ರಾಜಕಾರಣಿಗಳು ಜನದ್ರೋಹಿಗಳು: ಮಾಜಿ ಸ್ಪೀಕರ್ ಕೆ.ಆರ್‌.ಪೇಟೆ ಕೃಷ್ಣ ವಿಷಾದ

7

ರಾಜಕಾರಣಿಗಳು ಜನದ್ರೋಹಿಗಳು: ಮಾಜಿ ಸ್ಪೀಕರ್ ಕೆ.ಆರ್‌.ಪೇಟೆ ಕೃಷ್ಣ ವಿಷಾದ

Published:
Updated:
Deccan Herald

ಮೈಸೂರು: ಇಂದಿನ ರಾಜಕಾರಣಿಗಳು ಜನದ್ರೋಹಿಗಳಾಗಿದ್ದಾರೆ. ಮತ ಗಳಿಸುವ ಆಸೆ ಸಮಾಜವನ್ನು ರೋಗಗ್ರಸ್ಥಗೊಳಿಸುತ್ತಿದ್ದಾರೆ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ ವಿಷಾದ ವ್ಯಕ್ತಪಡಿಸಿದರು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಅಂಗವಾಗಿ ‘ಗಾಂಧಿ ಮತ್ತು ಪ್ರಗತಿಪರ ಚಿಂತನೆ’ ಕುರಿತ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧಿಯ ಆದರ್ಶಗಳನ್ನು ನಾವು ಎಂದೋ ಮರೆತುಬಿಟ್ಟಿದ್ದೇವೆ. ಇಂದು ನಮಗೆ ನೈತಿಕತೆ, ಕಾನೂನಿನ ಮೇಲೆ ಭಯ ಉಳಿದಿಲ್ಲ. ಹಣ ಮಾಡುವುದೇ ಉದ್ದೇಶವಾಗಿಬಿಟ್ಟಿದೆ. ಹಣದಿಂದ ಏನನ್ನಾದರೂ, ಯಾರನ್ನಾದರೂ ಕೊಂಡುಕೊಳ್ಳಬಹುದು ಎಂಬ ಅಹಂಕಾರ ಏರಿದೆ. ಇದನ್ನು ಜನರಿಗೆ ಕಲಿಸಿಕೊಟ್ಟವರು ರಾಜಕಾರಣಿಗಳು. ಮತವೆಂಬ ಪವಿತ್ರ ಸಾಂವಿಧಾನಿಕ ಹಕ್ಕನ್ನು ಹಣ, ಹೆಂಡದಿಂದ ಅಳೆದು ಅದರ ಪಾವಿತ್ರ್ಯತೆಗೆ ಕಳಂಕ ಹಚ್ಚಿದರು. ತಾವೂ ಕೆಟ್ಟು, ಜನರನ್ನೂ ಕಡೆಸಿ ಜನವಿರೋಧಿಗಳಾದರು ಎಂದು ಬೇಸರದಿಂದ ಹೇಳಿದರು.

ಹಿಂದೆ ಮದ್ಯಪಾನ ಮಾಡುವುದು ಹೇಸಿಗೆ, ಅವಮಾನದ ವಿಚಾರವಾಗಿತ್ತು. ಹಳ್ಳಿಗಳಲ್ಲಿ ಮದ್ಯಪಾನವೆಂಬ ಪರಿಕಲ್ಪನೆಯೇ ಇರಲಿಲ್ಲ. ಆದರೆ, ರಾಜಕಾರಣಿಗಳು ಮತ ಗಳಿಸುವ ಸಲುವಾಗಿ ಹಣ, ಹೆಂಡ ಹಂಚಿ ರುಚಿ ಹತ್ತಿಸಿದರು. ಚುನಾವಣೆ ಮುಗಿದ ಮೇಲೆ ತಾವು ಅಧಿಕಾರದ ಕುರ್ಚಿಯ ಮೇಲೆ ಕುಳಿತು ಸಮಾಜ ವಿಮುಖರಾಗುತ್ತಾರೆ. ಹೆಂಡದ ಚಟ ಹತ್ತಿಸಿಕೊಂಡ ಜನರು ನಾಶವಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಗಾಂಧಿ ರಾಜಕಾರಣಕ್ಕೆ ಇಂದು ಬೆಲೆಯೇ ಇಲ್ಲ. ರಾಜಕೀಯ ಪಕ್ಷಗಳು ನೈತಿಕತೆಯನ್ನು ಮಾರಿಕೊಂಡಿವೆ. ಪಕ್ಷಗಳು ಚುಣಾವಣೆಯಲ್ಲಿ ಟಿಕೆಟ್ ನೀಡುವುದು ಗೆಲ್ಲುವವರಿಗೆ ಮಾತ್ರ ಎಂದು ಹೇಳಿಕೊಳ್ಳುತ್ತವೆ. ಆದರೆ, ಗೆಲ್ಲುವುದು ಹಣ ಹಂಚುವವರು ಮಾತ್ರ. ನೂರಕ್ಕೆ ಶೇ 70ರಷ್ಟು ಜನ ಹಣ ಕೊಟ್ಟವರಿಗೆ ಮತ ಹಾಕುತ್ತಿದ್ದಾರೆ. ಈ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಜನಪರವಾದ ಪ್ರಾಮಾಣಿಕ ವ್ಯಕ್ತಿಗೆ ಮಾತ್ರ ಟಿಕೆಟ್ ನೀಡಲಾಗುವುದು ಎಂದು ರಾಜಕೀಯ ಪಕ್ಷಗಳು ಹೇಳಿದರೆ ಇದು ಸಾಧ್ಯ. ಆದರೆ, ಆ ಪಕ್ಷಗಳ ಮುಖ್ಯಸ್ಥರೇ ಭ್ರಷ್ಟರಾಗಿರುವಾಗ ಇಂತಹ ಬದಲಾವಣೆ ಅವರೇಕೆ ತರುತ್ತಾರೆ? ಎಂದು ಪ್ರಶ್ನಿಸಿದರು.

ಗಾಂಧಿಯನ್ನು ಪ್ರಾಮಾಣಿಕವಾಗಿ ಅರ್ಥ ಮಾಡಿಕೊಂಡಿಲ್ಲದೇ ಇರುವುದು ಇದಕ್ಕೆ ಕಾರಣ. ಶಾಲಾ ಮಟ್ಟದಿಂದಲೇ ಮಕ್ಕಳಿಗೆ ಗಾಂಧಿ ಆದರ್ಶಗಳನ್ನು, ತತ್ವಗಳನ್ನು ಕಲಿಸಬೇಕು. ಅದರಿಂದ ಸಮಾಜದಲ್ಲಿ ಕೊಂಚ ಬದಲಾವಣೆ ನಿರೀಕ್ಷಿಸಬಹುದು. ಇಲ್ಲವಾದಲ್ಲಿ ಮುಂದಿನ ಶತಮಾನದಲ್ಲಿ ಗಾಂಧಿ ಯಾರು ಎಂದು ಕೇಳುವ ಪರಿಸ್ಥಿತಿ ಬರಬಹುದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಧ್ಯಕ್ಷತೆವಹಿಸಿದ್ದರು. ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷರಾದ ಪ್ರೊ.ಆರ್.ಇಂದಿರಾ ಅತಿಥಿಯಾಗಿದ್ದರು. ದೇಸಿರಂಗ ಸಂಸ್ಥೆಯ ಜನಮನ ಕೃಷ್ಣ, ದಿನಮಣಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !