ಸೋಮವಾರ, ಡಿಸೆಂಬರ್ 16, 2019
18 °C

ರೈಲ್ವೆ ಖಾಸಗೀಕರಣದ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರೈಲ್ವೆಯ ಖಾಸಗೀಕರಣ ವಿರೋಧಿಸಿ ನಗರದಲ್ಲಿ ಗುರುವಾರ ನೈರುತ್ಯ ರೈಲ್ವೆ ಮಜ್ದೂರ್‌ ಯೂನಿಯನ್‌ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರೈಲ್ವೆ ನಿಲ್ದಾಣದಲ್ಲಿನ ವಿಭಾಗೀಯ ಮುಖ್ಯ ಕಚೇರಿ ಎದುರು ಜಮಾಯಿಸಿದ ನೌಕರರು, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಉತ್ಪಾದನಾ ಘಟಕ, ವರ್ಕ್‌ಶಾಪ್‌ಗಳನ್ನು 100 ದಿನಗಳ ಕಾರ್ಯ ಯೋಜನೆಯಡಿ ಇಂಡಿಯನ್‌ ರೈಲ್ವೆ ರೋಲಿಂಗ್ ಸ್ಟಾಕ್‌ ಕಂಪನಿಗೆ ಹಸ್ತಾಂತರಿಸುವ ಆದೇಶ ಹಿಂಪಡೆಯುವುದು, ಕೆಲವೊಂದು ಆಯ್ದ ಗಾಡಿಗಳನ್ನು ಓಡಿಸುವುದಕ್ಕಾಗಿ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸುವ ಆದೇಶ ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಖಾಸಗೀಕರಣ, ನಿಗಮೀಕರಣ, ಗುತ್ತಿಗೆಗಾರಿಕೆ ಹಾಗೂ ಪ್ರಿಂಟಿಂಗ್ ಪ್ರೆಸ್‌ಗಳನ್ನು ಮುಚ್ಚುವ ಆದೇಶಗಳನ್ನು ರದ್ದುಪಡಿಸುವುದು, 2004ರಿಂದ ನಿಯುಕ್ತರಾದ ಎಲ್ಲ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು, ಹಳೆಯ ಪಿಂಚಣಿ ಪದ್ಧತಿಯನ್ನೇ ಮತ್ತೆ ಜಾರಿಗೆ ತರಬೇಕು ಎಂಬ ಒಕ್ಕೊರಲ ಒತ್ತಾಯ ಕೇಳಿಬಂತು.

ವಿವಿಧ ಬೇಡಿಕೆ ಈಡೇರಿಸುವಂತೆ ಇದೇ ಸಂದರ್ಭ ಹಕ್ಕೊತ್ತಾಯ ಮಂಡಿಸಲಾಯಿತು. ಸಂಘದ ವಿಭಾಗೀಯ ಕಾರ್ಯದರ್ಶಿ ಪಿ.ಶಿವಪ್ರಕಾಶ್‌ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ವಕೀಲರ ಪ್ರತಿಭಟನೆ

ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಖಂಡಿಸಿ, ಮೈಸೂರು ವಕೀಲರ ಸಂಘದ ವತಿಯಿಂದ ಗುರುವಾರ ದಿಢೀರನೇ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ಜಮಾಯಿಸಿದ ವಕೀಲರು, ಕೇಂದ್ರ‌ ಸರ್ಕಾರದ ನೀತಿ ಖಂಡಿಸಿ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಕಲಾಪದಿಂದ ಹೊರ ಬಂದು ಧರಣಿ ನಡೆಸಿದ ವಕೀಲರು, ಕೂಡಲೇ ಈ ನೀತಿಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್‌ಕುಮಾರ್‌, ಉಪಾಧ್ಯಕ್ಷ ಶಿವಣ್ಣೇಗೌಡ, ಕಾರ್ಯದರ್ಶಿ ಬಿ.ಶಿವಣ್ಣ, ಮಾಜಿ ಅಧ್ಯಕ್ಷ ರಾಮಮೂರ್ತಿ, ವಕೀಲರಾದ ಚಂದ್ರಮೌಳಿ, ಚರಣ್‌ರಾಜ್‌, ಲೋಕೇಶ್‌, ರುದ್ರಮೂರ್ತಿ, ಎಂ.ಎಸ್.ಕುಮಾರ್, ಉಮೇಶ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)