ನಗರದಲ್ಲಿ ಸರಣಿ ಪ್ರತಿಭಟನೆ: ಆಕ್ರೋಶ

ಗುರುವಾರ , ಜೂಲೈ 18, 2019
23 °C
ಹೊರಗುತ್ತಿಗೆ ವಿರುದ್ಧ ಸಿಡಿದೆದ್ದ ನೌಕರರು, ಕೆರೆಗಳಿಗೆ ನೀರು ತುಂಬಿಸಲು ಆಗ್ರಹ

ನಗರದಲ್ಲಿ ಸರಣಿ ಪ್ರತಿಭಟನೆ: ಆಕ್ರೋಶ

Published:
Updated:
Prajavani

ಮೈಸೂರು: ನಗರದಲ್ಲಿ ಮಂಗಳವಾರ 5 ಪ್ರತಿಭಟನೆಗಳು ಪ್ರತ್ಯೇಕವಾಗಿ ನಡೆದವು.

ಹೊರಗುತ್ತಿಗೆ ವಿರುದ್ಧ ನೌಕರರು, ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ರೈತರು, ಉಚಿತ ಬಸ್‌ ಪಾಸ್‌ಗೆ ವಿದ್ಯಾರ್ಥಿಗಳು, ಸಮರ್ಪಕ ಕೂಲಿ ಹೆಚ್ಚಳಕ್ಕಾಗಿ ಕಾರ್ಮಿಕರು, ಗ್ರೀನ್‌ಬಡ್ಸ್‌ ಕಂಪನಿಯಿಂದ ಮೋಸ ಹೋದವರು ಪರಿಹಾರಕ್ಕೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಲ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಹೊರಗುತ್ತಿಗೆ ಚಾಲಕರ ಸಂಘದ ವತಿಯಿಂದ ಹೊರಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಸಾವಿರಕ್ಕೂ ಅಧಿಕ ನೌಕರರು ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

ಜಲಸಂಪನ್ಮೂಲ, ನೀರಾವರಿ, ಕಂದಾಯ, ಅರಣ್ಯ, ಅಬಕಾರಿ, ಆರೋಗ್ಯ, ಹಾಗೂ ಇನ್ನಿತರ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಇದರಲ್ಲಿ ಭಾಗಿಯಾಗಿದ್ದರು. ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ ಜಿಲ್ಲೆಗಳ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿದ್ದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಗುತ್ತಿಗೆ ನೌಕರರನ್ನು ಕಾಯಂ ನೌಕರರನ್ನಾಗಿ ಮಾಡಲಾಗಿದೆ. ಇದೇ ಕ್ರಮವನ್ನು ರಾಜ್ಯದಲ್ಲೂ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಹೊರಗುತ್ತಿಗೆ ನೌಕರರನ್ನು ಅದೇ ಹುದ್ದೆಯ ಕಾಯಂ ನೌಕರರನ್ನಾಗಿ ಪರಿಗಣಿಸಬೇಕು, ಈಗಾಗಲೇ ಕೆಲಸದಿಂದ ಕೈ ಬಿಟ್ಟಿರುವ ಹೊರಗುತ್ತಿಗೆ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ನೇಮಕಾತಿಯಲ್ಲಿ ಹೊರಗುತ್ತಿಗೆ ಪದ್ಧತಿ ಅನುಸರಿಸಬಾರದು. ನೇರ ನೇಮಕಾತಿ ಪದ್ಧತಿ ಅನುಸಾರ ನೇಮಕಾತಿ ನಡೆಯಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಡಾ.ಕೆ.ಎಸ್.ಶರ್ಮ, ಜಿ.ರಮೇಶ್, ಹರೀಶ್, ಸಿದ್ದಯ್ಯ, ಎಸ್.ಎಂ.ಜಯಶೇಖರ್, ಸಿ.ರಾಜಣ್ಣ, ನಾರಾಯಣಗೌಡ, ಎನ್.ಗಂಗಾಧರ, ಪ್ರಕಾಶ್, ಕೆ.ಶಿವಣ್ಣ, ಸ್ವಾಮಿ, ನಾಗರಾಜು, ಸುರೇಶ್‍ಕುಮಾರ್, ಸೋಮಶೇಖರ್, ಅಣ್ಣಪ್ಪ ಇತರರು ಇದ್ದರು.

ಸಮರ್ಪಕ ಕೂಲಿ ಹೆಚ್ಚಳಕ್ಕೆ ಆಗ್ರಹ

ಅನ್ನಭಾಗ್ಯ ಯೋಜನೆಯಲ್ಲಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಮಾಡುವ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಲೋಡಿಂಗ್ ಮತ್ತು ಅನ್‌ಲೋಡಿಂಗ್‌ ಕೂಲಿ ದರವು ₹ 14ರಿಂದ ₹ 16ಕ್ಕೆ ಹುಣಸೂರು, ಗಾವಡಗೆರೆ, ಪಿರಿಯಾಪಟ್ಟಣ, ನಂಜನಗೂಡು ಹಾಗೂ ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಹೆಚ್ಚಾಗಿದೆ. ಆದರೆ, ಎಚ್.ಡಿ.ಕೋಟೆ, ಸರಗೂರು, ತಿ.ನರಸೀಪುರ, ಬನ್ನೂರು, ಮೈಸೂರು ದಕ್ಷಿಣ ಸಿಟಿ ಮತ್ತು ಗ್ರಾಮಾಂತರ, ಮೈಸೂರು ಉತ್ತರ ಸಿಟಿ ಮತ್ತು ಗ್ರಾಮಾಂತರ ತಾಲ್ಲೂಕುಗಳಲ್ಲಿ ದರ ಹೆಚ್ಚಳವಾಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕರಿನಾಯಕ, ಕಾರ್ಯದರ್ಶಿ ಮಹದೇವ, ರಾಜ್ಯ ಘಟಕದ ಅಧ್ಯಕ್ಷ ವರದರಾಜೇಂದ್ರ, ಕುಮಾರ್, ವಿಕ್ರಮ ನಾಯಕ, ಕೃಷ್ಣಪ್ಪ, ಸುರೇಶ್, ನರಸಿಂಹಮೂರ್ತಿ, ಸಿದ್ದರಾಜು, ಬಸವಲಿಂಗು, ಚಲುವರಾಜು ಸೇರಿದಂತೆ ಹಲವರು ಇದ್ದರು.

ಗ್ರೀನ್‌ಬಡ್ಸ್ ಆಗ್ರೊಫಾರ್ಮ್‌ ಕಂಪನಿಯಿಂದ ವಂಚನೆಗೆ ಒಳಗಾದವರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಗ್ರೀನ್‌ಬಡ್ಸ್‌ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಒಂದು ವೇಳೆ 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !