ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್‌ ಮಿಲಾದ್‌ ಸರಳ ಆಚರಣೆ

ನಗರದಲ್ಲಿ ಮಸೀದಿಗಳಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮ
Last Updated 31 ಅಕ್ಟೋಬರ್ 2020, 4:56 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಮುಸ್ಲಿಮರು ಪ್ರವಾದಿ ಮಹಮ್ಮದ್‌ ಅವರ ಜನ್ಮದಿನ ‘ಈದ್ ಮಿಲಾದ್‌’ಅನ್ನು ಶುಕ್ರವಾರ ಸರಳವಾಗಿ ಆಚರಿಸಿದರು.

ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ಆಚರಣೆ ಈ ಬಾರಿ ಕೋವಿಡ್‌ ಮಾರ್ಗಸೂಚಿಯಂತೆ ಯಾವುದೇ ಅಬ್ಬರವಿಲ್ಲದೆ ನಡೆಯಿತು.

ಮಸೀದಿ, ದರ್ಗಾ ಹಾಗೂ ಇನ್ನಿತರ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೆ ಸರಳವಾಗಿ ಆಚರಿಸುವಂತೆ ವಕ್ಫ್‌ ಇಲಾಖೆ ಸೂಚಿಸಿತ್ತು. ಹಬ್ಬದ ಪ್ರಯುಕ್ತ ನಡೆಸಲಾಗುತ್ತಿದ್ದ ಸಾಮೂಹಿಕ ಮೆರವಣಿಗೆ, ಸಭೆ-ಸಮಾರಂಭಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿತ್ತು.

ಆದ್ದರಿಂದ ಈ ಬಾರಿಯ ಆಚರಣೆ ಮಸೀದಿಗಳಿಗೆ ಮಾತ್ರ ಸೀಮಿತವಾಗಿತ್ತು. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಮೊಹಲ್ಲಾ, ಬಡಾವಣೆ ಹಾಗೂ ಬೀದಿಗಳಲ್ಲಿ ಎಲ್ಲ ವರ್ಷಗಳಂತೆ ಸಡಗರ ಕಂಡುಬರಲಿಲ್ಲ.

ಅಶೋಕ ರಸ್ತೆಯಲ್ಲಿರುವ ಅಜಮ್‌ ಮಸೀದಿಯ ಆಡಳಿತ ಮಂಡಳಿ ವತಿಯಿಂದ ಸಂಜೆ 7 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮೈಸೂರಿನ ಸರ್ಖಾಜಿ ಮೊಹಮ್ಮದ್‌ ಉಸ್ಮಾನ್‌ ಷರೀಫ್‌ ಅವರು ನೇತೃತ್ವ ವಹಿಸಿದ್ದರು.

‘ಈದ್‌ ಮಿಲಾದ್ಅನ್ನು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರಿ ಸಬಾರದು. ಪ್ರವಾದಿ ಅವರು ತಮ್ಮ ಜೀವನದಲ್ಲಿ ಸಾರಿರುವ ಆದರ್ಶ, ಸಂದೇಶಗಳನ್ನು ಅಳವಡಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು’ ಎಂದು ಅವರು ಕರೆ ನೀಡಿದರು.

ಮೌಲಾನಾ ಹಾಫಿಜ್‌ ಖಾರಿ, ಮೌಲಾನಾ ಫಸೀಉಲ್ಲಾ ವಾರ್ಸಿ, ಮೌಲಾನಾ ಅಬ್ದುಲ್ಲಾ ಅಲೀಮೆ ಸುಭಾನಿ ಸಾಹಬ್‌ ಅವರು ಪ್ರವಚನ ನೀಡಿದರು.

ಮುಖಂಡರಾದ ಮಹಮ್ಮದ್‌ ಅನ್ವರ್‌ ಅಹಮದ್, ಮಹಮ್ಮದ್‌ ಮಕ್ಬೂಲ್‌ ಅಹ್ಮದ್‌ ನಿಜಾಮಿ ಒಳ ಗೊಂಡಂತೆ ಹಲವರು ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ವರಿಗೆ ರಾತ್ರಿಯ ಇಶಾ ನಮಾಜ್‌ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಹಿಂದೂ–ಮುಸ್ಲಿಂ ಭಾವೈಕ್ಯತೆ: ಕೃಷ್ಣರಾಜ ಸ್ನೇಹ ಬಳಗ ವತಿಯಿಂದ ಕುವೆಂಪುನಗರದ ಸೌಗಂಧಿಕಾ ಉದ್ಯಾನದಲ್ಲಿ ಈದ್ ಮಿಲಾದ್‌ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದೂ ಮತ್ತು ಮುಸ್ಲಿಮರು ಸಸಿ ನೆಡುವ ಮೂಲಕ ಭಾವೈಕ್ಯತೆ ಮೆರೆದರು.

ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ‘ಶಾಂತಿ, ಸಹಬಾಳ್ವೆ ಎಲ್ಲ ಧರ್ಮಗಳ ತಿರುಳಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಇಂದಿನ ಅವಶ್ಯಕತೆಯಾಗಿದೆ. ಮನುಕುಲದ ಉದ್ಧಾರಕ್ಕಾಗಿಯೇ ಮಹಾನ್ ವ್ಯಕ್ತಿಗಳು ಜನ್ಮ ತಾಳಿದ್ದಾರೆ. ಸಮಾಜವು ದಾರಿ ತಪ್ಪಿದಾಗ ಸರಿ ದಾರಿಗೆ ತರುವ ಯತ್ನ ನಡೆಸಿ ಬಹುತೇಕ ಯಶಸ್ವಿ ಆಗಿದ್ದಾರೆ. ಆದರೆ ಇಂದು ಅವರನ್ನು ಜಾತಿ, ಧರ್ಮಗಳೊಳಗೆ ಕಟ್ಟಿ ಹಾಕುತ್ತಿದ್ದೇವೆ’ ಎಂದು ಹೇಳಿದರು.

ಸಮಾಜ ಸೇವಕ ಎನ್‌.ಎಂ.ನವೀನ್‌ ಕುಮಾರ್, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ , ಅಶೋಕಪುರಂ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ರಾಜೇಶ್, ಸಿದ್ದರಾಜು, ಸಾಧಿಕ್‌ ರೆಹಮಾನ್, ಮೊಹಮ್ಮದ್ ಹ್ಯಾರಿಸ್, ಸೈಯದ್ ಅಬ್ಬಾಸ್ ,ರಫೀಕ್‌ ಅಲಿ, ಹುಸೇನ್, ರಾಜೇಶ್, ಕಿರಣ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT