ಮೈಸೂರಿನಲ್ಲಿ ರಾಮ ನಾಮ ಜಪ...

ಸೋಮವಾರ, ಏಪ್ರಿಲ್ 22, 2019
31 °C

ಮೈಸೂರಿನಲ್ಲಿ ರಾಮ ನಾಮ ಜಪ...

Published:
Updated:

ಮೈಸೂರು: ರಾಮನವಮಿ ಅಂಗವಾಗಿ ನಗರದೆಲ್ಲೆಡೆ ರಾಮ ನಾಮ ಜಪ, ಉತ್ಸವ ಹಾಗೂ ಕಾರ್ಯಕ್ರಮಗಳು ಜರುಗುತ್ತವೆ. ಅಂದು ಬೆಳಿಗ್ಗೆಯಿಂದಲೇ ದೇವಾ ಲಯ ಆವರಣಗಳಲ್ಲಿ ಕರ್ಪೂರ, ಗಂಧದ ಘಮಲು ಹರಡುತ್ತದೆ. ನಗರದ ಪ್ರಮುಖ ವೃತ್ತಗಳಲ್ಲಿ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆಯೂ  ಇರುತ್ತದೆ.

ಕೃಷ್ಣಮೂರ್ತಿಪುರಂ ರಾಮಮಂದಿರಲ್ಲಿಯೂ ಈ ಬಾರಿ ರಾಮನವಮಿ ವಿಶೇಷವಿದೆ.

ಕೃಷ್ಣಮೂರ್ತಿಪುರಂನ ರಾಮ ಮಂದಿರದಲ್ಲಿ ಯುಗಾದಿ ಹಬ್ಬದಿಂದಲೇ ಗರ್ಭಶ್ರೀ ರಾಮನವಮಿ ಆರಂಭವಾಗುತ್ತದೆ. ಅಂದಿನಿಂದ ನವಮಿಯವರೆಗೆ ಪ್ರತಿದಿನ ವಿಶೇಷ ಪೂಜೆ, ದ್ವಂದ್ವ ವೀಣೆ, ಭರತನಾಟ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ.

ಬೆಳಿಗ್ಗೆ 6 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬೆಳಿಗ್ಗೆ 9ರಿಂದ ಅಭಿಷೇಕವಿರುತ್ತದೆ. ನಂತರ ಪೂಜಾ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಸಂಜೆ ರಾಮಾಯಣ ಪಾರಾಯಣ ಹಾಗೂ ರಾಮ ಪಟ್ಟಾಭಿಷೇಕ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎನ್ನುತ್ತಾರೆ ಅರ್ಚಕ ಸಂತೋಷ್‌ ಕುಮಾರ್.

ದೇವಸ್ಥಾನದ ಹಿನ್ನೆಲೆ

1920ರಲ್ಲಿ ಮನೆ–ಮನೆಗೆ ತೆರಳಿ ದಕ್ಷಿಣೆ ಸಂಗ್ರಹಿಸಿ ಇಲ್ಲಿ ರಾಮೋತ್ಸವವನ್ನು ಆಯೋಜಿಸಲಾಗುತ್ತಿತ್ತು. ಅಂದಿನ ಜನಪ್ರತಿನಿಧಿಗಳ ಸಹಕಾರದೊಂದಿಗೆ 1944ರಲ್ಲಿ ‘ಮಹಾಜನ ಸಭಾ’ ಸಂಘವನ್ನು ಸ್ಥಾಪಿಸಲಾಯಿತು. ಸಂಘದ ಮೂಲಕ ರಾಮೋತ್ಸವ ಶುರುವಾಯಿತು. ಅದಾದ 20 ವರ್ಷಗಳ ನಂತರ ಕೊಡಗಿನ ಸುಬ್ಬಯ್ಯ ಮತ್ತು ಮುದ್ದವ್ವ ಅವರ ನೆರವಿನಿಂದ ಶ್ರೀರಾಮಮಂದಿರ ಸ್ಥಾಪನೆಯಾಯಿತು. ಆರಂಭದಲ್ಲಿ ಪೂಜಾ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳುತ್ತಿದ್ದ ಸಂಘವು ನಂತರ ಸಂಗೀತ ಕಾರ್ಯಕ್ರಮ ಆಯೋಜಿಸಲು ಆರಂಭಿಸಿತು.

ಅಲ್ಲದೇ, 2005ರಿಂದ ಪ್ರತಿ ತಿಂಗಳ ಪುನರ್ವಸು ನಕ್ಷತ್ರ ದಿನದಂದು ರಾಮನಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತಿದೆ.  ಜತೆಗೆ, ಸಂಘವು ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ 2018ರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಗಾಗ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಅವರಿಗೆ ಗೌರವಧನ, ಪ್ರಶಸ್ತಿ ಪತ್ರಗಳನ್ನು ವಿತರಿಸ ಲಾಗುತ್ತದೆ ಎಂದು ಸಭಾ ಕಾರ್ಯದರ್ಶಿ ಮಾಧುರಾವ್ ವಿವರಿಸಿದರು.

ಸಮುದಾಯ ಭವನ ನಿರ್ಮಾಣ: ರಾಮಮಂದಿರ ಸ್ಥಾಪನೆ ಆದಾಗಿನಿಂದ ಮಹಾಜನ ಸಭಾದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ವಿ.ಇಳೈ ಆಳ್ವಾರ ಸ್ವಾಮೀಜಿ, ಎನ್.ಆರ್.ರಾಮಪ್ರಸಾದ್, ಮಾಧುರಾವ್, ಎಂ.ಜಿ.ಬ್ರಹ್ಮಣ್ಯತೀರ್ಥ, ಬಿ.ಎಸ್.ಶೇಷಾದ್ರಿ, ಎಚ್.ಎನ್.ಅಶ್ವತ್ಥನಾರಯಣ, ವಿ.ಎನ್.ಕೃಷ್ಣ, ಕೆ.ಎನ್.ಅರುಣ್‌, ಸಿ.ವಿ.ವೆಂಕಟೇಶ ಮೂರ್ತಿ ಜಿ.ಆರ್.ಶೇಷಾದ್ರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಸ್ಥಳೀಯ ಅಧಿಕಾರಿಗಳ ಸಹಾಯದಿಂದ ರಾಮಮಂದಿರದ ಪಕ್ಕದಲ್ಲೇ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದಾರೆ. ಇದನ್ನು ಧಾರ್ಮಿಕ ನಾಯಕರು ತಂಗಲು ಹಾಗೂ ವಿವಾಹ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಇದಕ್ಕೆ ಜನಪ್ರತಿನಿಧಿಗಳು ಈಗಾಗಲೇ ₹ 70 ಲಕ್ಷ ನೀಡಿದ್ದಾರೆ. ಇನ್ನೂ ₹ 40 ಲಕ್ಷ ಅಗತ್ಯವಿದೆ.

ಕಾವೇರಿ ಮಾತೆ ವಿಗ್ರಹ

ಕೆಆರ್‌ಎಸ್ ಅಣೆಕಟ್ಟೆ ನಿರ್ಮಿಸಿದ ನಂತರ ಅಲ್ಲಿ ಕಾವೇರಿ ಮಾತೆ ವಿಗ್ರಹವನ್ನು ಸ್ಥಾಪಿಸಲಾಗಿತ್ತು. ನಂತರ ಮೈಸೂರಲ್ಲಿ ಮೊಟ್ಟ ಮೊದಲ ಬಾರಿಗೆ ಈ ರಾಮಮಂದಿರದಲ್ಲೇ ಕಾವೇರಿ ಮಾತೆ ವಿಗ್ರಹವನ್ನು ಸ್ಥಾಪಿಸಲಾಯಿತು ಎಂದು ಹೇಳುತ್ತಾರೆ.

‘2016ರಿಂದ ಇಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಪ್ರತಿ ವರ್ಷ 7 ನದಿ, 7 ಸಮುದ್ರದ ನೀರನ್ನು ತಂದು ಅಭಿಷೇಕ ಮಾಡಲಾಗುತ್ತದೆ. ಜತೆಗೆ, ಕಾವೇರಿ ನದಿಯಲ್ಲಿ ಪ್ರತಿ ವರ್ಷ ತೀರ್ಥೋದ್ಭವದ ನೀರನ್ನು ತಂದು ಇಲ್ಲಿನ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ’ ಎನ್ನುತ್ತಾರೆ ಮನ್ವಂತರ ಸಮೂಹ ಬಳಗದ ಅಧ್ಯಕ್ಷ ವೆಂಕಟರಾಂ ಕಶ್ಯಪ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !