ಭಾನುವಾರ, ಸೆಪ್ಟೆಂಬರ್ 26, 2021
21 °C
ಇತಿಹಾಸ ಪ್ರಸಿದ್ಧ ಕೆರೆಗೆ ನಿರ್ವಹಣೆ ಕೊರತೆ; ನಡಿಗೆ ಪಥ ದುರಸ್ತಿಗೊಳಿಸಲು ಆಗ್ರಹ

ಹುಣಸೂರು: ಕೊಳಚೆ ನೀರು ಸೇರಿ ಮಲಿನಗೊಂಡ ಅರಸನ ಕೆರೆ

ಬಿ.ಆರ್.ಗಣೇಶ್ Updated:

ಅಕ್ಷರ ಗಾತ್ರ : | |

Prajavani

ಪಿರಿಯಾಪಟ್ಟಣ: ಇತಿಹಾಸ ಪ್ರಸಿದ್ಧ ಅರಸನ ಕೆರೆ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಪಟ್ಟಣದ ಕೊಳಚೆ ನೀರು ಸೇರಿ ಜಲಮೂಲ ಮಲಿನಗೊಳ್ಳುತ್ತಿದೆ.

ಪಿರಿಯಾಪಟ್ಟಣವನ್ನು ಆಳಿದ ಪೆರಿಯ ರಾಜ ಎಂಬುವರು ಕೆರೆಯನ್ನು ನಿರ್ಮಿಸಿದ್ದು, 37 ಎಕರೆ ವಿಸ್ತೀರ್ಣ ಹೊಂದಿದೆ. 175 ಎಕರೆ ಅಚ್ಚುಕಟ್ಟು ಪ್ರದೇಶವಿದೆ.

ಕೆ.ವೆಂಕಟೇಶ್ ಶಾಸಕರಾಗಿದ್ದ ಅವಧಿಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ, ₹1.5 ಕೋಟಿ ವೆಚ್ಚದಲ್ಲಿ ನಡಿಗೆ ಪಥ, ಉದ್ಯಾನ ನಿರ್ಮಿಸಲಾಗಿತ್ತು. ಕೆರೆ ಸುತ್ತಲೂ ಸುಮಾರು ಒಂದು ಕಿಲೋ ಮೀಟರ್‌ ದೂರದ ಏರಿ ನಿರ್ಮಿಸಿ, ಒಂದು ಬದಿಯಲ್ಲಿ ತಂತಿಬೇಲಿ ನಿರ್ಮಿಸ
ಲಾಗಿತ್ತು. ಏರಿ ಮೇಲ್ಭಾಗದಲ್ಲಿ ಟೈಲ್ಸ್‌ ಹಾಕಿ ನಡಿಗೆ ಪಥ ನಿರ್ಮಿಸಲಾಗಿತ್ತು.

ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ವಾಯುವಿಹಾರಕ್ಕಾಗಿ ಪಟ್ಟಣದ ನೂರಾರು ಸಾರ್ವಜನಿಕರು ಬರುತ್ತಿದ್ದರು. ಕೆರೆಯ ಮಧ್ಯ ಭಾಗದಲ್ಲಿರುವ ನಡುಗಡ್ಡೆಯಲ್ಲಿ ಸುತ್ತಾಡುತ್ತಾ, ಕಲ್ಲು ಬೆಂಚುಗಳಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಆದರೆ, ಈಗ ನಿರ್ವಹಣೆ ಕೊರತೆಯಿಂದ ಕಳೆ ಗಿಡಗಳು ಬೆಳೆದು ನಡಿಗೆ ಪಥ ಕಾಣಿಸದಂತಾಗಿದೆ. ಟೈಲ್ಸ್‌ಗಳು ಕಿತ್ತು ಬಂದಿದ್ದು, ನಡೆದಾಡಲು ಸಾಧ್ಯವಾಗದಂತಾಗಿದೆ.

ಪಟ್ಟಣದ ನಾಯಕರ ಬೀದಿ, ಕಾವಾಡಗೇರಿ ಬೀದಿ, ಶಿವಪ್ಪ ಬಡಾವಣೆ ಸೇರಿದಂತೆ ಕೆಲ ಪ್ರದೇಶದ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಈ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.

ಬಿ.ಎಂ. ರಸ್ತೆಗೆ ಹೊಂದಿಕೊಂಡಂತೆ ಅರಸನ ಕೆರೆಯ ಏರಿ ಭಾಗದಲ್ಲಿ ಸ್ವಲ್ಪ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ತೆರವು ಕಾರ್ಯಾಚರಣೆ ಮಾಡದಂತೆ ಒತ್ತುವರಿದಾರರು ಸಿವಿಲ್‌ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು.

‘ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡ ಬಳಿಕ, ಕೆರೆಗೆ ಕೊಳಚೆ ನೀರು ಹೋಗುವುದಕ್ಕೆ ತಡೆ ಬೀಳಲಿದೆ. ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಒತ್ತುವರಿ ತೆರವು ಅಭಿಯಾನ: ‘ಕೆರೆಗಳ ಒತ್ತುವರಿ ತೆರವುಗೊಳಿಸಲು ತಾಲ್ಲೂಕು ಪಂಚಾಯಿತಿಯು ಅಭಿಯಾನ ಆರಂಭಿಸಿದೆ. ಭೂಮಾಪನ ಇಲಾಖೆ ಜತೆಗೂಡಿ ಒಂದು ವಾರ ತೆರವು ಕಾರ್ಯ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಭೂಮಾಪನ ಇಲಾಖೆ ಅಧಿಕಾರಿಗಳು ಅನ್ಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಎರಡು ದಿನ ಮಾತ್ರ ತೆರವು ಕಾರ್ಯಾಚರಣೆ ನಡೆಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೋಗನಹಳ್ಳಿ ದೊಡ್ಡ ಕೆರೆಯಲ್ಲಿ 10 ಎಕರೆ, ಸಿಡಿಲು ಮಲ್ಲಿಕಾರ್ಜುನ ಬೆಟ್ಟದ ತಪ್ಪಲಿನಲ್ಲಿರುವ ತೆಪ್ಪದ ಕಟ್ಟೆಯ 30 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿತ್ತು. ಅದನ್ನು ತೆರವುಗೊಳಿಸಿ, ಚರಂಡಿ ನೀರು ಕಟ್ಟೆಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.

***

ಎನ್‌ಆರ್‌ಇಜಿ ಯೋಜನೆಯಡಿ ತಾಲ್ಲೂಕಿನ ಕೆಲವು ಕೆರೆಗಳನ್ನು ₹9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ

–ಸಿ.ಆರ್.ಕೃಷ್ಣಕುಮಾರ್, ತಾ.ಪಂ ಇಒ

***

ತಾಲ್ಲೂಕಿನ ಎಲ್ಲ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು

–ಬಿ.ಜಿ.ಸತೀಶ್, ವಕೀಲ

***

ಕೆರೆ ಒತ್ತುವರಿ ತೆರವುಗೊಳಿಸಿದ ಬಳಿಕವೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು

–ಯದುಗಿರೀಶ್ ಪ್ರಭಾರ ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.