ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣದಲ್ಲಿ ರಾಜಕೀಯ ಚಟುವಟಿಕೆ ಜೋರು

ಜಿಲ್ಲೆಯ 250 ಗ್ರಾಮ ಪಂಚಾಯಿತಿ, 1,670 ಕ್ಷೇತ್ರಗಳಿಗೆ 2 ಹಂತಗಳಲ್ಲಿ ನಡೆಯುವ ಚುನಾವಣೆ
Last Updated 1 ಡಿಸೆಂಬರ್ 2020, 3:00 IST
ಅಕ್ಷರ ಗಾತ್ರ

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.

ಚುನಾವಣೆಯು ಪಕ್ಷಾತೀತವಾಗಿ ನಡೆಯುವುದಾದರೂ ವಿವಿಧ ಪಕ್ಷಗಳ ಬೆಂಬಲ ಪಡೆಯಲು ಸ್ಪರ್ಧೆ ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ. ತಮ್ಮ ಕಾರ್ಯಕರ್ತರು, ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸಾಮರ್ಥ್ಯ ತೋರಿಸಲು, ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಮೂರೂ ಪಕ್ಷಗಳು ತಯಾರಿ ನಡೆಸುತ್ತಿವೆ.

ಚುನಾವಣಾ ದಿನಾಂಕ ಪ್ರಕಟಣೆವಾಸನೆ ಗ್ರಹಿಸಿದ್ದ ಬಿಜೆಪಿ, ಸೋಮವಾರವೇ ಜಿಲ್ಲೆಯ ಹುಣಸೂರು ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ‘ಗ್ರಾಮ ಸ್ವರಾಜ್ಯ’ ಸಮಾವೇಶ ನಡೆಸಿ ವಿದ್ಯುಕ್ತವಾಗಿ ಪೈಪೋಟಿಗೆ ಸಿದ್ಧತೆ ನಡೆಸಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಸಮಾವೇಶ ನಡೆಸಲು ಸಿದ್ಧವಾಗುತ್ತಿವೆ.

ಜಿಲ್ಲೆಯ 250 ಗ್ರಾಮ ಪಂಚಾಯಿತಿಗಳ 1,670 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 11ರಂದು ಕೊನೆ ದಿನ. 12ರಂದು ಪರಿಶೀಲನೆ ನಡೆಯಲಿದ್ದು,ನಾಮಪತ್ರ ವಾಪಸ್‌ ಪಡೆಯಲು 14 ರಂದು ಕಡೆ ದಿನ. 22ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತದಲ್ಲಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 16ರಂದು ಕೊನೆ ದಿನ. 17ರಂದು ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು 19 ರಂದು ಕಡೆ ದಿನ. 27ರಂದು ಚುನಾವಣೆ ನಡೆಯಲಿದೆ.

30ರಂದು ಮತ ಎಣಿಕೆ: ಎರಡೂ ಹಂತದ ಚುನಾವಣೆಯ ಮತ ಎಣಿಕೆ 30ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಈ ಚುನಾವಣೆಗಾಗಿ ಜಿಲ್ಲೆಯಲ್ಲಿ 251 ಚುನಾವಣಾಧಿಕಾರಿಗಳು ಹಾಗೂ 255 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ತರಬೇತಿ ಕೂಡ ನೀಡಲಾಗಿದೆ.

ಚುನಾವಣಾ ನೀತಿ ಸಂಹಿತೆಯು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ.30ರಿಂದಲೇ ಜಾರಿ ಆಗಿದ್ದು, ಡಿ.31ರವರೆಗೆ ಜಾರಿ ಇರಲಿದೆ. ಇದು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿವಿಧ ಕಾರಣಗಳಿಂದಾಗಿ ಮೈಸೂರು ತಾಲ್ಲೂಕಿನ ಹಿನಕಲ್‌, ಬೆಳವಾಡಿ, ರಮ್ಮನಹಳ್ಳಿ, ಹೊಸಹುಂಡಿ, ಕಡಕೊಳ, ಮರಟಿಕ್ಯಾತನಹಳ್ಳಿ, ಬೋಗಾದಿ, ಹಂಚ್ಯಾ, ಶ್ರೀರಾಂಪುರ, ಕೂರ್ಗಳ್ಳಿ, ದೇವಲಾಪುರ, ಬೀರಿಹುಂಡಿ, ಆಲನಹಳ್ಳಿ, ಇಲವಾಲ ಗ್ರಾಮವನ್ನು ಚುನಾವಣೆಯಿಂದ ಕೈಬಿಡಲಾಗಿದೆ. ನಂಜನಗೂಡಿನ ದೇವಿರಮ್ಮನಹಳ್ಳಿ, ದೇಬೂರುಗ್ರಾಮಗಳನ್ನೂ ಸೇರಿಸಿಲ್ಲ.

ಕಾರ್ಯಕರ್ತರಿಗೆ ಸಹಕಾರ

ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಗಾಗಲೇ ಬೂತ್ ಸಮಿತಿ ಸಭೆ ನಡೆಸಲಾಗಿದೆ. ಕಾರ್ಯಕರ್ತರನ್ನು ಕಣಕ್ಕಿಳಿಸಿ, ಎಲ್ಲಾ ರೀತಿಯ ಸಹಕಾರ ಕೊಡಲಾಗುವುದು. ವಾರ್‌ ರೂಮ್‌ ಕೂಡ ಮಾಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರು ಗೆಲ್ಲಬೇಕು. ಅವರೇ ಮುಂದೆ ನಾಯಕರನ್ನು ಗೆಲ್ಲಿಸಲು ಶ್ರಮಿಸುತ್ತಾರೆ

ಮಂಗಳಾ ಸೋಮಶೇಖರ್‌, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ

ಪ್ರತಿ ತಾಲ್ಲೂಕಲ್ಲಿ ಸಮಾವೇಶ

ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಈಗಾಗಲೇ ಎಲ್ಲಾ ತಾಲ್ಲೂಕುಗಳಲ್ಲಿ ಪ್ರವಾಸ ಮುಗಿಸಿದ್ದೇವೆ. ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ ಬೆಂಬಲ ನೀಡಲಾಗುವುದು. ಡಿ.2ರಂದು ಸಿದ್ದರಾಮಯ್ಯ ಹುಣಸೂರಿಗೆ ಬರಲಿದ್ದು, ಪ್ರಚಾರದ ಸಿದ್ಧತೆ ಆರಂಭವಾಗಲಿದೆ. ಪ್ರತಿ ತಾಲ್ಲೂಕಿನಲ್ಲಿ ಡಿ.5ರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕರ್ತರ ಸಮಾವೇಶ ಮಾಡಲಾಗುವುದು.

ಬಿ.ಜೆ.ವಿಜಯಕುಮಾರ್‌, ಕಾಂಗ್ರೆಸ್‌ ಗ್ರಾಮಾಂತರ ಅಧ್ಯಕ್ಷ

ಕಾರ್ಯಕರ್ತರ ಕಣಕ್ಕಿಳಿಸಿ ಬೆಂಬಲ

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈಗಾಗಲೇ ಒಂದು ಸಭೆ ನಡೆದಿದೆ. ಬೂತ್‌ ಸಮಿತಿ ಮಾಡಿ, ‍ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ ಅವರಿಗೆ ಬೆಂಬಲ ಮಾಡಲಾಗುವುದು. ಹೆಚ್ಚು ಮಂದಿ ಸ್ಪರ್ಧಿಗಳಿದ್ದರೆ ಮನವೊಲಿಸಲಾಗುವುದು. ಕುಮಾರಸ್ವಾಮಿ ಮೂರು ದಿನ ಮೈಸೂರಿನಲ್ಲಿ ಉಳಿದು ಮುಖಂಡರೊಂದಿಗೆ ಚರ್ಚಿಸಲಿದ್ದಾರೆ

ನರಸಿಂಹಸ್ವಾಮಿ, ಜೆಡಿಎಸ್‌ ಗ್ರಾಮಾಂತರ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT