ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು |ಹಣಕಾಸಿನ ನೆರವಿನ ನಿರೀಕ್ಷೆಯಲ್ಲಿ ಗಣೇಶ

ಜನನದಿಂದಲೇ ಗುದದ್ವಾರದ ಸಮಸ್ಯೆ ಎದುರಿಸುತ್ತಿರುವ ಬಾಲಕ; ಸಹಾಯಕ್ಕೆ ಮೊರೆಯಿಟ್ಟ ಪಾಲಕ
Last Updated 24 ಡಿಸೆಂಬರ್ 2019, 15:37 IST
ಅಕ್ಷರ ಗಾತ್ರ

ಮೈಸೂರು: ತಾಯಿ ಗರ್ಭದಿಂದಲೇ ಸಮಸ್ಯೆಯೊಟ್ಟಿಗೆ ಪ್ರಪಂಚ ಪ್ರವೇಶಿಸಿದ ‘ಗಣೇಶ’ನ ವೈದ್ಯಕೀಯ ಚಿಕಿತ್ಸೆಗಾಗಿ, ಪೋಷಕರು ಸಹೃದಯಿಗಳ ಮೊರೆಯೊಕ್ಕಿದ್ದಾರೆ.

‘ಹನ್ನೆರಡರ ಹರೆಯದ ಗಣೇಶ ಜನಿಸಿದ್ದು 2007ರಲ್ಲಿ. ಹುಟ್ಟಿದಾಗಲೇ ಗುದದ್ವಾರ ಮುಚ್ಚಿದ ಸ್ಥಿತಿಯಲ್ಲಿತ್ತು. ವೈದ್ಯರ ಸೂಚನೆಯಂತೆ ಜನಿಸಿದ ಆರನೇ ದಿನಕ್ಕೆ ವಿಧಿಯಿಲ್ಲದೆ ಶಸ್ತ್ರಚಿಕಿತ್ಸೆ ಮಾಡಿಸಿದೆವು. ಶಿಶುವಿನ ಎಡಭಾಗದ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಲ ವಿಸರ್ಜನೆಗೆ ದಾರಿ ಮಾಡಿಕೊಟ್ಟರು.’

‘ನಾಲ್ಕು ವರ್ಷಗಳ ಬಳಿಕ 2011ರಲ್ಲಿ ವಿಜಯಪುರದ ಅದೇ ಆಸ್ಪತ್ರೆಯಲ್ಲಿ ಗುದದ್ವಾರ ತೆರೆಯಲು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರು. ಅಲ್ಲಿಯವರೆಗೂ ಮೂತ್ರದ ಸಮಸ್ಯೆಯಿರಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಗುದದ್ವಾರದಲ್ಲಿ ಮೂತ್ರ ಸೋರಲಾರಂಭಿಸಿತು. ಭಯದಿಂದ ತತ್ತರಿಸಿದೆವು. ಆಸ್ಪತ್ರೆ ಬದಲಿಸಿದೆವು’ ಎಂದು ಬಾಲಕನ ತಂದೆ ರಮೇಶ ಸಾತಪ್ಪ ಸರಸಂಬಿ ತಿಳಿಸಿದರು.

‘ದಿಕ್ಕು ತೋಚದಂತಾದ ಸ್ಥಿತಿ. ಏನು ಮಾಡಬೇಕು ಎಂಬುದೇ ಅರಿಯಲಿಲ್ಲ. ಕೊನೆಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಮಗನನ್ನು ಚಿಕಿತ್ಸೆಗೆ ದಾಖಲಿಸಿದೆವು. 2012ರಲ್ಲಿ ಅಲ್ಲಿನ ವೈದ್ಯರು ಹೊಟ್ಟೆ ಭಾಗದಲ್ಲಿ ಮಲ ವಿಸರ್ಜನೆಗಾಗಿ ಬಿಟ್ಟಿದ್ದ ರಂಧ್ರವನ್ನು ಮುಚ್ಚಿ, ಗುದದ್ವಾರವನ್ನು ಸಂಪೂರ್ಣವಾಗಿ ತೆರೆದರು. ಆದರೆ ಮೂತ್ರ ಸೋರಿಕೆ ಮಾತ್ರ ನಿಲ್ಲಲ್ಲಿಲ್ಲ.’

‘2017ರಲ್ಲಿ ಅನ್ಯ ಮಾರ್ಗವಿಲ್ಲದೇ ಮೂತ್ರ ಸೋರಿಕೆ ತಡೆಗಟ್ಟಲು ಮತ್ತೊಂದು ಶಸ್ತ್ರಚಿಕಿತ್ಸೆಯನ್ನು ಮಗನಿಗೆ ಮಾಡಿಸಿದೆವು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಶೇ 75ರಷ್ಟು ವಾಸಿಯಾಗಿದೆ. ಸಂಪೂರ್ಣ ವಾಸಿಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ₹ 55,000 ವೆಚ್ಚವಾಗಲಿದೆ. ನನ್ನ ಬಳಿ ಬಿಡಿಗಾಸೂ ಇಲ್ಲ’ ಎಂದು ರಮೇಶ ‘ಪ್ರಜಾವಾಣಿ’ ಬಳಿ ತಾವು ಎದುರಿಸುತ್ತಿರುವ ಅಸಹಾಯಕ ಸ್ಥಿತಿ ಬಿಚ್ಚಿಟ್ಟರು.

‘ಮೈಸೂರಿನಲ್ಲೇ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದೆ. ಪತ್ನಿ, ಇಬ್ಬರೂ ಮಕ್ಕಳು ನನ್ನೊಂದಿಗೆ ಇದ್ದರು. ಕೂಲಿಯಲ್ಲೇ ಮಗನ ಸಮಸ್ಯೆ ಪರಿಹಾರಕ್ಕಾಗಿ ಚಿಕಿತ್ಸೆಯನ್ನು ಕೊಡಿಸಿದ್ದೆ. ಆದರೆ ಬೆನ್ನು ನೋವಿನ ಸಮಸ್ಯೆ ವಿಪರೀತ ಕಾಡಿತು. ವಿಧಿಯಿಲ್ಲದೇ ಕೆಲಸ ಬಿಟ್ಟೆ. ಅನಿವಾರ್ಯವಾಗಿ ವಿಜಯಪುರಕ್ಕೆ ಮರಳಿದೆವು. ತಿಂಗಳ ಹಿಂದೆ ಚಿಕಿತ್ಸೆಗಾಗಿಯೇ ಮತ್ತೆ ಮೈಸೂರಿಗೆ ಕುಟುಂಬದೊಂದಿಗೆ ಬಂದಿದ್ದೇನೆ. ಬಾಡಿಗೆ ದುಬಾರಿಯಾಗಿದ್ದರಿಂದ ಕೆ.ಆರ್.ನಗರ ಸನಿಹದ ಅಂತಾಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿರುವೆ’ ಎಂದು ರಮೇಶ ತಮ್ಮ ಸಂಕಷ್ಟ ಹೇಳಿಕೊಂಡರು.

ಸಹಾಯಕ್ಕೆ ಮೊರೆ

ಸಹೃದಯಿಗಳು ಈ ಬ್ಯಾಂಕ್‌ ಖಾತೆಗೆ ಹಣ ಕಳುಹಿಸಬಹುದು. ರಮೇಶ ಸಾತಪ್ಪ ಸರಸಂಬಿ, ಉಳಿತಾಯ ಖಾತೆ ಸಂಖ್ಯೆ: 0601416632, ಐಎಫ್‌ಎಸ್‌ಸಿ ಕೋಡ್‌: ಐಡಿಐಬಿ000K197, ದಿ.ಇಂಡಿಯನ್ ಬ್ಯಾಂಕ್, ಕನಕದಾಸ ನಗರ ಬ್ರಾಂಚ್‌, ಮೈಸೂರು, ಸಂಪರ್ಕ ಸಂಖ್ಯೆ: 8431675829

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT