ಶನಿವಾರ, ಮಾರ್ಚ್ 25, 2023
31 °C
ನಗರದಲ್ಲಿದೆ ಹಣ ದೋಚುವ ವ್ಯವಸ್ಥಿತ ಜಾಲ

ಮೈಸೂರು: ಎಟಿಎಂನಲ್ಲಿ ಸಿಕ್ಕಿತು ‘ಸ್ಕಿಮ್ಮರ್‌’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಟಿಎಂ ಯಂತ್ರಗಳಿಗೆ ‘ಸ್ಕಿಮ್ಮರ್‌’ ಯಂತ್ರಗಳನ್ನು ಅಳವಡಿಸಿ, ಹಣ ದೋಚುವ ವ್ಯವಸ್ಥಿತ ಜಾಲ ನಗರದಲ್ಲಿ ಸಕ್ರಿಯವಾಗಿದೆ. ಶಾರದಾದೇವಿನಗರದ ಕೆನರಾ ಬ್ಯಾಂಕಿನ ಎಟಿಎಂವೊಂದರಲ್ಲಿ ಅಳವಡಿಸಿದ್ದ ‘ಸ್ಕಿಮ್ಮರ್’ ಯಂತ್ರವನ್ನು ಗುರುವಾರ ನಿವೃತ್ತ ಶಿಕ್ಷಕ ನಾರಾಯಣಪ್ಪ ತೆಗೆದು ಪೊಲೀಸರಿಗೆ ನೀಡಿ, ದೂರು ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ಅವರಿಗೆ ಸೆ. 6ರಂದು ಮಂಡ್ಯದ ಎಟಿಎಂನಿಂದ ₹ 5 ಸಾವಿರ ಹಣ ಡ್ರಾ ಮಾಡಿ ವಂಚಿಸಲಾಗಿತ್ತು. ನಂತರ ಇವರು ಸೈಬರ್ ಠಾಣೆಗೆ ದೂರು ನೀಡಿದ್ದರು. ತಮ್ಮ ಎಟಿಎಂ ಬ್ಲಾಕ್ ಮಾಡಿಸಿ, ಹೊಸ ಎಟಿಎಂ ಪಡೆದುಕೊಂಡಿದ್ದರು. ಆಗ ಅವರಿಗೆ ಎಟಿಎಂಗಳಲ್ಲಿ ಅಳವಡಿಸಿರುವ ‘ಸ್ಕಿಮ್ಮರ್’ ಯಂತ್ರಗಳ ಮಾಹಿತಿ ಸಿಕ್ಕಿತು.

ಈ ಘಟನೆಯ ನಂತರ ಅವರು ಹಣ ಪಡೆಯುವಾಗ ಎಟಿಎಂನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಗುರುವಾರ ಶಾರದಾದೇವಿನಗರ ವೃತ್ತದಲ್ಲಿನ ಎಟಿಎಂನಲ್ಲಿ ಹಣ ಪಡೆಯುವಾಗ ಕಾರ್ಡ್ ಹಾಕುವ ಜಾಗವನ್ನು ಸ್ವಲ್ಪ ಅಲುಗಾಡಿಸಿದ್ದಾರೆ. ಆಗ ಅವರ ಕೈಗೆ ‘ಸ್ಕಿಮ್ಮರ್’ ಯಂತ್ರ ಬಂದಿದೆ. ಕೂಡಲೇ ಅವರು ಸೈಬರ್ ಪೊಲೀಸರಿಗೆ ಮೊಬೈಲ್ ಫೋನ್ ಕರೆ ಮಾಡಿ ವಿಷಯ ತಿಳಿಸಿದರು. ಆದರೆ, ಪೊಲೀಸರು ಠಾಣೆಗೆ ಬರುವಂತೆ ಸೂಚಿಸಿದರು.

ಯಂತ್ರದೊಂದಿಗೆ ನಾರಾಯಣಪ್ಪ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರಿಗೆ ನೀಡಿ, ‘ಸ್ಕಿಮ್ಮಿಂಗ್’ ಜಾಲವನ್ನು ನಿಗ್ರಹಿಸಿ, ಅಮಾಯಕರ ಹಣ ಕಳ್ಳರ ಪಾಲಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು. ಜತೆಗೆ, ಈ ಸಂಬಂಧ ಅವರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾರಾಯಣಪ್ಪ ಅವರನ್ನು ‘‍ಪ್ರಜಾವಾಣಿ’ ಸಂ‍ಪರ್ಕಿಸಿದಾಗ ಅವರು, ‘ಎಟಿಎಂನಲ್ಲಿ ಹಣ ಪಡೆಯುವಾಗ ಎಚ್ಚರದಿಂದಿರಬೇಕು. ಭದ್ರತಾ ಸಿಬ್ಬಂದಿ ಇರುವ ಎಟಿಎಂ ಬಳಕೆ ಮಾಡಿದರೆ ಒಳಿತು’ ಎಂದರು.

ಏನಿದು ‘ಸ್ಕಿಮ್ಮಿಂಗ್‌’?: ಎಟಿಎಂ ಯಂತ್ರಗಳ ಕಾರ್ಡ್‌ ಹಾಕುವ ಜಾಗ ಹಾಗೂ ಕೀಪ್ಯಾಡ್‌ನ ಮೇಲೆ ಅದನ್ನೇ ಹೋಲುವ ಸ್ಕಿಮ್ಮರ್ ಯಂತ್ರಗಳನ್ನು ಕಳ್ಳರು ಅಳವಡಿಸಿರುತ್ತಾರೆ. ಕಾರ್ಡ್‌ನಲ್ಲಿನ ದತ್ತಾಂಶ ಹಾಗೂ ಕೀಪ್ಯಾಡ್‌ನ ಮೇಲೆ ನಮೂದಿಸುವ ಪಾಸ್‌ವರ್ಡ್‌ಗಳು ಇಲ್ಲಿ ದಾಖಲಾಗುತ್ತವೆ. ನಂತರ, ವಂಚಕರು ನಕಲಿ ಎಟಿಎಂ ಕಾರ್ಡ್‌ ತಯಾರಿಸಿ, ಹಣ ಡ್ರಾ ಮಾಡಿಕೊಳ್ಳುತ್ತಾರೆ.

ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ
ಮಹದೇವಪುರ ಮುಖ್ಯರಸ್ತೆಯಲ್ಲಿ ನಂಬರ್ ಪ್ಲೇಟ್‌ ಇಲ್ಲದೇ ದ್ವಿಚಕ್ರ ವಾಹನ ಓಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹ 6 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಬೆಂಗಳೂರಿನ ಅತ್ತಿಬೆಲೆ, ದೇವರಜೀವನಹಳ್ಳಿ, ವಿದ್ಯಾರಣ್ಯಪುರಂ, ನರಸಿಂಹರಾಜ, ಉದಯಗಿರಿ, ಮೇಟಗಳ್ಳಿ, ಹೆಬ್ಬಾಳು, ಹುಲ್ಲಹಳ್ಳಿಯಲ್ಲಿ ತಲಾ 1, ಹಾಗೂ ನಂಜನಗೂಡಿನಲ್ಲಿ 2 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಇನ್‌ಸ್ಪೆಕ್ಟರ್ ಜಗದೀಶ್, ಸಿಬ್ಬಂದಿ ಅಸ್ಗರ್‌ಖಾನ್, ಉಮೇಶ್, ರಾಮಸ್ವಾಮಿ, ಸಲೀಂಪಾಷಾ, ಗಣೇಶ್‌, ಆನಂದ್, ಚಿಕ್ಕಣ್ಣ, ಶಿವರಾಜು, ಮೋಹನ್ ಆರಾಧ್ಯ, ಕೆ.ಮಹೇಶ್, ಮಧುಸೂದನ್, ಗೋವಿಂದ, ನರಸಿಂಹರಾಜು, ಚಂದ್ರಶೇಖರ, ಮಮತಾ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.