ಮಂಗಳವಾರ, ನವೆಂಬರ್ 30, 2021
21 °C
ರೈತ ವಿರೋಧಿ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯಲು ಒತ್ತಾಯ

ಶಾಸಕರ ಕಚೇರಿ ಎದುರು ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ರೈತರು ಇಲ್ಲಿನ ಜಲದರ್ಶಿನಿಯಲ್ಲಿರುವ ವಿವಿಧ ಶಾಸಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಸೇರಿದ ಪ್ರತಿಭಟನಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೋವಿಡ್ ಸಂಕಷ್ಟವನ್ನು ದುರ್ಬಳಕೆ ಮಾಡಿಕೊಂಡಿರುವ ಸರ್ಕಾರ ರೈತ ವಿರೋಧಿಯಾದ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದೆ. ಈಗ ಇವುಗಳ ಅಂಗೀಕಾರಕ್ಕಾಗಿ ವಿಧಾನಸಭೆಯ ಅಧಿವೇಶನ ಕರೆದಿದೆ. ಸರ್ಕಾರ ತನ್ನ ಪ್ರಯತ್ನದಿಂದ ಹಿಂದೆ ಸರಿಯಬೇಕು’ ಎಂದು ಒತ್ತಾಯಿಸಿದರು.

ಭೂ ಸುಧಾರಣೆ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಆಘಾತಕಾರಿ. ಕಾರ್ಮಿಕ ಕಾಯ್ದೆಗಳಿಗೂ ತಿದ್ದುಪಡಿ ತರಲಾಗಿದೆ. ಇವೆಲ್ಲವೂ ರೈತರು ಮತ್ತು ಕಾರ್ಮಿಕರನ್ನು ಒಕ್ಕಲೆಬ್ಬಿಸುವ ತಂತ್ರವಾಗಿದೆ ಎಂದು ಹರಿಹಾಯ್ದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಕೇಂದ್ರ ಸರ್ಕಾರವು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲು ಹವಣಿಸುತ್ತಿದೆ. ಇದರಿಂದ ರೈತರಿಗೆ, ಬಡವರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್‌ ಸೌಲಭ್ಯ ನಿಲ್ಲಲಿದೆ’ ಎಂದು ಕಿಡಿಕಾರಿದರು.

ವಿಧಾನಸಭೆಯಲ್ಲಿ ಶಾಸಕರು ಈ ತಿದ್ದುಪಡಿಗಳ ವಿರುದ್ಧ ದನಿ ಎತ್ತಬೇಕು. ಇವುಗಳ ಅಂಗೀಕಾರಕ್ಕೆ ಒಪ್ಪಬಾರದು. ರೈತರ ಉಳಿವಿಗೆ ಶಾಸಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಎಲ್.ನಾಗೇಂದ್ರ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಮುಖಂಡರಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್, ಅತ್ತಹಳ್ಳಿ ದೇವರಾಜ್ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು