ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತ ಶಿಕ್ಷಕರಿಗೆ ‘ಆನ್‌ಲೈನ್‌‘ ಬೀಳ್ಕೊಡುಗೆ

ಸೃಜನಶೀಲ ಮನಸ್ಸುಗಳ ಚಟುವಟಿಕೆ
Last Updated 9 ಏಪ್ರಿಲ್ 2020, 13:55 IST
ಅಕ್ಷರ ಗಾತ್ರ

ಮೈಸೂರು:ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕವಾಗಿ ಪಸರಿಸುವುದನ್ನು ತಡೆಗಟ್ಟಲಿಕ್ಕಾಗಿಯೇ ಇದೀಗ ಶಾಲೆ-ಕಾಲೇಜು, ಸಭೆ–ಸಮಾರಂಭ, ಜಾತ್ರೆ, ಮದುವೆ ಸಹ ನಿಂತಿವೆ. ಜನರು ಮನೆಗಳಲ್ಲೇ ಲಾಕ್ ಆಗಿದ್ದಾರೆ...

ಇಂತಹ ಹೊತ್ತಲ್ಲಿ ಕ್ರಿಯಾಶೀಲ ಮನಸ್ಸುಗಳನ್ನು ’ಲಾಕ್‌ಡೌನ್‌‘ ಮಾಡಲಾಗದು ಎಂಬುದನ್ನು ಶಿಕ್ಷಕರೊಬ್ಬರ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವೊಂದು ಸಾಬೀತು ಪಡಿಸಿದೆ.

ಈ ಬೀಳ್ಕೊಡುಗೆ ಸಮಾರಂಭ ನಡೆದಿರುವುದು ಮಾರ್ಚ್‌ 31ರಂದು. ರಾಜ್ಯದ ವಿವಿಧ ಭಾಗದ ಐದು ಸಾವಿರಕ್ಕೂ ಹೆಚ್ಚಿನ ಶಿಕ್ಷಕರು ಇದರಲ್ಲಿ ಭಾಗಿಯಾಗಿ ತಮ್ಮ ನೆಚ್ಚಿನ ಹಿರಿಯ ಶಿಕ್ಷಕರನ್ನು ಬೀಳ್ಕೊಟ್ಟರು...!

ಅರೆ ಇದೇನು?, ಕೋವಿಡ್‌–19, ಕೊರೊನಾ ಸೋಂಕು ಹರಡುವಿಕೆಯ ನಡುವೆ ಇಷ್ಟೊಂದು ಜನರು ಒಂದೆಡೆ ಸೇರಿದ್ದರೆ ಎಂದು ಗಾಬರಿಯಾಗಬೇಡಿ. ಇವರ‍್ಯಾರು ಒಟ್ಟಿಗಿರಲಿಲ್ಲ. ಎಲ್ಲರೂ ತಮ್ಮ ಮನೆಯಲ್ಲೇ ಕುಳಿತು ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಶಿಕ್ಷಕರೊಬ್ಬರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಲ್ಲಿ ಕಿಂಚಿತ್ ಲೋಪವಾಗದಂತೆ, ವಾಟ್ಸ್‌ಆ್ಯಪ್‌, ಹೈಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಅವಿಸ್ಮರಣೀಯ ಬೀಳ್ಕೊಡುಗೆ ನೀಡಿದರು. ಇದಕ್ಕೆ ವೇದಿಕೆಯಾಗಿದ್ದು ರಾಜ್ಯ ಸಿರಿಗನ್ನಡ ಬಳಗ.

ಈ ಹಿಂದೆಯೂ ಕೂಡ ಈ ಬಳಗ ರಾಜ್ಯದ ಎಲ್ಲೆಡೆಯ ಶಿಕ್ಷಕರನ್ನು ಒಟ್ಟಿಗೆ ಸೇರಿಸಿಕೊಂಡು ಆನ್‌ಲೈನ್‌ನಲ್ಲಿಯೇ ನಡೆಸಿದ್ದ ಶಿಕ್ಷಕರ ದಿನ, ಮಹಿಳಾ ದಿನ ಆಚರಿಸಿದ ಅನುಭವ ಬಳಸಿಕೊಂಡು ತನ್ನ ಬಳಗದ ಸದಸ್ಯರೊಬ್ಬರಿಗೆ ಬೀಳ್ಕೊಡುಗೆ ನೀಡಿತು.

ಮಾ.31ರಂದು ಸೇವಾ ವಯೋನಿವೃತ್ತಿ ಹೊಂದಿದ ಮೈಸೂರಿನ ಕೇರ್ಗಳ್ಳಿ ಸರ್ಕಾರಿ ಪ್ರೌಢಶಾಲೆಯ ಬಿ.ರವೀಶ್‌ಕುಮಾರ್‌ ಕನ್ನಡ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ, ನಾಡಿನ ಉದ್ದಗಲಕ್ಕೂ ವಿಷಯ ಸಂಪದೀಕರಣ ಕಾರ್ಯಾಗಾರಗಳ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಇವರಿಗೆ ಬೀಳ್ಕೊಡುಗೆ ಸಲ್ಲಿಸಲು ಬಳಗದ ಸದಸ್ಯರು ಮಾಡಿಕೊಂಡಿದ್ದ ಅದ್ದೂರಿ ತಯಾರಿ, ಉತ್ಸಾಹಕ್ಕೆ ’ಲಾಕ್‌ಡೌನ್‘ ತಣ್ಣೀರೆರೆಚಿತು.

ಆದರೆ, ಬಳಗದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಈರಪ್ಪ ಮಹಾಲಿಂಗಪುರ, ವೆಂಕಟೇಶ್ ಲಕ್ಷಾಣಿ, ಬಸವರಾಜ ಟಿ.ಎಂ, ಸಿ.ಎಚ್.ನಾಯಕ್, ರಾಘವೇಂದ್ರ, ಶಿವಲಿಂಗ ಹೇಡೆ, ಎಚ್.ಆರ್.ಭಾಲಿ ಇತರರು ಸೇರಿ ರಾಜ್ಯದ ವಿವಿಧ ಶಿಕ್ಷಕರಿಗೆ ಕಾರ್ಯಗಳನ್ನು ಹಂಚಿದರು. ವಾಟ್ಸ್‌ಆ್ಯಪ್‌, ಹೈಕ್ ಗುಂಪುಗಳಲ್ಲಿ ಏಕಕಾಲಕ್ಕೆ ಬೀಳ್ಕೊಡುಗೆ ನಡೆಸಿ, ಎಲ್ಲ ಸದಸ್ಯರು ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಧಾರವಾಡದ ರಾಜಶ್ರೀ ಲಕ್ಷಾಣಿ ಪ್ರಾರ್ಥಿಸಿದರು. ಬೆಂಗಳೂರಿನ ರಾಘವೇಂದ್ರ ಜಿ.ಎನ್. ಸ್ವಾಗತಿಸಿದರೆ, ಕೊಪ್ಪಳದ ಅಳಗವಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಬಿ.ರವೀಶ್‌ಕುಮಾರ್ ನಡೆದು ಬಂದ ದಾರಿಯನ್ನು ಧ್ವನಿವಾಹಿನಿಯಲ್ಲಿ ಬೀದರ್‌ನ ಶಿವಲಿಂಗ ಹೇಡೆ ಪರಿಚಯಿಸುತ್ತಿದ್ದರೆ, ಮೊಬೈಲ್ ಪರದೆಯಲ್ಲಿ ಗದಗದ ಮಲ್ಲಿಕಾರ್ಜುನ ಕುಂಬಾರ ನಿರ್ಮಿಸಿದ ವಿಡಿಯೊ ಕಣ್ಮನ ತಣಿಸಿತು.

ಚಾಮರಾಜನಗರದ ಗಮಕಿ ಶಿವಣ್ಣ ಅವರ ಪಂಚಕ, ಮೈಸೂರಿನ ಅಶ್ವತ್ಥನಾರಾಯಣರ ಕಂದಪದ್ಯ, ಈಶ್ವರ ಕುರಿ, ನಾರಾಯಣ ಭಾಗ್ವತರ ಕವನಗಳು ನಿವೃತ್ತರ ಸಾಧನೆ, ಯಶೋಗಾಥೆ ಬಿಂಬಿಸಿದವು.

ಅತಿಥಿಗಳಾಗಿ ರವಿಕುಮಾರ್ ಎಲ್, ಮೈಸೂರಿನ ಬಾಲಕೃಷ್ಣಯ್ಯ ಮಾತನಾಡಿದರು. ಬಸವರಾಜ ಟಿ.ಎಂ. ನಿರೂಪಿಸಿದರೆ, ಸಿ.ಎಚ್.ನಾಯಕ್ ವಂದಿಸಿದರು. ಪ್ರತಿ ಚಟುವಟಿಕೆಯ ನಂತರ ವಿವಿಧ ಜಿಲ್ಲೆಯ ಸದಸ್ಯರು ಪುಷ್ಪಗುಚ್ಛ, ಚಪ್ಪಾಳೆಯ ಚಿತ್ರಗಳಿಂದ ಮೆಚ್ಚುಗೆಯ ನುಡಿ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

*
ಹೈಕ್‌, ವಾಟ್ಸ್‌ಆ್ಯಪ್ ಗ್ರೂಪುಗಳಲ್ಲಿ ಕನ್ನಡ ಸಂಪನ್ಮೂಲ ಹಂಚಿಕೆಯಾಗುತ್ತಿತ್ತು. ಇದನ್ನೇ ಬಳಸಿಕೊಂಡು 5254 ಶಿಕ್ಷಕರು ಬೀಳ್ಕೊಡುಗೆ ನೀಡಿದೆವು.
-ಈರಣ್ಣ ಮಹಾಲಿಂಗಪುರ, ಸಹ ಶಿಕ್ಷಕರು, ಹೆಬ್ಬಕೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT