ಸೋಮವಾರ, ಸೆಪ್ಟೆಂಬರ್ 28, 2020
27 °C
ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನೆ

ಕೇಂದ್ರದ ವಿರುದ್ಧ ಕಾರ್ಮಿಕ ಸಂಘಟನೆಗಳ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರ–ರಾಜ್ಯ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಸರ್ಕಾರದ ಕಾರ್ಮಿಕ, ರೈತ ವಿರೋಧಿ ನಿಲುವು ಖಂಡಿಸಿ, ಅಸಹಕಾರ ಚಳವಳಿ ನಡೆಸುವುದಾಗಿಯೂ ಪ್ರತಿಭಟನಕಾರರು ಈ ಸಂದರ್ಭ ಎಚ್ಚರಿಸಿದರು.

ಮೂರ್ನಾಲ್ಕು ಶ್ರೀಮಂತರಿಗಾಗಿ ಕಾನೂನು ತಿದ್ದುಪಡಿ ನಡೆದಿದೆ. ಖಾಸಗೀಕರಣಕ್ಕೆ ವೇಗ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ನಿಗದಿತ ಅವಧಿಯ ಕೆಲಸ ಬೇಡವೇ ಬೇಡ. ಗುತ್ತಿಗೆ ಪದ್ಧತಿ ಜಾರಿಗೊಳಿಸುವುದು ದೇಶದ್ರೋಹದ ಕೆಲಸವಿದ್ದಂತೆ. ವಿವಿಧ ಸ್ಕೀಂನಲ್ಲಿ ಕೆಲಸ ಮಾಡುತ್ತಿರುವ ನೌಕರರ ಬೇಡಿಕೆ ಈಡೇರಿಸುವ ಜೊತೆಗೆ, ಅವರನ್ನು ಕಾಯಂಗೊಳಿಸಬೇಕು ಎಂದು ಪ್ರತಿಭಟನನಿರತರು ಆಗ್ರಹಿಸಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಖಾನೆ–ಕಾರ್ಮಿಕ ಕಾಯ್ದೆಯನ್ನು ವಾಪಸ್‌ ಪಡೆಯಬೇಕು. ಕೃಷಿ ಕೂಲಿಕಾರರ ಪರವಾದ ಕಾಯ್ದೆ ಜಾರಿಗೊಳಿಸಬೇಕು. ರೈಲ್ವೆ, ವಿಮಾ ವಲಯದ ಖಾಸಗೀಕರಣ ಬೇಡ. ಸಾರ್ವಜನಿಕ ವಲಯ, ರಕ್ಷಣಾ ವಲಯವನ್ನು ಉಳಿಸಿ. ಬ್ಯಾಂಕ್‌ಗಳ ವಿಲೀನಕ್ಕೆ ತಡೆ ಹಾಕಿ. ಕೇಂದ್ರ–ರಾಜ್ಯ ಸರ್ಕಾರ ಘೋಷಿಸಿದ ಸಹಾಯಧನವನ್ನು ಎಲ್ಲ ವರ್ಗದ ಕಾರ್ಮಿಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಹಾಗೂ ಮಾಲೀಕರ ಪರವಾದ ಕಾಯ್ದೆ ತಿದ್ದುಪಡಿಯಿಂದ ಈಗಾಗಲೇ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತತ್ತರಿಸಿರುವ ಕಾರ್ಮಿಕ ವರ್ಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಹಲವಾರು ಕೈಗಾರಿಕೆಗಳ ಮಾಲೀಕರು ಕೋವಿಡ್‌ ಹೆಸರಿನಲ್ಲಿ ಕಾಯ್ದೆಗಳ ಉಲ್ಲಂಘನೆ, ಸಂಬಳ ಕಡಿತ, ಸವಲತ್ತುಗಳ ನಿರಾಕರಣೆ, ಗುತ್ತಿಗೆ ಕಾರ್ಮಿಕರ ಕೆಲಸ ನಿರಾಕರಣೆ, ಮಾಡಿರುವ ಕೆಲಸಕ್ಕೂ ಸಂಬಳ ನೀಡದೆ ಇರುವ ಅಸಂಖ್ಯಾತ ನಿದರ್ಶನಗಳಿವೆ.

ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ, ಮಾಲೀಕರ ಪರವಾದ ನಿಲುವುಗಳನ್ನು ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕ ವಿರೋಧಿ ಮತ್ತು ಮಾಲೀಕರಿಗೆ ಅನುಕೂಲಕರವಾಗುವ ರೀತಿ ಕಾಯ್ದೆಗಳನ್ನು ಜಾರಿ ಮಾಡಿರುವುದರಿಂದ, ಮಾಲೀಕರಿಗೆ ಕಾರ್ಮಿಕರನ್ನು ಇನ್ನೂ ಹೆಚ್ಚಿನ ಶೋಷಣೆ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಪ್ರತಿಭಟನನಿರತರು ದೂರಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಸಿಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಐಎನ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು