ಭತ್ತಕ್ಕಿಲ್ಲ ಬೆಲೆ; ರೈತರಿಗೆ ನಷ್ಟ

7
ಖರೀದಿ ಕೇಂದ್ರ ತೆರೆಯಲು ಮುಂದಾಗದ ಸರ್ಕಾರ

ಭತ್ತಕ್ಕಿಲ್ಲ ಬೆಲೆ; ರೈತರಿಗೆ ನಷ್ಟ

Published:
Updated:
ಸಂಗ್ರಹ ಚಿತ್ರ

ಮೈಸೂರು: ಜಿಲ್ಲೆಯಲ್ಲಿ ಮುಂಗಾರುಪೂರ್ವದಲ್ಲಿ ಬಿತ್ತನೆ ಮಾಡಿದ್ದ ಭತ್ತ ಇದೀಗ ಕಟಾವಿನ ಹಂತಕ್ಕೆ ಬಂದಿದೆ. ರೈತರು ಬಿರುಸಿನಿಂದ ಕೊಯ್ಲಿನಲ್ಲಿ ತೊಡಗಿದ್ದಾರೆ. ಆದರೆ, ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದ್ದು, ಆತಂಕಗೊಂಡಿದ್ದಾರೆ.

ಸರ್ಕಾರ ಇದುವರೆಗೂ ಬೆಲೆ ನಿಗದಿಗೊಳಿಸಿಲ್ಲ. ಖರೀದಿ ಕೇಂದ್ರಗಳನ್ನು ತೆರೆಯುವ ಪ್ರಯತ್ನ ನಡೆಸಿಲ್ಲ. ಇದರಿಂದ ರೈತರ ಭತ್ತವೆಲ್ಲ ಅಗ್ಗದ ಬೆಲೆಗೆ ಮಧ್ಯವರ್ತಿಗಳ ಪಾಲಾಗುತ್ತಿದೆ.

ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಶನಿವಾರ ಭತ್ತದ ಕನಿಷ್ಠ ಧಾರಣೆ ಕ್ವಿಂಟಲ್‌ಗೆ ₹ 680 ದಾಖಲಾಗಿತ್ತು. ಗರಿಷ್ಠ ಧಾರಣೆ ₹ 1,561ಕ್ಕೆ ನಿಗದಿಯಾಗಿತ್ತು. ಇಷ್ಟು ಕಡಿಮೆ ಪ್ರಮಾಣದ ಬೆಲೆಯು ಹಿಂದಿನ ಮೂರು–ನಾಲ್ಕು ವರ್ಷಗಳಲ್ಲಿ ರೈತರಿಗೆ ಸಿಕ್ಕಿರಲಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.

ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ಒಂದು ದಿನವೂ ಬೆಲೆಯು ಕ್ವಿಂಟಲ್‌ಗೆ ₹ 1 ಸಾವಿರದ ಒಳಗೆ ಇಳಿದಿರಲಿಲ್ಲ. ₹ 1,300ರಿಂದ ₹ 1,800ರವರೆಗೆ ಕನಿಷ್ಠ ಬೆಲೆ ದಾಖಲಾಗಿದ್ದರೆ, ₹ 1,700ರಿಂದ ₹ 2,377ರವರೆಗೆ ಗರಿಷ್ಠ ಬೆಲೆ ದಾಖಲಾಗಿತ್ತು. ಇದಕ್ಕೂ ಹಿಂದಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಕುಸಿತವಾಗಿರಲಿಲ್ಲ.

ಜಿಲ್ಲೆಯಲ್ಲಿ ಹೆಚ್ಚಾಗಿ ಜ್ಯೋತಿ ತಳಿಯ ಭತ್ತವನ್ನೇ ರೈತರು ಬೆಳೆದಿದ್ದಾರೆ. ಇದಕ್ಕೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಖರೀದಿಸಲು ಕೇರಳದಿಂದ ಬಂದಿರುವ ಮಧ್ಯವರ್ತಿಗಳು ಕಡಿಮೆ ಬೆಲೆಗೆ ಭತ್ತವನ್ನು ಕೇಳುತ್ತಿದ್ದಾರೆ.

ಪದೇ ಪದೇ ಜಿನುಗುತ್ತಿರುವ ಮಳೆಗೆ ಹೆದರಿದ ರೈತರು ಸಿಕ್ಕಷ್ಟು ಬೆಲೆಗೆ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. ಬಹಳಷ್ಟು ರೈತರು ಈಗಾಗಲೇ ಮಧ್ಯವರ್ತಿಗಳ ಬಳಿ ಮುಂಗಡವಾಗಿಯೇ ಹಣ ಪಡೆದು ಕಡಿಮೆ ಬೆಲೆಗೆ ನೀಡುತ್ತಿದ್ದಾರೆ. ಸರ್ಕಾರ ಮಾತ್ರ ಇದುವರೆಗೂ ಖರೀದಿ ಕೇಂದ್ರ ತೆರೆಯುವ ಕುರಿತು ಚಿಂತನೆ ನಡೆಸಿಲ್ಲ.

ಕಟಾವಿಗೂ ಮುನ್ನ ಜಿಲ್ಲೆಯ ಹಲವೆಡೆ ಭತ್ತಕ್ಕೆ ಕುತ್ತಿಗೆ ಕೊಳೆ ರೋಗ ಕಾಣಿಸಿಕೊಂಡಿತ್ತು. ಇದರಿಂದ ರೈತರಿಗೆ ಇಳುವರಿ ಕಡಿಮೆಯಾಗಿದೆ. ಏರುತ್ತಿರುವ ಕೂಲಿ, ಕೃಷಿ ಚಟುವಟಿಕೆಗಳ ದರದಿಂದ ಕಂಗಲಾಗಿರುವ ರೈತರು ಸದ್ಯ ಸಿಗುತ್ತಿರುವ ಬೆಲೆಯಿಂದ ನಿರಾಶರಾಗಿದ್ದಾರೆ.

‘ಸರ್ಕಾರವೇ ಒಂದು ಕನಿಷ್ಠ ದರ ನಿಗದಿ ಮಾಡಿದ್ದರೆ ಮಧ್ಯವರ್ತಿಗಳು, ರೈಸ್‌ಮಿಲ್‌ ಮಾಲೀಕರು ಆ ಬೆಲೆಗಿಂತ ಕಡಿಮೆ ಬೆಲೆಗೆ ಭತ್ತವನ್ನು ಕೇಳುತ್ತಿರಲಿಲ್ಲ’ ಎಂದು ಎಚ್.ಡಿ.ಕೋಟೆಯ ರೈತ ಪುಟ್ಟಸ್ವಾಮಿ ಹೇಳುತ್ತಾರೆ.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕಟಾವಿಗೆ ಬಂದಿದ್ದರೆ, ಮೈಸೂರು ತಾಲ್ಲೂಕಿನಲ್ಲಿ 485 ಹೆಕ್ಟೇರ್ ಪ್ರದೇಶ, ತಿ.ನರಸೀಪುರದಲ್ಲಿ 2,150 ಹೆಕ್ಟೇರ್ ಪ್ರದೇಶ ಹಾಗೂ ಕೆ.ಆರ್.ನಗರದಲ್ಲಿ ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಕಟಾವಿಗೆ ಬಂದಿದೆ.

 ಅಲಸಂದೆ ಕಾಯಿ ಕಟ್ಟುವುದು ತಡ– ಕೃಷಿ ಇಲಾಖೆಯಿಂದ ಸಲಹೆ

ಪೂರ್ವಮುಂಗಾರಿನಲ್ಲಿ ಬಿತ್ತನೆಯಾದ ಅಲಸಂದೆ ಬೆಳೆಯು ಸದ್ಯ ಬೆಳವಣಿಗೆ ಹಂತದಲ್ಲಿದೆ. ಮೇ ಮತ್ತು ಜೂನ್‌ ತಿಂಗಳಿನಲ್ಲಿ ಉತ್ತಮವಾದ ಮಳೆ ಬಂದಿರುವುದರಿಂದ ಹಾಗೂ ಈಗ ಬಿಸಿಲು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದ ಅಲಸಂದೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಆದರೆ, ಕಾಯಿ ಕಟ್ಟುವುದು ತಡವಾಗುತ್ತದೆ.

ಈ ಕುರಿತು ಸಲಹೆ ನೀಡಿರುವ ಮೈಸೂರು ತಾಲ್ಲೂಕಿನ ಸಹಾಯಕ ಕೃಷಿನಿರ್ದೇಶಕ ಕೆ.ಪಿ.ವೀರಣ್ಣ, ‘ರೈತರು ಶೇ 2ರ ಡಿಎಪಿ ರಸಗೊಬ್ಬರವನ್ನು ಸಿಂಪಡಿಸುವುದರಿಂದ ಕಾಯಿ ಬೇಗ ಕಟ್ಟುವುದಕ್ಕೆ ಅನುಕೂಲವಾಗುತ್ತದೆ. ಒಂದು ಎಕರೆಗೆ 4 ಕೆ.ಜಿ ಡಿಎಪಿ ರಸಗೊಬ್ಬರವನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಬಟ್ಟೆಯಿಂದ ಸೋಸಿ 200 ಲೀಟರ್ ನೀರಿನಲ್ಲಿ ಬೆರೆಸಿ ಒಂದು ಎಕರೆ ಅಲಸಂದೆ ಬೆಳೆಗೆ ಸಿಂಪರಣೆ ಮಾಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

 ಭತ್ತದ ಉತ್ಪಾದನೆ ಮತ್ತು ಬೆಲೆಯನ್ನು ಪರಾಮರ್ಶೆ ಮಾಡಿ ಮುಕ್ತ ಮಾರುಕಟ್ಟೆಯಲ್ಲಿನ ದರವನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ಶೀಘ್ರದಲ್ಲೇ ಪ್ರಸ್ತಾವ ಕಳುಹಿಸಲಾಗುವುದು.
ಕಾ.ರಾಮೇಶ್ವರಪ್ಪ,‌ ಹಿರಿಯ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !