್ಕೃತಿಕ ನಗರಿ ಮೈಸೂರಿನ ಹಳೆ ಪ್ರದೇಶ ಕೂಡ. ನಗರದ ಹೃದಯ ಭಾಗದಲ್ಲಿರುವ ಈ ವಾರ್ಡ್‌ ವಲಯ–1ರ ವ್ಯಾಪ್ತಿಗೆ ಸೇರಿದೆ. ವಾರ್ಡ್‌ ಸದಸ್ಯೆ ಸಮೀನಾ.

ಪ್ರಮುಖವಾಗಿ ಲಕ್ಷ್ಮಿಪುರಂ, ಚಾಮರಾಜಪುರಂನ ಕೆಲ ಭಾಗ, ಹೊಸಬಂಡಿಕೇರಿ, ನಂಜುಮಳಿಗೆ ಪ್ರದೇಶಗಳನ್ನು ಒಳಗೊಂಡಿದೆ. ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪಾದಚಾರಿ ಮಾರ್ಗವೂ ಚೆನ್ನಾಗಿದೆ. ಈ ವಾರ್ಡ್‌ನಲ್ಲಿರುವ ಏಕೈಕ ಉದ್ಯಾನ ಮನುವನ ಪಾರ್ಕ್‌. ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಪಾರ್ಕ್‌ನಲ್ಲಿ ಉತ್ತಮ ಸೌಲಭ್ಯಗಳಿವೆ. ಮಕ್ಕಳು ಆಟವಾಡಲು ಉಪಕರಣ ಜೋಡಿಸಲಾಗಿದೆ. ಹಿರಿಯ ನಾಗರಿಕರು ಬೆಳಿಗ್ಗೆ, ಸಂಜೆ ವಾಯು ವಿಹಾರಕ್ಕೆ ಬರುತ್ತಾರೆ. ಆದರೆ, ಕೆಲವರು ರಾತ್ರಿ 12 ವರೆಗೆ ಈ ಪಾರ್ಕ್‌ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರೊಳಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಈಚೆಗೆ ಪ್ರೇಮಿಗಳ ಪಾರ್ಕ್‌ ಆಗಿ ಪರಿವರ್ತಿತವಾಗುತ್ತಿದೆ.

ಕಸ ಕಸ ಕಸ: ತ್ಯಾಜ್ಯದ ರಾಶಿಯೇ ಈ ವಾರ್ಡ್‌ನ ಪ್ರಮುಖ ಸಮಸ್ಯೆ. ನಿತ್ಯ ಸರಿಯಾಗಿ ಕಸ ವಿಲೇವಾರಿ ನಡೆಯುತ್ತಿಲ್ಲ ಎಂಬುದು ನಾಗರಿಕರ ದೂರು. ನಂಜುಮಳಿಗೆ ಸುತ್ತಮುತ್ತಲಿನ ರಸ್ತೆಯ ಇಕ್ಕೆಲಗಳಲ್ಲಿ ರಾತ್ರಿಯಾದರೆ ಮಾಂಸದ ತಿನಿಸುಗಳ ಅಂಗಡಿಗಳದ್ದೇ ಕಾರುಬಾರು. ಹೋಟೆಲ್‌ ತ್ಯಾಜ್ಯ, ಮಾಂಸದ ತ್ಯಾಜ್ಯವನ್ನು ಬೇಕೆಂದಲ್ಲಿ ಎಸೆಯುತ್ತಿದ್ದು, ದುರ್ವಾಸನೆಯಿಂದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಪಾದಚಾರಿ ಮಾರ್ಗಗಳಲ್ಲೇ ಮಾಂಸದ ಹೋಟೆಲ್‌ಗಳು ತಲೆ ಎತ್ತಿವೆ. ವಿ.ವಿ ಮಾರುಕಟ್ಟೆಯ ಕಸದ ತೊಟ್ಟಿ ತುಂಬಿ ಹರಿಯುತ್ತಿದೆ. ಈಗ ಮಳೆಗಾಲ ಆಗಿರುವುದರಿಂದ ಕೆಸರು ಗದ್ದೆಯಂತಾಗಿದೆ. ತುಂಬಾ ಹಳೆಯದಾದ, ರಾಜರ ಕಾಲದಲ್ಲಿ ನಿರ್ಮಿಸಿರುವ ಈ ಮಾರುಕಟ್ಟೆ ಹತ್ತಾರು ವರ್ಷಗಳ ಹಿಂದೆ ಹೇಗಿತ್ತೋ ಹಾಗೇ ಇದೆ. ಮೇಲ್ಭಾಗದಲ್ಲಿ ಕಸದ ರಾಶಿ ತುಂಬಿದ್ದು, ನವೀಕರಣಕ್ಕಾಗಿ ಕಾಯುತ್ತಿದೆ. ನಂಜುಮಳಿಗೆಯಲ್ಲಿ ಪಾದಚಾರಿ ಮಾರ್ಗವೇ ಮಾರುಕಟ್ಟೆ ಆಗಿದೆ.

ಹಸುಗಳ ಸಾಕಣೆ: ಈ ವಾರ್ಡ್‌ನ ಬಹುತೇಕ ಮನೆಗಳ ಮುಂದೆಯೇ ಹೈನುಗಾರಿಕೆ ನಡೆಯುತ್ತಿದೆ. ಕೆಲವೊಮ್ಮೆ ಹಸುವನ್ನು ಮೇಯಲು ಬಿಟ್ಟುಬಿಡುತ್ತಾರೆ. ಅವು ಗಲ್ಲಿ ಗಲ್ಲಿ ಸುತ್ತುತ್ತಿರುತ್ತವೆ. ಹೀಗಾಗಿ, ಮನೆ ಮುಂದೆ, ರಸ್ತೆಗಳಲ್ಲಿ ಸಗಣಿ ರಾಶಿ. ಇದರಿಂದ ಸೊಳ್ಳೆ ಕಾಟವೂ ಹೆಚ್ಚಿದೆ. ಜಾನುವಾರು ರಸ್ತೆಗಳ ಮಧ್ಯೆ, ‍ಪಾದಚಾರಿ ಮಾರ್ಗದಲ್ಲಿಯೇ ಮಲಗಿರುತ್ತವೆ.

ಏನಕ್ಕೆ ಪ್ರಸಿದ್ಧಿ: ನಗರದ ಹಳೆಯ ಪ್ರದೇಶ ಎನಿಸಿಕೊಂಡಿರುವ ಈ ವಾರ್ಡ್‌ನಲ್ಲಿ ಸಂಗೀತ ವಿಶ್ವವಿದ್ಯಾಲಯವಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಮನೆ ಇರುವುದೂ ಇಲ್ಲಿಯೇ. ಅದೀಗ ಕ್ಲಬ್ ಆಗಿದೆ.

ಸರ್ಕಾರಿ ಶಾಲೆ, ಸಾರಿಗೆ ಪ್ರಾದೇಶಿಕ ಕಚೇರಿ (ಆರ್‌ಟಿಒ), ಕೆ.ಆರ್.ಪೊಲೀಸ್‌ ಠಾಣೆ, ಲಕ್ಷ್ಮಿಪುರಂ ಪೊಲೀಸ್‌ ಠಾಣೆಗಳಿವೆ. ಬಿಎಸ್‌ಎನ್‌ಎಲ್‌ ಕಚೇರಿ, ಕಾರ್ಪೊರೇಷನ್‌, ಎಸ್‌ಬಿಐ ಬ್ಯಾಂಕ್‌ಗಳು, ಮೈಸೂರು ದಕ್ಷಿಣ ಬಿಇಒ ಕಚೇರಿ, ಸರ್ಕಾರಿ ಆಯುರ್ವೇದ ಆಸ್ಪತ್ರೆ, ವಿ.ವಿ ಮಾರುಕಟ್ಟೆ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ‍ಬೀದಿ ಬದಿ ವ್ಯಾಪಾರಿಗಳಿಗೆಂದು ಅಶೋಕ ವೃತ್ತದಲ್ಲಿ ಪಾಲಿಕೆ ಸ್ಥಾಪಿಸಿರುವ ನಗರದ ಮೊದಲ ಫುಡ್‌ ಜೋನ್‌ ಕೂಡ ಇಲ್ಲಿದೆ. ಆದರೆ, ಇನ್ನೂ ಉದ್ಘಾಟನಾ ಭಾಗ್ಯ ಕಂಡಿಲ್ಲ. ಟ್ರಿಣ್‌ ಟ್ರಿಣ್‌ ನೋಂದಣಾ ಕಚೇರಿಯೂ ಇಲ್ಲಿದೆ. ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ.

ಮಧ್ವಚಾರ್ಯ ರಸ್ತೆ ಮತ್ತು ಬಸವೇಶ್ವರ ರಸ್ತೆಯ ಭಾಗದಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಶತಮಾನದ ಹೊಸ್ತಿಲಲ್ಲಿದೆ. ಸಿಬ್ಬಂದಿ, ಔಷಧ, ಉಪಕರಣ ಕೊರತೆಯಿಂದಾಗಿ ಪ್ರಯೋಜನಕ್ಕೆ ಬಾರದಂತಾಗಿದೆ.

ವಾರ್ಡ್‌ ಪ್ರದೇಶಗಳು: ಕೋರ್ಟ್‌ ಮುಂಭಾಗದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾಗುವ ಈ ವಾರ್ಡ್‌ ಎಂ.ಜಿ ರಸ್ತೆ ಮೂಲಕ ಅಗ್ರಹಾರ ವೃತ್ತದವರೆಗೆ ಚಾಚಿಕೊಂಡಿದೆ. ಅಗ್ರಹಾರ ವೃತ್ತದಿಂದ ನೂರೊಂದು ಗಣಪತಿ ದೇಗುಲದ ಮೂಲಕ ಬಸವೇಶ್ವರ ರಸ್ತೆಯ 11ನೇ ಅಡ್ಡರಸ್ತೆವರೆಗಿನ ಪ್ರದೇಶವನ್ನು ಒಳಗೊಂಡಿದೆ. ಬಸವೇಶ್ವರ ರಸ್ತೆಯಿಂದ ಹೊಸಬಂಡಿಕೇರಿ 1ನೇ ಅಡ್ಡ ರಸ್ತೆ ಮೂಲಕ ನಂಜುಮಳಿಗೆ ವೃತ್ತದವರೆಗಿನ ಪ್ರದೇಶ ಈ ವಾರ್ಡ್‌ ವ್ಯಾಪ್ತಿಗೆ ಬರುತ್ತದೆ. ನಂಜುಮಳಿಗೆ ವೃತ್ತದಿಂದ ಎನ್‌.ಎಸ್‌.ರಸ್ತೆವರೆಗೆ, ನ್ಯೂ ಕಾಂತರಾಜ್‌ ಅರಸ್‌ ಜಂಕ್ಷನ್‌ನಿಂದ ಜಯನಗರ ಕೆಳ ಸೇತುವೆವರೆಗೆ (ಅಂಡರ್‌ ಬ್ರಿಜ್‌) ಚಾಚಿಕೊಂಡಿದೆ.

ಚಿತ್ರಗಳು: ಬಿ.ಆರ್‌.ಸವಿತಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !