ಶುಕ್ರವಾರ, ಜೂಲೈ 3, 2020
22 °C
ಯುವ ಬ್ರಿಗೇಡ್‌ನಿಂದ ಯೋಜನೆ ಅನುಷ್ಠಾನ

ಕರ್ನಾಟಕ ವೈಭವ: ರೆಲ್ಲೋ ಫ್ಲೆಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಯೋಜನೆಗೆ ಯುವ ಬ್ರಿಗೇಡ್‌ ಮುಂದಾಗಿದ್ದು, ಇದರ ಭಾಗವಾಗಿ ಸೋಮವಾರ ಮೈಸೂರಿನಲ್ಲಿ ‘ರೆಲ್ಲೊ’ ಫ್ಲೆಕ್ಸ್ ಅಳವಡಿಸಲು ಚಾಲನೆ ನೀಡಲಾಯಿತು.

ಕರುನಾಡಿನ ಐತಿಹಾಸಿಕ, ಪೌರಾಣಿಕ, ಸಾಹಿತ್ಯಿಕ, ಪಾರಂಪರಿಕ ಸ್ಥಳಗಳನ್ನು ಗುರುತಿಸುವ ಕೆಲಸವನ್ನು ಯುವ ಬ್ರಿಗೇಡ್ ಕೈಗೊಂಡಿದೆ. ಇಂತಹ ಸ್ಥಳಗಳಲ್ಲಿ ರೆಲ್ಲೊ ಫ್ಲೆಕ್ಸ್ ಅಳವಡಿಸಿ, ಸಂಪೂರ್ಣ ಮಾಹಿತಿಗಳನ್ನೊಂದಿಗೆ ‘ರೆಲ್ಲೊ’ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಬ್ರಿಗೇಡ್ ಮೂಲಗಳು ತಿಳಿಸಿವೆ.

ರಾಷ್ಟ್ರಕವಿ ಕುವೆಂಪು ಮನೆಯ ಮುಂಭಾಗ ರೆಲ್ಲೊ ಫ್ಲೆಕ್ಸ್‌ ಅಳವಡಿಸುವ ಮೂಲಕ ಸೋಮವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ವಿ.ವಿ. ಮೊಹಲ್ಲಾದಲ್ಲಿರುವ ಕುವೆಂಪು ಅವರ ‘ಉದಯ ರವಿ’ ನಿವಾಸದಿಂದಲೇ ಈ ಯೋಜನೆ ಆರಂಭಗೊಂಡಿದ್ದು, ಕುವೆಂಪು ಪುತ್ರಿ ತಾರಿಣಿ, ಅಳಿಯ ಡಾ.ಚಿದಾನಂದಗೌಡ ಯೋಜನೆಗೆ ಚಾಲನೆ ನೀಡಿದರು. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿದ್ದರು.

‘ನಾಡಿನ ಹಲವು ಸ್ಥಳಗಳನ್ನು ಪರಿಚಯಿಸುವ ಕಾರ್ಯವಿದು. ವರ್ತಮಾನದ ವ್ಯಕ್ತಿ ಎಷ್ಟು ಮುಖ್ಯವೋ ? ಹಳೆಯ ವ್ಯಕ್ತಿಗಳು, ಸ್ಥಳಗಳು ಕೂಡ ಅಷ್ಟೇ ಮುಖ್ಯ. ಹಳೆಯದನ್ನು ನೆನಪಿಸಿಕೊಡುವ ಉದ್ದೇಶ ಇದಾಗಿದೆ’ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

‘ಮೈಸೂರಿನಲ್ಲಿ ಅರಮನೆ, ಮೃಗಾಲಯ ಅಷ್ಟೇ ಅಲ್ಲ. ಸಾಕಷ್ಟು ಸ್ಥಳಗಳಿವೆ. ಇಲ್ಲೆಲ್ಲಾ ಕನ್ನಡ ಬಾವುಟದ ಬಣ್ಣಗಳಾದ ಹಳದಿ–ಕೆಂಪು ಬಣ್ಣದ ಫ್ಲೆಕ್ಸ್‌ ಹಾಕಲಾಗುತ್ತೆ. ಸುಧರ್ಮ ಸಂಸ್ಕೃತ ಪತ್ರಿಕೆ ಸೇರಿದಂತೆ, ಹಲವು ಸಾಹಿತಿಗಳ ಮನೆ ಗುರುತಿಸಿ ಫ್ಲೆಕ್ಸ್ ಅಳವಡಿಸಲಾಗುವುದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.