ಭಾನುವಾರ, ಏಪ್ರಿಲ್ 5, 2020
19 °C
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಹೆಗ್ಗಡಹಳ್ಳಿ ಸರ್ಕಾರಿ ಶಾಲೆ

'ನಿಮ್ಮ ಕಸ ನಿಮಗೆ' ಅಭಿಯಾನದ ಶಾಲೆಗೆ ಸಚಿವರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ತಾಲ್ಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ನಡೆಸಿದ್ದ ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನದ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಾಲೆಗೆ ಮಂಗಳವಾರ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುರಾಷ್ಟ್ರೀಯ ಕಂಪನಿಗಳು ಚಾಕೋಲೆಟ್‌, ಬಿಸ್ಕತ್ತುಗಳನ್ನು ಪ್ಲಾಸ್ಟಿಕ್ ರ‍್ಯಾಪರ್ ಬಳಸಿ ಪ್ಯಾಕ್ ಮಾಡುತ್ತಿರುವುದರಿಂದ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಚಾಕೋಲೆಟ್‌, ಬಿಸ್ಕತ್ತು ತಿನ್ನುವ ಮಕ್ಕಳು ಅದರ ಕವರ್‌ಗಳನ್ನು ಶಾಲೆಯ ಸುತ್ತಮುತ್ತ ಎಸೆಯುತ್ತಿದ್ದಾರೆ. ಇದನ್ನು ಮನಗಂಡ ವಿದ್ಯಾರ್ಥಿಗಳು, ಆ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಿ, ‘ನಿಮ್ಮ ಕಸ ನಿಮಗೆ’ ಎಂಬ ಅಭಿಯಾನದ ಮೂಲಕ ಪ್ಲಾಸ್ಟಿಕ್ ಅನ್ನು ಕಂಪನಿಗಳಿಗೇ ಕಳುಹಿಸಿಕೊಡುವ ಮೂಲಕ ಸಾತ್ವಿಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

‘ಬಹುರಾಷ್ಟ್ರೀಯ ಕಂಪನಿಗಳಿಗೆ ಬುದ್ಧಿ ಹೇಳಿರುವ ಯಾವುದಾದರು ಶಾಲೆ ಇದ್ದರೆ, ಅದು ಹೆಗ್ಗಡಹಳ್ಳಿಯ ಶಾಲೆ. ಇಡೀ ರಾಜ್ಯದಲ್ಲಿ ಈ ರೀತಿಯ ಮತ್ತೊಂದು ಶಾಲೆ ಇಲ್ಲ. ಅಂತಹ ಶಾಲೆಗೆ ನಾನಿಂದು ಬಂದಿದ್ದೇನೆ’ ಎಂದು ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪರಿಸರ ಕಾರ್ಯಕರ್ತೆ ಗ್ರೇತಾ ಥುನ್‌ಬರ್ಗ್‌ ಕುರಿತ ಪುಸ್ತಕವನ್ನು ಸಚಿವರಿಗೆ ನೀಡಿದರು.

ನಿಮ್ಮಲ್ಲಿ ಯಾರು ಗ್ರೇತಾ ಎಂದು ಸಚಿವರು ಕೇಳಿದಾಗ, ಮಕ್ಕಳೆಲ್ಲರೂ ‘ನಾವೆಲ್ಲರೂ’ ಎಂದು ಉತ್ತರಿಸಿದರು.

ಶಾಸಕ ಹರ್ಷವರ್ಧನ್ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಜೀವನದ ಅತ್ಯಂತ ಪ್ರಮುಖ ಪರೀಕ್ಷೆ. ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯಿರಿ. ಪರೀಕ್ಷಾ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

‘ನಿಮ್ಮ ಕಸ ನಿಮಗೆ’ ಅಭಿಯಾನದ 8ನೇ ಕಂತಿನ ಕಸವನ್ನು ಸಚಿವ ಸುರೇಶ್‍ಕುಮಾರ್, ಹರ್ಷವರ್ಧನ್‌ ಮತ್ತು ಮಕ್ಕಳು ಪೋಸ್ಟ್ ಮಾಸ್ಟರ್ ಸುರೇಶ್‍ ಅವರಿಗೆ ಹಸ್ತಾಂತರಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಮುಖ್ಯ ಶಿಕ್ಷಕ ಎ.ಎಂ.ಲಿಂಗರಾಜು ಉಪಸ್ಥಿತರಿದ್ದರು.

‘ಅನ್ಯಾಯದ ವಿರುದ್ಧ ಪ್ರತಿಭಟನೆ ದನಿ ಇರಲಿ’

ಪ್ಲಾಸ್ಟಿಕ್‌ನಿಂದಾಗುವ ಅಪಾಯ ಎಲ್ಲರಿಗೂ ತಿಳಿದಿದೆ. ಆದರೆ, ಅದನ್ನು ಬಿಡಲಿಕ್ಕೆ ಆಗುತ್ತಿಲ್ಲ. ಬಿಡದೆ ಇದ್ದರೆ ಅದು ಭಸ್ಮಾಸುರ ಆಗುತ್ತದೆ. ನಿಮ್ಮ ಭವಿಷ್ಯಕ್ಕಾಗಿ ನಿಮ್ಮ ಹೋರಾಟ ನಿರಂತರವಾಗಿರಲಿ. ಕೇವಲ ಪ್ಲಾಸ್ಟಿಕ್ ವಿರುದ್ಧವಷ್ಟೇ ಅಲ್ಲ, ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ನಮ್ಮ ಪ್ರತಿಭಟನೆಯ ದನಿ ಇರಬೇಕು. ಮುಂದೆ ಪರೀಕ್ಷೆ ಹತ್ತಿರ ಬರುತ್ತಿದೆ. ಚೆನ್ನಾಗಿ ಓದಿ. ಮೊಬೈಲ್‌ನಿಂದ ದೂರವಿರಿ ಎಂದು ಸುರೇಶ್‌ ಕುಮಾರ್‌ ಕಿವಿಮಾತು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು