ಮಂಗಳವಾರ, ಮಾರ್ಚ್ 21, 2023
31 °C
ಕರ್ನಾಟಕ ಸೇನಾಪಡೆ ಆಕ್ರೋಶ l ದೇಗುಲ ಉಳಿಸಲು ಆಗ್ರಹ

ಮಹಮ್ಮದ್ ಘಜ್ನಿ ಸಾಲಿಗೆ ಬಿಜೆಪಿ: ಕರ್ನಾಟಕ ಸೇನಾಪಡೆ ಕಾರ್ಯಕರ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಜ್ಯದಲ್ಲಿ ದೇಗುಲಗಳ ಧ್ವಂಸ ಕಾರ್ಯಾಚರಣೆ ಮೂಲಕ ಬಿಜೆಪಿಯು ಮಹಮ್ಮದ್ ಘಜ್ನಿ ಹಾಗೂ ಮಲ್ಲಿಕಾಫರ್ ಸಾಲಿಗೆ ಸೇರುವಂತಾಗಿದೆ’ ಎಂದು ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಆರೋಪಿಸಿದರು.

‘ದೇಗುಲಗಳನ್ನು ಉಳಿಸಿ’ ಘೋಷಣೆಯಡಿ ನಗರದ ನೂರೊಂದು ಗಣಪತಿ ದೇಗುಲದ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸೇನಾಪಡೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್‌ ಲೋಕೇಶ್‌ಗೌಡ, ‘ಬಿಜೆಪಿಯೇ ಸರ್ಕಾರ ನಡೆಸುತ್ತಿರುವಾಗ ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಸದರು ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದ’ ಎಂದು ಲೇವಡಿ ಮಾಡಿದರು.

‘ಹಿಂದುತ್ವ, ಹಿಂದೂಧರ್ಮ ಎಂದು ಹೇಳಿಕೊಂಡು ಮತಗಳನ್ನು ಪಡೆದ ಬಿಜೆಪಿ ಈಗ ಹಿಂದೂ ದೇವಾಲಯಗಳನ್ನೇ ಕೆಡವಲು ಹೊರಟಿರುವುದು ನೋವಿನ ಸಂಗತಿ. ಬೇರೆ ಪಕ್ಷದ ಸರ್ಕಾರ ಹೀಗೆ ಮಾಡಿದ್ದರೆ ಬಿಜೆಪಿ ಮುಖಂಡರು ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಈಗ ಪ್ರತಾಪಸಿಂಹ ಬಿಟ್ಟರೆ ಉಳಿದ ನಾಯಕರು ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅನಧಿಕೃತ ದೇವಾಲಯಗಳನ್ನು ಸಕ್ರಮ ಮಾಡಿ ಸರ್ಕಾರ ಎಲ್ಲ ದೇಗುಲಗಳನ್ನು ಉಳಿಸಬೇಕು. ದೇಗುಲಗಳನ್ನು ತೆರವುಗೊಳಿಸಿದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ಶಾಂತರಾಜೇ ಅರಸ್, ಡಾ.ಮೊಗಣ್ಣಾಚಾರ್, ಎಂ.ವಿಜಯೇಂದ್ರ, ಹರೀಶ್ ನಾಯ್ಡು, ನವೀನ್ ಇದ್ದರು.

16ರಂದು ದೇಗುಲ ತೆರವು ಖಂಡಿಸಿ ಪ್ರತಿಭಟನೆ: ದೇಗುಲ ತೆರವು ಕಾರ್ಯಾಚರಣೆಯನ್ನು ಖಂಡಿಸಿ ಸೆ.16ರ ಗುರುವಾರ ಬೆಳಿಗ್ಗೆ 10ಕ್ಕೆ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ಹಿಂದೂ ಜಾಗರಣ ವೇದಿಕೆಯು ಪ್ರತಿಭಟನೆ ನಡೆಸಲಿದೆ.

‘ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ದೇವಾಲಯವು ಶತಮಾನದಷ್ಟು ಹಳೆಯದಾಗಿದ್ದರೂ, ಏಕಾಏಕಿ ತೆರವು ಮಾಡಲಾಗಿದೆ. 2009ರ ಹಿಂದೆ ಕಟ್ಟಿದ ದೇವಾಲಯಗಳ ತೆರವಿಗೂ ಮುನ್ನ ಅನುಸರಿಸಬೇಕಾದ ಮಾನದಂಡಗಳನ್ನು ತಾಲ್ಲೂಕು ಆಡಳಿತ ಪಾಲಿಸಿಲ್ಲ’ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್‌ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ‘2011ರಲ್ಲಿಯೇ ಸಕ್ರಮ ಪಟ್ಟಿಗೆ ದೇವಾಲಯವನ್ನು ಪರಿಗಣಿಸುವಂತೆ ಅಂದಿನ ತಹಶೀಲ್ದಾರ್‌ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ’ ಎಂದರು.

‘ತೆರವು ಪಟ್ಟಿಯಲ್ಲಿರುವ ದೇವಾಲಯಗಳ ಭಕ್ತರು, ನಿರ್ವಾಹಕರು ಭಾಗವಹಿಸಲಿದ್ದಾರೆ. ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್‌ ಅವರನ್ನು ತನಿಖೆಗೆ ಒಳಪಡಿಸಿ ಅಮಾನತು ಮಾಡಬೇಕು ಎಂದು ಮನವಿ ಸಲ್ಲಿಸಲಾಗುವುದು’ ಎಂದರು. ವೇದಿಕೆಯ ಲೋಹಿತ್ ರಾಜೇ ಅರಸ್‌, ಸುಜನ್‌, ರಾಜನ್‌, ಲಕ್ಷ್ಮಿನಾರಾಯಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು