ಶುಕ್ರವಾರ, ನವೆಂಬರ್ 15, 2019
21 °C

ಮಳೆಯಲ್ಲೇ ನಡೆದ ತೆಪ್ಪೋತ್ಸವ

Published:
Updated:
Prajavani

ಮೈಸೂರು: ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಮಂಗಳವಾರ ರಾತ್ರಿ ಸುರಿಯುತ್ತಿದ್ದ ಮಳೆಯ ನಡುವೆ ತೆಪ್ಪೋತ್ಸವ ಶ್ರದ್ಧಾ, ಭಕ್ತಿಗಳೊಂದಿಗೆ ನೆರವೇರಿತು.

ದೇವಿಕೆರೆ ಸುತ್ತಮುತ್ತ ಬೆಟ್ಟದಿಂದ ಭೋರ್ಗರೆಯುತ ಹರಿದು ಬರುತ್ತಿದ್ದ ಮಳೆ ನೀರು ಕೆಲಕಾಲ ಆತಂಕ ಸೃಷ್ಟಿಸಿತು. ಇದು ಪೂಜಾಕೈಂಕರ್ಯಗಳಿಗೆ ಅಡ್ಡಿಯಾಯಿತು.

ಸಂಜೆ 6ಕ್ಕೆ ಆರಂಭವಾಗಬೇಕಿದ್ದ ಪೂಜಾವಿಧಿಗಳು ಮಳೆಯಿಂದಾಗಿ ತಡವಾಗಿ ಆರಂಭವಾದವು. ಮಳೆಗೂ ಮುನ್ನ ಬಂದಿದ್ದ ಭಕ್ತಾದಿಗಳು ಮಳೆಯಿಂದ ರಕ್ಷಣೆ ಪಡೆಯಲು ಪರದಾಡಿದರು.

ಮೆಟ್ಟಿಲುಗಳ ಮೇಲಿಂದ ಪ್ರವಾಹದಂತೆ ಹರಿದು ಬರುತ್ತಿದ್ದ ನೀರಿನಲ್ಲೇ ಜನರು ದೇವಿಕೆರೆಯ ಆವರಣಕ್ಕೆ ಬಂದರು. ಮಳೆ ನಿಂತ ಬಳಿಕ ಪೂಜಾಕೈಂಕರ್ಯಗಳು ಆರಂಭವಾದವು.

ಅಡ್ಡಪಲ್ಲಕ್ಕಿಯಲ್ಲಿ ತಂದಿದ್ದ ದೇವಿಯ ಉತ್ಸವಮೂರ್ತಿಗೆ ಮಹಾಮಂಗಳಾರತಿಯ ನಂತರ ವಿದ್ಯುತ್ ಅಲಂಕೃತ ತೆಪ್ಪದಲ್ಲಿ ಕೂರಿಸಿ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.

ತೆಪ್ಪೋತ್ಸವ ಮುಗಿಯುತ್ತಿದ್ದಂತೆ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಯಿತು. ಹೀಗಾಗಿ, ಉತ್ಸವಮೂರ್ತಿಗೆ ಟಾರ್ಪಲ್ ಮುಚ್ಚಿ ದೇಗುಲಕ್ಕೆ ತೆಗೆದುಕೊಂಡು ಹೋಗಲಾಯಿತು.‌

ಇದಕ್ಕೂ ಮುನ್ನ ದೇಗುಲದ ಪ್ರಧಾನ ಅರ್ಚಕ ಶಶಿಶೇಖರದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಮಳೆಯಿಂದಾಗಿ ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು.

ಪ್ರತಿಕ್ರಿಯಿಸಿ (+)