ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳಿಂದ ಹಿಂದೂ ಸಂಸ್ಕೃತಿಗೆ ಆಘಾತ: ವಿಶ್ವೇಶತೀರ್ಥ ಸ್ವಾಮೀಜಿ ವಿಷಾದ

ಬೃಹತ್‌ ಬ್ರಾಹ್ಮಣರ ಸಮಾವೇಶ
Last Updated 15 ಡಿಸೆಂಬರ್ 2018, 13:59 IST
ಅಕ್ಷರ ಗಾತ್ರ

ಮೈಸೂರು: ಬುದ್ಧಿಜೀವಿಗಳ ವರ್ತನೆಯಿಂದಾಗಿ ಹಿಂದೂ ಸಂಸ್ಕೃತಿಗೆ ಆಘಾತವಾಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘವು ಹಮ್ಮಿಕೊಂಡಿರುವ ಬೃಹತ್‌ ಬ್ರಾಹ್ಮಣ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

‘ಹಿಂದೂ ಧರ್ಮಕ್ಕೆ ವಿದೇಶಿಗರಿಂದ ಅತೀವ ಹಾನಿಯಾಗಿದೆ. ಬ್ರಿಟಿಷರು ವಿವೇಕದ ಆಕ್ರಮವನ್ನು ಮಾಡಿದರು. ನಮ್ಮನ್ನು ಹಲವು ವರ್ಷ ಆಳುವ ಮೂಲಕ ನಮ್ಮ ಸ್ವಾತಂತ್ರ್ಯ ಕಸಿದುಕೊಂಡರು ಎನ್ನುವುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಅವರು ಹಾಳು ಮಾಡಿದರು ಎನ್ನಬಹುದು. ಅಲ್ಲದೇ, ಬ್ರಿಟಿಷರ ಸಂಸ್ಕೃತಿಯನ್ನು ಅಳವಡಿಸಿಕೊಂಡ ನಮ್ಮ ಬುದ್ಧಿಜೀವಿಗಳು ಹಿಂದೂ ಸಂಸ್ಕೃತಿಗೆ ಮಾರಕವಾದರು’ ಎಂದು ಬೇಸರದಿಂದ ಹೇಳಿದರು.

‘ವಿದೇಶಿ ಸಂಸ್ಕೃತಿಯಿಂದ ನಮ್ಮತನ ಹಾಳಾಗಿದೆ ಎನ್ನುವುದಕ್ಕಿಂತ, ನಮ್ಮವರಿಂದಲೇ ಹೆಚ್ಚು ಅಪಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ್ದು ಅಗತ್ಯವಾದುದು. ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು’ ಎಂದರು.

ಮೀಸಲಾತಿ ನಿಯಮ ದುರ್ಬಳಕೆ:

ಮೀಸಲಾತಿ ನಿಯಮಗಳನ್ನು ಹಲವು ರಾಜ್ಯದಲ್ಲಿ ಮುರಿದು ಪ್ರತಿಭೆಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

‘ನಾನು ಮೀಸಲಾತಿ ಪದ್ಧತಿಯ ವಿರೋಧಿಯಲ್ಲ. ಹಲವು ಜಾತಿ, ಧರ್ಮಗಳಿಗೆ ಮೀಸಲಾತಿ ನೀಡಬೇಕು. ಆದರೆ, ಪ್ರತಿಭೆಗೆ ಶೇ 50ರಷ್ಟು ಮೀಸಲಾತಿ ಕೊಡಲೇಬೇಕು. ಅದಕ್ಕೂ ಕಸಿದುಕೊಳ್ಳುವುದು ಒಳ್ಳೆಯದಲ್ಲ. ಬ್ರಾಹ್ಮಣರಿಗೆ ಈ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಅವರ ಪ್ರತಿಭೆಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಕಳವಳದಿಂದ ನುಡಿದರು.

ಬ್ರಾಹ್ಮಣರು ಯಾವುದೇ ಕಾರಣಕ್ಕೂ ಅಲ್ಪಸಂಖ್ಯಾತರಲ್ಲ. ಇಡೀ ದೇಶದಲ್ಲಿ ಎಲ್ಲೆಡೆ ಇರುವ ಬ್ರಾಹ್ಮಣರು ಬಹುಸಂಖ್ಯಾತರೇ. ಬ್ರಾಹ್ಮಣರು, ದಲಿತರು ಈ ಸಾಲಿಗೆ ಸೇರುತ್ತಾರೆ. ತಮ್ಮ ಬುದ್ಧಿಶಕ್ತಿಯನ್ನು ಬಳಸಿಕೊಂಡು ಬ್ರಾಹ್ಮಣರು ಅಭಿವೃದ್ಧಿ ಪಥದತ್ತ ಸಾಗಬೇಕು. ಅಂತೆಯೇ, ಬ್ರಾಹ್ಮಣ ಉಳಿದರೆ ಇಡೀ ಲೋಕದ ಉಳಿವು, ಮಾನವಕುಲದ ಉಳಿವು ಎಂಬುದನ್ನು ಸಮಾಜ ಅರ್ಥಮಾಡಿಕೊಳ್ಳಬೇಕು.

ಬ್ರಾಹ್ಮಣರು ತಮ್ಮ ಕಲ್ಯಾಣದ ಕಡೆಗೆ ಮಾತ್ರ ಗಮನ ನೀಡದೇ, ಸಮಾಜದ ಅಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು. ಇದು ಜವಾಬ್ದಾರಿಯೂ ಹೌದು. ಜತೆಗೆ, ಬ್ರಾಹ್ಮಣರ ನೈತಿಕ ಮೌಲ್ಯ ಬದಲಾಗಬಾರದು. ತಮ್ಮ ಆಚಾರ ವಿಚಾರಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.

ಬ್ರಾಹ್ಮಣ ಮಹಿಳೆಯರು ಸಂಸ್ಕೃತಿ ವಿಮುಖ

ಬ್ರಾಹ್ಮಣ ಮಹಿಳೆಯರು ಸಂಸ್ಕೃತಿ ವಿಮುಖರಾಗುತ್ತಿರುವ ಕಾರಣ, ನಮ್ಮ ಪರಂಪರೆ ಕ್ಷೀಣಿಸುತ್ತಿದೆ ಎಂದು ಕುಕ್ಕೆಸುಬ್ರಹ್ಮಣ್ಯ ಸಂಪುಟನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ವಿಷಾದಿಸಿದರು.

‘ಈಚಿನ ದಿನಗಳಲ್ಲಿ ನಮ್ಮ ಹೆಣ್ಣುಮಕ್ಕಳು ಸಂಸ್ಕೃತಿ ಮರೆಯುತ್ತಿದ್ದಾರೆ. ಇದರಿಂದ ಮನೆಗಳಲ್ಲಿ ರೂಪಿತವಾಗುವ ‍ಧಾರ್ಮಿಕ ಪರಂಪರೆಯು ಕ್ಷೀಣಿಸುತ್ತಿದೆ’ ಎಂದರು.

ಬ್ರಾಹ್ಮಣರ ಪ್ರತಿಭೆಗೆ ಸೂಕ್ತವಾದ ಅವಕಾಶ ಸಿಗುತ್ತಿಲ್ಲ ಎನ್ನುವುದು ನಿಜವೇ. ರಾಜಕಾರಣಿಗಳು ಜಾತಿ ರಾಜಕಾರಣ ಮಾಡುತ್ತಿರುವುದರಿಂದ ಹೀಗಾಗಿದೆ. ಆದ್ದರಿಂದ ಸೂಕ್ತವಾದ ಸ್ಥಾನಮಾನಗಳು ಬ್ರಾಹ್ಮಣರಿಗೆ ಸಿಗುತ್ತಿಲ್ಲ. ಅಲ್ಲದೇ, ರಾಜಕಾರಣಕ್ಕೂ ಬ್ರಾಹ್ಮಣರ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಐಎಫ್‌ಎಸ್, ಐಪಿಎಸ್‌, ಐಎಎಸ್‌ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಇದರಿಂದ ಜನಸೇವೆ ಮಾಡುವುದು ಸಾಧ್ಯವಾಗುತ್ತದೆ. ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ ಮಾಡಿ ಹಣ ಮಾಡಿದ್ದು ಸಾಕು. ದೇಶದಾದ್ಯಂತ ಸಮಾಜಕ್ಕಾಗಿ ದುಡಿಯುವ ಹುದ್ದೆಗಳಲ್ಲಿ ಕೂರಬೇಕು ಎಂದರು.

ಬ್ರಾಹ್ಮಣ ಬಹುಜನ ಪ್ರಿಯ

ಬ್ರಾಹ್ಮಣ ಭೋಜನಪ್ರಿಯ ಎನ್ನುವುದು ಸುಳ್ಳು. ಬ್ರಾಹ್ಮಣ ಬಹುಜನ ಪ್ರಿಯ ಎಂದು ಅವಧೂತ ದತ್ತಪೀಠದ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಬ್ರಾಹ್ಮಣ ಬುದ್ಧಿವಂತಿಕೆಯಲ್ಲಿ ಮುಂದು. ಅದನ್ನು ಬಳಸಿಕೊಂಡು ತನ್ನ ಹಾಗೂ ಸಮುದಾಯದ ಅಭಿವೃದ್ಧಿಗೆ ತುಡಿಯಬೇಕು. ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವವನೇ ಬ್ರಾಹ್ಮಣ. ಹಾಗಾಗಿ ಆತ, ಬಹುಜನ ಪ್ರಿಯ ಎಂದರು.

ಬ್ರಾಹ್ಮಣರು ಗಾಯತ್ರಿ ಮಂತ್ರ ಪಠಿಸುವುದನ್ನು ಬಿಡಬಾರದು. ಸೂರ್ಯ ನಮಸ್ಕಾರ ಮಾಡಲೇಬೇಕು. ಆದರೆ, ಕೆಲವು ಬ್ರಾಹ್ಮಣರು ಇದರಿಂದ ವಿಮುಖರಾಗಿದ್ದಾರೆ. ಬ್ರಿಟಿಷರು ನಮ್ಮ ಮೇಲೆ ದಾಸ್ಯದ ಹೊರಿಸಿಹೋದರು. ಅವರ ಪ್ರಭಾವದಿಂದ ಕಳಚಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್‌ ಬ್ರಾಹ್ಮಣರನ್ನೂ ಕಾಯುತ್ತದೆ

ಕಾಂಗ್ರೆಸ್ ಬ್ರಾಹ್ಮಣ ವಿರೋಧಿಯಲ್ಲ. ಯಾವ ಜಾತಿಯ ಮೇಲೂ ಕಾಂಗ್ರೆಸ್ಸಿಗೆ ದ್ವೇಷವಿಲ್ಲ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಕಾಂಗ್ರೆಸ್‌ನಲ್ಲಿ ಆರು ಮಂದಿ ಬ್ರಾಹ್ಮಣರು ಶಾಸಕರಾಗಿದ್ದಾರೆ. ಅಧ್ಯಕ್ಷರ ಸ್ಥಾನವನ್ನು ಬ್ರಾಹ್ಮಣರಿಗೇ ನೀಡಲಾಗಿದೆ. ಈಗಿನ ಮೈತ್ರಿ ಸರ್ಕಾರ ವಿಪ್ರರ ನಿಗಮ ಸ್ಥಾಪಿಸಿದೆ. ₹ 25 ಕೋಟಿಯನ್ನೂ ಮೀಸಲಿಟ್ಟಿದೆ. ಮುಂದಿನ ವರ್ಷಗಳಲ್ಲಿ ಈ ಮೊತ್ತ ಹೆಚ್ಚಲಿದೆ ಎಂದರು.

ಮೀಸಲಾತಿ ನಿಯಮಗಳ ಪಾಲನೆ ರಾಜ್ಯದಲ್ಲಿ ಸರಿಯಾಗಿದೆ. ತಮಿಳುನಾಡಿನಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ತರಲಾಗಿದೆ. ಬ್ರಾಹ್ಮಣರಿಗೆ ಸಂಖ್ಯಾಬಲ ಇಲ್ಲ. ಆದರೆ, ಬುದ್ಧಿಬಲದಿಂದ ಏನನ್ನು ಬೇಕಾದರೂ ಸಾಧಿಸುವ ಶಕ್ತಿ ಇದೆ ಎಂದು ವಿಶ್ಲೇಷಿಸಿದರು.

ಪ್ರಾಥಮಿಕ, ಮಾಧ್ಯಮಿಕ ಶಾಲೆ ಸ್ಥಾಪಿಸಲಿ

ಸೋಸಲೆ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣರು ಪದವಿ, ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವ ಜತೆಗೆ, ಪ್ರಾಥಮಿಕ, ಮಾಧ್ಯಮಿಕ ಶಾಲೆಗಳನ್ನು ತೆರೆಯಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳ ಮನಸನ್ನು ಕಟ್ಟುವ ಹಂತ ಶಾಲೆಗಳಲ್ಲಿ ಮಾತ್ರ ಸಿಗುವಂಥದ್ದು. ಶಾಲಾ ಮಟ್ಟದಲ್ಲಿ ಬ್ರಾಹ್ಮಣರು ಮಕ್ಕಳ ಮನಸನ್ನು ಸರಿಯಾಗಿ ರೂಪಿಸಬೇಕು. ಹಾಗಾಗಿ, ಶಾಲೆಗಳ ಆಡಳಿತ ಬ್ರಾಹ್ಮಣರ ಕೈಯಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಬ್ರಾಹ್ಮಣ ಸಮಾವೇಶದಲ್ಲಿ ಇಂದು

ಶೋಭಾಯಾತ್ರೆ

ಸಾನ್ನಿಧ್ಯ– ಹರಿಹರಪುರ ಮಠದ ಪೀಠಾಧ್ಯಕ್ಷ ಶಂಕರಾಚಾರ್ಯ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಮಂತ್ರಾಲಯ ಪೀಠಾಧಿಪತಿ ಸುಬುದೇಂದ್ರತೀರ್ಥ ಸ್ವಾಮೀಜಿ, ಯದುಗಿರಿ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ. ಸ್ಥಳ: ಶಂಕರಮಠ ಆವರಣ. ಬೆಳಿಗ್ಗೆ 8ರಿಂದ

ಔದ್ಯಮಿಕ ಗೋಷ್ಠಿ

ಉದ್ಘಾಟನೆ– ಉದ್ಯಮಿ ವಿಜಯಶ್ರೀ ಕೇಶವ್. ವಿಷಯ ಮಂಡನೆ– ಜಿಎಸ್‌ಎಸ್‌ ಪ್ರತಿಷ್ಠಾನ ಮುಖ್ಯಸ್ಥ ಶ್ರೀಹರಿ, ಕೌಶಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಲಹೆಗಾರ ಎಸ್.ವಿ.ವೆಂಕಟೇಶ್, ಉದ್ಯಮಿ ಮೇದಿನಿ ಉದಯ್ ಗರುಡಾಚಾರ್. ಉಪನ್ಯಾಸ– ಧಾರ್ಮಿಕ ಚಿಂತಕ ಶ್ರೀಕಂಠಾಚಾರ್. ಅತಿಥಿಗಳು– ಉದ್ಯಮಿಗಳಾದ ಡಾ.ಜಿ.ರವಿ, ಉಮೇಶ್ ಶರ್ಮ, ವಿಪ್ರ ಮುಖಂಡರಾದ ರಾಜಶೇಖರ್ ಜಿ.ರಾವ್, ಸಿ.ಕೆ.ಮೂರ್ತಿ, ಕೆ.ರಾಮಪ್ರಸಾದ್. ಅಧ್ಯಕ್ಷತೆ– ಎಕ್ಸೆಲ್‌ಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯ ಸಿಇಒ ಡಿ.ಸುಧನ್ವ. ಮಧ್ಯಾಹ್ನ 12.30

ಶೈಕ್ಷಣಿಕ ಗೋಷ್ಠಿ

ಉದ್ಘಾಟನೆ– ಎನ್‌ಐಇ ಸೊಸೈಟಿ ನಿರ್ದೇಶಕ ಎಸ್.ಎಲ್.ರಾಮಚಂದ್ರ. ವಿಷಯ ಮಂಡನೆ– ಮಹಾರಾಜ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಸ್.ಮುರಳಿ, ಶಾಸ್ತ್ರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ರಾಧಾಕೃಷ್ಣ, ವ್ಯಕ್ತಿತ್ವ ವಿಕಸನ ತರಬೇತುದಾರ ಆರ್.ಎ.ಚೇತನ್ ರಾಂ. ಅತಿಥಿಗಳು– ಪ್ರೊ.ಎಂ.ಎಸ್.ಕೆ.ನರಹರಿಬಾಬು, ಮಹರ್ಷಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಭವಾನಿ ಶಂಕರ್, ವಿಪ್ರ ಮುಖಂಡರಾದ ಎಂ.ಆರ್.ಶಿವಶಂಕರ್, ಸಿ.ಕೃಷ್ಣ. ಅಧ್ಯಕ್ಷತೆ– ಶಾರದಾವಿಲಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ. ಮಧ್ಯಾಹ್ನ 2.30

ಸಮಾರೋಪ

ಉದ್ಘಾಟನೆ– ಶಾಸಕ ರವಿ ಸುಬ್ರಹ್ಮಣ್ಯ. ಸಮಾರೋಪ ಭಾಷಣ– ಡಾ.ಕೆ.ಪಿ.ಪುತ್ತೂರಾಯ. ಅತಿಥಿಗಳು– ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ವಿಪ್ರ ಮುಖಂಡ ಆರ್.ಲಕ್ಷ್ಮಿಕಾಂತ. ಸಮಾವೇಶದ ಅಧ್ಯಕ್ಷತೆ- ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್. ಅಧ್ಯಕ್ಷತೆ– ವಿಪ್ರ ಮುಖಂಡ ಕೆ.ಎನ್.ವೆಂಕಟನಾರಾಯಣ. ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT